ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್ಥಿಕ ಕುಸಿತದ ಕಾರಣ ನೀಡಿ ಹಿರಿಯ-ಕಿರಿಯರೆಂಬ ಭೇದವಿಲ್ಲದೇ ಸಾವಿರಾರು ಉದ್ಯೋಗಿಗಳನ್ನು ಟೆಕ್ ದೈತ್ಯ ಗೂಗಲ್ ವಜಾಗೊಳಿಸಿರುವ ಸುದ್ದಿಯನ್ನು ನೀವು ಓದಿದ್ದೀರಿ. ಆರ್ಥಿಕ ಹಿಂಜರಿಕೆಯ ಭೀತಿಯಲ್ಲಿ ಕಂಪನಿ ವೆಚ್ಚ ಕಡಿತದ ಕ್ರಮಗಳನ್ನು ಕೈಗೊಂಡಿದ್ದು ಅದರ ಭಾಗಗಳಾಗಿ ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳಿಸಲಾಗಿದೆ. ಈಗ ವೆಚ್ಚ ಕಡಿತದ ಇನ್ನೊಂದು ಭಾಗವಾಹಿ ಕಂಪನಿಯು ಹಿರಿಯ ಕಾರ್ಯ ನಿರ್ವಾಹಕರ ಸಂಬಳಕ್ಕೂ ಕತ್ತರಿ ಹಾಕಲಿದೆ.ಈ ಕುರಿತು ಸ್ವತಃ ಗೂಗಲ್ ಸಿಇಒ ಸುಂದರ್ ಪಿಚ್ಚೈ ಹೇಳಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
“ಹಿರಿಯ ಉಪಾಧ್ಯಕ್ಷರ ಮಟ್ಟಕ್ಕಿಂತ ಮೇಲಿನ ಎಲ್ಲಾ ಪಾತ್ರಗಳು ತಮ್ಮ ವಾರ್ಷಿಕ ಬೋನಸ್ನಲ್ಲಿ ಗಣನೀಯ ಕಡಿತ ಕಾಣಲಿವೆ. ಇನ್ನು ಹಿರಿಯ ಕಾರ್ಯನಿರ್ವಾಹಕರ ಸಂಬಳ ಕಡಿತವು ಕಂಪನಿಯಲ್ಲಿ ಅವರ ಕಾರ್ಯಕ್ಷಮತೆಯ ಆಧಾರದಲ್ಲಿ ನಡೆಯುತ್ತದೆ” ಎಂದು ಸುಂದರ್ ಪಿಚ್ಚೈ ಹೇಳಿದ್ದಾರೆ ಎಂದು ಬಿಸಿನೆಸ್ ಇನ್ಸೈಡರ್ ಉಲ್ಲೇಖಿಸಿದೆ.
ಈ ಹಿಂದೆ ಆಪಲ್ ಸಿಇಒ ಟಿಮ್ ಕುಕ್ ಷೇರುದಾರರ ಒತ್ತಡದಿಂದ ತಮ್ಮ ವೇತನದಲ್ಲಿ 40ಶೇಕಡಾ ಕಡಿತವನ್ನು ಘೋಷಿಸಿದ್ದರು, ಇದಲ್ಲದೇ ಕಳೆದ ವಾರ, ಜೆಪಿ ಮೋರ್ಗಾನ್ ಚೇಸ್ ಸಿಇಒ ಜೇಮೀ ಡಿಮನ್ ಅವರ ಸಂಬಳಕ್ಕೂ ಕತ್ತರಿ ಹಾಕುತ್ತಿರುವುದಾಗಿ ಹೇಳಿತ್ತು.ಗೂಗಲ್ ನ ಸಂಬಳ ಕಡಿತದ ಘೋಷಣೆಯು ಈ ಸಾಲಿಗೆ ಇತ್ತೀಚಿನ ಸೇರ್ಪಡೆಯಾಗಿದೆ.