Monday, October 2, 2023

Latest Posts

‘ದ ಕಾಶ್ಮೀರ್ ಫೈಲ್ಸ್’ ಚಿತ್ರ ನೋಡಿದ ಮೇಲೆ ಆಗಬೇಕಿರುವುದೇನು? ಖ್ಯಾತ ನ್ಯಾಯವಾದಿ ಸಾಯಿ ದೀಪಕ್ ವಿಶ್ಲೇಷಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ದೇಶದ ಹೊಸ ತಲೆಮಾರಿನ ಪ್ರಖರ ನ್ಯಾಯವಾದಿಗಳಲ್ಲೊಬ್ಬರಾದ ಜೆ ಸಾಯಿ ದೀಪಕ್, ‘ದ ಕಾಶ್ಮೀರ್ ಫೈಲ್ಸ್’ ಚಿತ್ರ ನೋಡಿದ ನಂತರ ಟ್ವಿಟ್ಟರಿನ ಸರಣಿ ಟ್ವೀಟುಗಳ ಮೂಲಕ ಈ ಚಿತ್ರ ಎಂಥ ಆಂದೋಲನವನ್ನು ಹುಟ್ಟುಹಾಕಬೇಕಿದೆ ಎಂಬುದರ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ. ಚಿತ್ರವನ್ನು ಅದಾಗಲೇ ಬಹು ಮಹತ್ವದ, ಸತ್ಯ ಅನಾವರಣಗೊಳಿಸುವ ಕೃತಿ ಎಂದು ಪ್ರಶಂಸಿಸಿರುವ ಸಾಯಿ ದೀಪಕ್ ತಮ್ಮ ಟ್ವಿಟ್ಟರಿನಲ್ಲಿ ಚರ್ಚಿಸಿರುವ ಸಂಗತಿಗಳು ಇಲ್ಲಿವೆ.

  1. ‘ದ ಕಾಶ್ಮೀರ್ ಫೈಲ್ಸ್’ ಚಿತ್ರ ಬಿಡುಗಡೆಯಾದಾಗಿನಿಂದ ಜನರು ಸುಪ್ರೀಕೋರ್ಟ್ ಬಗ್ಗೆ ಭಾರಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕಾಶ್ಮೀರಿ ಪಂಡಿತರ ನರಮೇಧದ ವಿಚಾರವನ್ನು ಸ್ವಯಂಪ್ರೇರಿತವಾಗಿ ವಿಚಾರಣೆ ಮಾಡುವುದಕ್ಕೆ ಅದು ಸಮಯದ ಕೊರತೆ ಮತ್ತು ಸಾಧುವಲ್ಲದ ಇನ್ನಿತರ ಕಾರಣಗಳನ್ನು ಕೊಟ್ಟಿದ್ದರ ಬಗ್ಗೆ ಆಕ್ರೋಶವಿದೆ.
  2. ಬಹಳಷ್ಟು ಸಂದರ್ಭಗಳಲ್ಲಿ ಸುಪ್ರೀಂಕೋರ್ಟ್ ತುಂಬ ಕಡಿಮೆ ಪ್ರಾಮುಖ್ಯದ ಹಾಗೂ ಕೆಲವೊಂದು ಢೋಂಗಿ ಪ್ರಕರಣಗಳನ್ನು ಸಹ ಸ್ವಯಂಪ್ರೇರಿತವಾಗಿ ಕೈಗೋತ್ತಿಕೊಳ್ಳುವ ಉದಾಹರಣೆಗಳಿರುವುದರಿಂದ, ಸುಪ್ರಿಂಕೋರ್ಟ್ ಎಂಬ ಸಂಸ್ಥೆ ತಾನೇಕೆ ಕಾಶ್ಮೀರಿ ಪಂಡಿತರ ನರಮೇಧದ ಬಗ್ಗೆ ದಾಖಲೆಗಳಿದ್ದಾಗಿಯೂ ಅದನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಳ್ಳಲಿಲ್ಲ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು.
  3. ಇಷ್ಟು ಹೇಳಿದ ನಂತರ, ಇದಕ್ಕೆ ಕೆಲವು ಪರ್ಯಾಯಗಳಿವೆ ಎಂಬುದನ್ನೂ ಗಮನಿಸಬೇಕಾಗುತ್ತದೆ. ‘ದ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ತೆರಿಗೆ ವಿನಾಯತಿ ಇತ್ಯಾದಿಗಳ ಮೂಲಕ ಪ್ರೋತ್ಸಾಹಿಸುವುದರ ಜತೆಗೆ, ಕೇಂದ್ರ ಸರ್ಕಾರವು ಕಾಶ್ಮೀರದ ವಿಚಾರದಲ್ಲಿ ಸತ್ಯ ಮತ್ತು ಮರು ಸಮನ್ವಯ ಸ್ಥಾಪನೆಗೆ ನ್ಯಾಯಮಂಡಳಿಯನ್ನು ರಚಿಸಬಹುದಾದ ಅಧಿಕಾರ ಹೊಂದಿದೆ. ಇದರಲ್ಲಿ ಸಂತ್ರಸ್ತರಾದವರ ಕಥಾನಕವನ್ನು ಸಾರ್ವಜನಿಕವಾಗಿ ಕೇಳುವ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಬಹುದು.
  4. ಈ ಆಲಿಕೆಯನ್ನು ನೇರಪ್ರಸಾರ ಮಾಡುವ ಮೂಲಕ ಇತಿಹಾಸದ ಸತ್ಯ ಮತ್ತು ತಪ್ಪೊಪ್ಪಿಗೆಗಳಿಗೆ ಅವಕಾಶ ಕೊಟ್ಟಂತಾಗುತ್ತದೆ. ಚಿತ್ರವು ಅದಾಗಲೇ ಚರ್ಚೆ ಹುಟ್ಟುಹಾಕಿರುವುದರಿಂದ ಕಾಶ್ಮೀರಿ ಪಂಡಿತರ ಪ್ರಕರಣವನ್ನು ಒಂದು ಮಾದರಿ ಯೋಜನೆಯಾಗಿ ಕೈಗೆತ್ತಿಕೊಳ್ಳಬಹುದು.
  5. ಸುಪ್ರೀಂಕೋರ್ಟ್ ಅಸಾಮರ್ಥ್ಯದ ಬಗ್ಗೆ ನಾವು ಟೀಕೆ ಮಾಡುತ್ತಿರಬಹುದಾದರೂ, ಈ ವಿಷಯದಲ್ಲಿ ಈಗ ಸರ್ಕಾರವೇನಾದರೂ ಟ್ರಿಬ್ಯುನಲ್ ಮಾಡಿದರೆ ಅದನ್ನು ತಡೆಯುವವರು ಯಾರೂ ಇಲ್ಲ. ಸುಪ್ರೀಂಕೋರ್ಟ್ ಪದೇ ಪದೆ ಹೇಳಿಕೊಂಡು ಬಂದಿರುವ ಮಾನವ ಹಕ್ಕುಗಳ ಆಚರಣೆಯೂ ಆಗುತ್ತದಿದು.
  6. ವಿದೇಶಗಳಲ್ಲಿ ಅದಾಗಲೇ ಬಹಳಷ್ಟು ಜನ ಕಾಶ್ಮೀರಿ ಪಂಡಿತ ಸಮುದಾಯದಲ್ಲಿ ಒಬ್ಬರಾಗಿರುವ ತಮಗಾಗಿರುವ ಅನ್ಯಾಯವನ್ನು ವೇದಿಕೆಗಳಲ್ಲಿ ಅರ್ಥವಾಗುವಂತೆ, ಮನಮುಟ್ಟುವಂತೆ ಹೇಳಿದ್ದಾರೆ. ಇಲ್ಲಿ ಹೀಗೊಂದು ನ್ಯಾಯಮಂಡಳಿ ಮಾಡಿದರೆ ಅವರು ತಮ್ಮ ತಾಯ್ನೆಲಕ್ಕೂ ಬಂದು ತಮ್ಮೆಲ್ಲ ಕತೆ ಹೇಳಿಕೊಳ್ಳುವುದಕ್ಕೆ ಅನುವಾಗುತ್ತದೆ.
  7. ಕೇಂದ್ರ ಸರ್ಕಾರವು ಸಂವಿಧಾನಬದ್ಧವಾಗಿಯೇ 370ನೇ ವಿಧಿಯನ್ನು ತೆಗೆದು ಕಾಶ್ಮೀರದ ನಿಜವಾದ ವಿಲೀನಕ್ಕೆ ಕಾರಣವಾಗಿದೆ. ಬಹುಶಃ, ಇದರ ಮುಂದಿನ ಹೆಜ್ಜೆ, ಈ ನ್ಯಾಯಮಂಡಳಿಯ ಮೂಲಕ ಪ್ರಕರಣಗಳನ್ನು ಕೇಳುವುದಕ್ಕೆ ಅವಕಾಶ ಕಲ್ಪಿಸಿ, ಕಾಶ್ಮೀರಿ ಪಂಡಿತರು ಕಣಿವೆಗೆ ಹಿಂತಿರುಗುವುದಕ್ಕೆ ಮಾರ್ಗವನ್ನು ಕಲ್ಪಿಸುವುದು.
  8. ಈ ನ್ಯಾಯಮಂಡಳಿಗೆ ಮಾನವತೆಯ ವಿರುದ್ಧ ನರಮೇಧದ ಅಪರಾಧವನ್ನೆಸಗಿದ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸುವ ಅಧಿಕಾರವೂ ಇರುತ್ತದೆ. 1971ರ ಯುದ್ಧಾಪರಾಧಿಗಳಿಗೆ ಶಿಕ್ಷೆ ನೀಡುವುದಕ್ಕೆ ಬಾಂಗ್ಲಾದೇಶವು ಟ್ರಿಬ್ಯೂನಲ್ ರಚಿಸಿ ಯಶಸ್ವಿಯಾಗಿದೆ ಎಂದಾದರೆ, ಕಾಶ್ಮೀರದ ವಿಚಾರದಲ್ಲಿ ಭಾರತವು ಅದಕ್ಕಿಂತ ಉತ್ತಮ ಕಾರ್ಯ ಮಾಡಬಹುದಲ್ಲವೇ?
  9. ಕಾಶ್ಮೀರಿ ಪಂಡಿತರ ನರಮೇಧದ ಕುರಿತ ವಾಸ್ತವಾಂಶಗಳನ್ನು ಆದಷ್ಟೂ ಭಿತ್ತರಿಸುವ ಕೆಲಸ ಮುಂದುವರಿಯಬೇಕಿದೆಯಾದರೂ, ‘ದ ಕಾಶ್ಮೀರ್ ಫೈಲ್ಸ್’ನ ಮೂಲಗುರಿ ಕಾಶ್ಮೀರಿ ಪಂಡಿತರಿಗೆ ನ್ಯಾಯ ಒದಗಿಸುವುದು ಹಾಗೂ ತಮ್ಮ ಹಿರಿಯರ ನೆಲಕ್ಕೆ ಅವರು ಮರಳುವಂತೆ ನೋಡಿಕೊಳ್ಳುವುದು.
  10. ಚಿತ್ರ ನೋಡಿದವರೆಲ್ಲರೂ ಕಾಶ್ಮೀರಿ ಪಂಡಿತರ ನ್ಯಾಯಕ್ಕೆ ನ್ಯಾಯಮಂಡಳಿಯೊಂದು ರಚನೆಯಾಗುವುದಕ್ಕೆ ಒತ್ತಾಯಿಸಲಿ ಎಂದು ಆಶಿಸುತ್ತೇನೆ. ಸುಪ್ರೀಂಕೋರ್ಟ್ ತನ್ನ ಕರ್ತವ್ಯದಲ್ಲಿ ವಿಫಲವಾಗಿರುವುದು ಸ್ಪಷ್ಟ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!