March 27, 2026
Friday, March 27, 2026
spot_img

ಕಡಲ ಅಡೆತಡೆ ಮೀರಿ ಗುಜರಾತ್ ತಲುಪಿದ ‘ಜಗ್ ವಸಂತ್’ ನೌಕೆ: ಇಂಧನ ಭದ್ರತೆಯಲ್ಲಿ ಭಾರತಕ್ಕೆ ಗೆಲುವು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಂತಹ ಭೀಕರ ಸಂಘರ್ಷಗಳ ನಡುವೆಯೂ ಭಾರತದ ಇಂಧನ ಪೂರೈಕೆ ಸುರಕ್ಷಿತವಾಗಿ ಮುಂದುವರಿದಿದೆ. ಸುಮಾರು ಒಂದು ತಿಂಗಳ ಕಾಲ ಆತಂಕದ ನಡುವೆ ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿದ್ದ ‘ಜಗ್ ವಸಂತ್’ ಎಂಬ ಬೃಹತ್ ಎಲ್‌ಪಿಜಿ ಹಡಗು ಗುರುವಾರ ತಡರಾತ್ರಿ ಗುಜರಾತ್‌ನ ವಾಡಿನಾರ್ ಬಂದರಿಗೆ ಯಶಸ್ವಿಯಾಗಿ ತಲುಪಿದೆ.

ಇದು 47,600 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಹೊತ್ತು ತಂದಿದ್ದು, ದೇಶದಲ್ಲಿ ಉಂಟಾಗಿದ್ದ ಅನಿಲ ಪೂರೈಕೆಯ ಒತ್ತಡವನ್ನು ತಗ್ಗಿಸಲಿದೆ.

ಸುಮಾರು 45,000 ಮೆಟ್ರಿಕ್ ಟನ್ ಎಲ್‌ಪಿಜಿ ಹೊಂದಿರುವ ‘ಪೈನ್ ಗ್ಯಾಸ್’ ಎಂಬ ಎರಡನೇ ಟ್ಯಾಂಕರ್ ಶೀಘ್ರದಲ್ಲೇ ನವ ಮಂಗಳೂರು ಬಂದರಿಗೆ ಆಗಮಿಸಲಿದೆ. ಈ ಎರಡೂ ಹಡಗುಗಳ ಆಗಮನದಿಂದ ಒಟ್ಟು 92,000 ಮೆಟ್ರಿಕ್ ಟನ್‌ಗೂ ಅಧಿಕ ಎಲ್‌ಪಿಜಿ ಸಂಗ್ರಹವಾಗಲಿದ್ದು, ಇದು ಇಡೀ ದೇಶದ ಒಂದು ದಿನದ ಅಡುಗೆ ಅನಿಲ ಬಳಕೆಗೆ ಸಮನಾಗಿದೆ.

ಕಳೆದ ಹತ್ತು ದಿನಗಳಲ್ಲಿ ಹಾರ್ಮುಜ್ ಜಲಸಂಧಿಯ ಅಪಾಯಕಾರಿ ಹಾದಿಯನ್ನು ದಾಟಿ ಭಾರತಕ್ಕೆ ಬರುತ್ತಿರುವ ನಾಲ್ಕನೇ ಪ್ರಮುಖ ಹಡಗು ಇದಾಗಿದೆ. ಈಗಾಗಲೇ ಶಿವಾಲಿಕ್ ಮತ್ತು ನಂದಾ ದೇವಿ ಎಂಬ ಟ್ಯಾಂಕರ್‌ಗಳು ಕಾಂಡ್ಲಾ ಬಂದರಿಗೆ ಆಗಮಿಸಿವೆ.

ಇತ್ತೀಚೆಗಷ್ಟೇ ಅಪೊಲೋ ಓಷನ್ ನೌಕೆಯು 16,000 ಮೆಟ್ರಿಕ್ ಟನ್ ಅನಿಲದೊಂದಿಗೆ ನವ ಮಂಗಳೂರು ಬಂದರನ್ನು ತಲುಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಬೆಳವಣಿಗೆಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದ ಸಂಘರ್ಷಗಳ ನಡುವೆಯೂ ಭಾರತದ ಮನೆಮನೆಗಳಿಗೆ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗುವ ಭೀತಿ ದೂರಾದಂತಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !