ದಿಗಂತ ವರದಿ ಹುಬ್ಬಳ್ಳಿ:
ವಿದ್ಯಾರ್ಥಿನಿ ನೇಹ ಹಿರೇಮಠ ಪ್ರಕರಣ ರಾಜ್ಯ ಸರ್ಕಾರ ಸಿಐಡಿಗೆ ನೀಡಿದ್ದು, ತನಿಖೆ ಆರಂಭವಾಗಿದೆ. ಆದಷ್ಟು ಬೇಗ ತಪಿತಸ್ಥರಿಗೆ ಶಿಕ್ಷೆಯಾಗಿ, ನ್ಯಾಯ ಸಿಗಲಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಬಿಡ್ನಾಳದಲ್ಲಿರುವ ನೇಹಾ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ನೀಡಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯ ಸರ್ಕಾರ ಈ ಪ್ರಕರಣ ವಿಚಾರಣೆಗೆ ವಿಶೇಷ ತ್ವರಿತ ನ್ಯಾಯಾಲಯ ಸ್ಥಾಪನೆಗೆ ನಿರ್ಧರಿಸಿದ್ದು, ಆ ಕುರಿತು ಹೈಕೋರ್ಟ‌್‌ಗೆ ಪತ್ರ ಸಲ್ಲಿಸಲಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಿರಂಜನ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿ, ಸಾಂತ್ವನ ಹೇಳಿದ್ದಾರೆ. ನಾನು ಸಹ ಅನಿವಾರ್ಯ ಕಾರಣದಿಂದ ನಿರಂಜನ ಅವರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ನೀಡಲು ಆಗಿರಲಿಲ್ಲ. ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಅವರೇ ವಿವರಿಸಿದ್ದಾರೆ ಎಂದು ತಿಳಿಸಿದರು.
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹಸಚಿವರು ಹೇಳಿದ ಹೇಳಿಕೆ ಮುಗಿದ ಅಧ್ಯಾಯ. ಈಗಾಗಲೇ ಅದನ್ನು ಸರಿಪಡಿಸಲಾಗಿದೆ. ಗೃಹ ಸಚಿವರು ಸಹ ಆ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಸಚಿವ ಪಾಟೀಲ ಹೇಳಿದರು.