– ನಿತೀಶ ಡಂಬಳ
ಸಂಸ್ಕೃತ ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ಅನನ್ಯ ಸಾಧನೆ ಮಾಡಿದ ಡಾ. ಜನಾರ್ದನ ಹೆಗಡೆ ಅವರು ತಮ್ಮ 23ನೇ ವಯಸ್ಸಿನಲ್ಲಿ ಸಂಸ್ಕೃತ ಭಾರತಿ ಎಂಬ ಅಖಿಲ ಭಾರತೀಯ ಸಂಘಟನೆ ಸ್ಥಾಪಿಸಿ, 40 ವರ್ಷಗಳಿಂದ ಸಂಸ್ಕೃತ ಕೃಷಿ ಮಾಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಹೊಸದಿಗಂತ ಮಾಧ್ಯಮದೊಂದಿಗೆ ಸಂದರ್ಶನ ನೀಡಿದ ಅವರು, ಸಂಸ್ಕೃತ ಭಾರತಿ ಸಂಘಟನೆ, ಸಂಸ್ಕೃತ ಶಿಕ್ಷಣದ ಕುರಿತು ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಪ್ರ. ಸಂಸ್ಕೃತ ಭಾರತಿಯ ಹುಟ್ಟಿನ ಹಿಂದಿನ ಕಥೆ ಏನು?
ಸಂಸ್ಕೃತ ಭಾರತಿ 1981ರಲ್ಲಿ ಸ್ಥಾಪಿತವಾಯಿತು. ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಚ.ಮೂ. ಕೃಷ್ಣಶಾಸ್ತ್ರಿ ಅವರೊಂದಿಗೆ ಸೇರಿ ಸಂಸ್ಕೃತ ಪತ್ರಿಕೆ ಆರಂಭಿಸಲು ಯೋಚಿಸಿದೆವು. ಅದಕ್ಕೂ ಮೊದಲು ಸಂಸ್ಕೃತ ಪತ್ರಿಕೆ ಓದುಗರನ್ನು ಸೃಷ್ಟಿಸುವ ಅನಿವಾರ್ಯತೆ ಮನಗಂಡು, ಬೆಂಗಳೂರಿನಲ್ಲಿ ಸಂಸ್ಕೃತ ಭಾರತಿ ಸಂಘಟನೆ ಆರಂಭಿಸಿ, ಸಂಸ್ಕೃತ ಸಂಭಾಷಣೆ ಶಿಬಿರಗಳನ್ನು ಆಯೋಜಿಸಿದೆವು. ಕೇವಲ 10 ದಿನಗಳಲ್ಲಿ ಒಬ್ಬ ವ್ಯಕ್ತಿ ಆತ್ಮವಿಶ್ವಾಸದಿಂದ ಸಂಸ್ಕೃತ ಮಾತನಾಡುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿತ್ತು. ಹೀಗೆ ಆರಂಭವಾದ ಸಂಸ್ಕೃತ ಭಾರತಿಗೆ ಈಗ 4 ದಶಕಗಳ ಪ್ರಾಯ.
ಪ್ರ. ಸಂಸ್ಕತ ಭಾರತಿಯ ಸದ್ಯದ ಕಾರ್ಯವ್ಯಾಪ್ತಿ ಎಷ್ಟಿದೆ?
ಸಂಸ್ಕೃತ ಭಾರತಿಯ ಕಾರ್ಯ ದೇಶದ ಎಲ್ಲ ರಾಜ್ಯಗಳಲ್ಲೂ ಇದೆ. ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ಹೆಚ್ಚು ಸಾಕ್ಷರತೆ ಹೊಂದಿದ ಕೇರಳದಲ್ಲಿ ಪಂಚಾಯತಿ ಹಂತದವರೆಗೂ ಕಾರ್ಯವಿದೆ. ಈಶಾನ್ಯ ರಾಜ್ಯಗಳಲ್ಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ.
ಪ್ರ. ಸಂಸ್ಕೃತ ಶಿಕ್ಷಣ ಕೇಂದ್ರಗಳ ಉನ್ನತಿಗೆ ಸಂಸ್ಕೃತ ಭಾರತೀಯ ಕೊಡುಗೆ ಏನು?
ಕರ್ನಾಟಕದಲ್ಲಿ ಕೇವಲ 3 ಸರ್ಕಾರಿ ಸಂಸ್ಕೃತ ಮಹಾವಿದ್ಯಾಲಯಗಳಿದ್ದು, 25 ಖಾಸಗಿ ಶಿಕ್ಷಣ ಕೇಂದ್ರಗಳಿವೆ. ಖಾಸಗಿ ಸಂಸ್ಥೆಗಳಲ್ಲಿ ಸಂಸ್ಕೃತ ಶಿಕ್ಷಣದ ಪೂರೈಕೆ ಉತ್ತಮವಾಗಿದೆ. ಸಂಸ್ಕೃತ ಭಾರತಿಯಿಂದಲೂ ಸಾಕಷ್ಟು ಕಾರ್ಯಕ್ರಮಗಳನ್ನು ವಿದ್ಯಾಸಂಸ್ಥೆಗಳೊಂದಿಗೆ ಸೇರಿ ಮಾಡುತ್ತಿದ್ದೇವೆ.
ಪ್ರ. ವಿದ್ಯಾರ್ಥಿಗಳು ಸಂಸ್ಕೃತವನ್ನು ಸ್ಕೋರಿಂಗ್ ಸಬ್ಜೆಕ್ಟ್ ಎಂದು ತೆಗೆದುಕೊಳ್ಳುತ್ತಾರೆ. ಇದರ ಕುರಿತು ಅಭಿಪ್ರಾಯ?
ಇದರ ಕುರಿತು ಸರ್ಕಾರ ಗಮನಹರಿಸಬೇಕು. ಸಂಸ್ಕೃತ ಕಲಿಸುವ ವ್ಯವಸ್ಥೆ, ಶಿಕ್ಷಕರ ತರಬೇತಿ ಅನಿವಾರ್ಯತೆ ಇದೆ. ಮುಖ್ಯವಾಗಿ ಪ್ರೌಢಶಾಲೆ ಹಂತದಲ್ಲಿ ಪ್ರಥಮ, ದ್ವಿತೀಯ, ತೃತೀಯ ಭಾಷೆ ಎಂಬ ವ್ಯವಸ್ಥೆ ಹೋಗಬೇಕು. ಆಗ ಎಲ್ಲ ಭಾಷೆಗಳ ಸಮಾನ ಅಧ್ಯಯನ ಸಾಧ್ಯ.
ಪ್ರ. ಸಂಸ್ಕೃತ ಪತ್ರಿಕೋದ್ಯಮ ಕಾರ್ಯ ಹೇಗೆ ನಡೆಯುತ್ತಿದೆ?
’ಸಂಭಾಷಣಾ ಸಂದೇಶ’ ಎಂಬ ಮಾಸಪತ್ರಿಕೆಯನ್ನು ನಾವು ಹೊರತರುತ್ತಿದ್ದೇವೆ. ಎಲ್ಲ ಕ್ಷೇತ್ರಗಳ ಸುದ್ದಿ, ಲೇಖನ, ಅಂಕಣ ಒಳಗೊಂಡಿದೆ. ಒಂದು ಲಕ್ಷ ಓದುಗರಿದ್ದಾರೆ ಹಾಗೂ 14 ದೇಶಗಳಿಗೆ ಇ-ಪೇಪರ್ ಆವೃತ್ತಿ ಪ್ರಸರಣವಾಗುತ್ತಿದೆ.
ಪ್ರ. ಸಂಸ್ಕೃತ ಒಂದು ಸಮುದಾಯದ ಭಾಷೆ ಎಂದು ಬಿಂಬಿತಗೊಂಡಿದೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?
ಸಂಸ್ಕೃತ ಇಡೀ ದೇಶದ ಭಾಷೆ. ಮುಖ್ಯವಾಗಿ ಸಂಸ್ಕೃತ ಅಧ್ಯಯನ ಅಸ್ಪೃಶ್ಯತೆ ಹೋಗಲಾಡಿಸಿದೆ. ಸಂಸ್ಕೃತದ ಮೇರು ಸಾಹಿತ್ಯಗಾರರಾದ ಕಾಳಿದಾಸ, ವ್ಯಾಸ, ವಾಲ್ಮೀಕಿ ಇವರ್ಯಾರು ತಥಾಕಥಿತ ಮೇಲ್ಜಾತಿಯವರಲ್ಲ. ಆದರೂ ಅವರ ಕೃತಿಗಳನ್ನು ಎಲ್ಲರೂ ಓದುತ್ತೇವೆ. ಬೆಂಗಳೂರಿನ ವೇದವಿಜ್ಞಾನ ಗುರುಕುಲ ಎಲ್ಲ ಜಾತಿಯವರಿಗೆ ವೇದಾಧ್ಯಯನ ಮಾಡಲು ಅವಕಾಶ ಕಲ್ಪಿಸಿದೆ. ಹೀಗೆ ಸಾಕಷ್ಟು ಉದಾಹರಣೆಗಳಿವೆ.
ಸಂಸ್ಕೃತ ಉಳಿಯಬೇಕಾದರೆ ಆ ಭಾಷೆಯಲ್ಲಿ ಮಾತನಾಡಬೇಕು. ನಮ್ಮ ನಿತ್ಯ ವ್ಯವಹಾರದಲ್ಲಿ ಬಳಸಬೇಕು. ಸಂಸ್ಕೃತ ಮಾತೃಭಾಷೆಯಾಗಬೇಕು. ಇದು ಕೇವಲ ಶಿಕ್ಷಣದಿಂದ ಮಾತ್ರ ಸಾಧ್ಯವಿಲ್ಲ. ಸಮಾಜದ ಸಹಭಾಗಿತ್ವವೂ ಅವಶ್ಯ ಎಂದು ಡಾ. ಜನಾರ್ದನ ಹೆಗಡೆ ಅಭಿಪ್ರಾಯಪಟ್ಟರು.