ಪತ್ನಿಯನ್ನು ಹತ್ಯೆ ಮಾಡಿ 200 ತುಂಡುಗಳಾಗಿ ಕತ್ತರಿಸಿ ಅಡುಗೆ ಮನೆಯಲ್ಲಿ ಇಟ್ಟುಕೊಂಡ ಹಂತಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲೆಂಡ್​ನಲ್ಲಿ 28 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನ ಚಾಕುವಿನಿಂದ ಹಿರಿದು ಕೊಂದಿರುವ ಘಟನೆ ನಡೆದಿದೆ. ಹತ್ಯೆಗೈದ ಬಳಿಕ ಆಕೆಯ ದೇಹವನ್ನು 200ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ, ಒಂದು ವಾರ ಅಡುಗೆಮನೆಯಲ್ಲಿಟ್ಟು, ಬಳಿಕ ತನ್ನ ಸ್ನೇಹಿತನ ಸಹಾಯದಿಂದ ನದಿಗೆ ಎಸೆದಿದ್ದಾನೆ.

ಆರೋಪಿ (Accused) ನಿಕೋಲಸ್‌ ಮೆಟ್ಸನ್‌ (28), ತನ್ನ ಪತ್ನಿ ಹಾಲಿ ಬ್ರಾಮ್ಲಿ (26)ಯನ್ನ ಕಳೆದ ಮಾರ್ಚ್‌ 26 ರಂದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಮೊದಲು ಬೆಡ್​ರೂಮಿನಲ್ಲಿ ಪತ್ನಿಗೆ ಹಲವು ಬಾರಿ ಇರಿದು ಕೊಲೆ ಮಾಡಿ ಬಳಿಕ ದೇಹವನ್ನು ಸ್ನಾನಗೃಹಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ 200ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ ಬಳಿಕ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಡುಗಳನ್ನು ಹಾಕಿ ಇರಿಸಿದ್ದನು.

ದೇಹ ದುರ್ವಾಸನೆ ಬೀರದಂತೆ ನೋಡಿಕೊಳ್ಳಲು ತಂಪಾದ ಪ್ರದೇಶದಲ್ಲಿ ಇಟ್ಟಿದ್ದ, ಜೊತೆಗೆ ರೂಮ್‌ ಸ್ಪ್ರೇ ಸಿಂಪಡಣೆ ಮಾಡುತ್ತಿದ್ದ. ಮೃತ ಮಹಿಳೆಯ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಒಂದು ವಾರದ ಬಳಿಕ ವಿಚಾರಣೆಗಾಗಿ ಹಂತಕನ ಮನೆಗೆ ಬಂದಿದ್ದರು. ಆದ್ರೆ ಭೂಪ ಮೆಟ್ಸನ್‌ ಅದಕ್ಕೂ ಮುನ್ನವೇ ತನ್ನ ಸ್ನೇಹಿತನಿಗೆ 50 ಡಾಲರ್‌ ಕೊಟ್ಟು ತುಂಡು ದೇಹವನ್ನ ವಿಲೇವಾರಿ ಮಾಡಿಸಿದ್ದನು. ತಾನು ಪ್ರಕರಣದಲ್ಲಿ ಸಿಕ್ಕ ಬಳಿಕವೇ ಈ ಸತ್ಯವನ್ನು ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು (UK Police) ತಿಳಿಸಿದ್ದಾರೆ.

ತನ್ನ ಸ್ನೇಹಿತ ಸಹಾಯದಿಂದ ಮೆಟ್ಸನ್‌ ಮೃತ ಹೆಂಡತಿಯ ತುಂಡು ದೇಹವನ್ನು ನದಿಯಲ್ಲಿ ಬಿಸಾಡಿದ ಮರುದಿನ ಬೆಳಗ್ಗೆ ಅಲ್ಲೇ ವಾಕಿಂಗ್‌ ಮಾಡುತ್ತಿದ್ದ ಸ್ಥಳೀಯರು ತೇಲುತ್ತಿದ್ದ ಪ್ಲಾಸ್ಟಿಕ್‌ ಚೀಲವೊಂದನ್ನು ಗಮನಿಸಿದರು. ಅನುಮಾನಗೊಂಡು, ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಬಳಿಕ ಚೀಲವನ್ನು ತೆಗೆದು ನೋಡಿದಾಗ ಅದರಲ್ಲಿ ಮಹಿಳೆಯ ಕೈ-ಕಾಲುಗಳು, ತಲೆ, ದೇಹದ ಇತರ ತುಂಡಾಗಿರುವ 200ಕ್ಕೂ ಹೆಚ್ಚು ಬಿಡಿ ಭಾಗಗಳು ಕಂಡುಬಂದಿತು. ಪೊಲೀಸರಿಗೆ ಮೃಹ ದೇಹ ಯಾರದ್ದು ಅಂತಾ ಗುರುತಿಸೋದಕ್ಕೆ ಕೆಲ ದಿನಗಳು ಬೇಕಾಯಿತು.

ಕಳೆದ ಮಾರ್ಚ್‌ 24 ರಂದು ಲಿಂಕನ್‌ಶೈರ್ ಪೊಲೀಸರು ಬ್ರಾಮ್ಲಿ ಅವರ ನಿವಾಸಕ್ಕೆ ವಿಚಾರಣೆಗೆ ತೆರಳಿದ್ದರು. ಈ ವೇಳೆ ಮೆಟ್ಸನ್‌ ಮಾತುಗಳಿಂದ ಅನುಮಾನಗೊಂಡ ಪೊಲೀಸರು ಆತನನ್ನ ವಶಕ್ಕೆ ಪಡೆದು ತನಿಖೆ ನಡೆಸಿದಾಗ ತಾನೇ ಕೊಂದಿರುವುದಾಗಿ ಸತ್ಯ ಒಪ್ಪಿಕೊಂಡನು. ಬಳಿಕ ಆತನನ್ನ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಗಂಡ-ಹೆಂಡತಿ ನಡುವೆ ಕೌಟುಂಬಿಕ ಕಲಹ ನಡೆದಿತ್ತು ಎಂಬ ವಿಚಾರವನ್ನು ಮೆಟ್ಸನ್‌ ನ್ಯಾಯಾಲಯಕ್ಕೆ ತಿಳಿಸಿದ್ದನು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!