ಹೊಸದಿಗಂತ ಡಿಜಿಟಲ್ ಡೆಸ್ಕ್;
ತನ್ನ ನಾಯಕ ಯಾಹ್ಯಾ ಸಿನ್ವರ್ ಇಸ್ರೇಲ್ ದಾಳಿಯಲ್ಲಿ ಸಾವನ್ನಪ್ಪಿರುವುದನ್ನು ಹಮಾಸ್ ದೃಢಪಡಿಸಿದೆ.
ನಮ್ಮ ಶ್ರೇಷ್ಠ ನಾಯಕರು, ಹುತಾತ್ಮ ಸಹೋದರರಾದ ಯಹ್ಯಾ ಸಿನ್ವರ್, ಅಬು ಇಬ್ರಾಹಿಂ ನಿಧನಕ್ಕೆ ಸಂತಾಪ ಸೂಚಿಸುತ್ತೇವೆ’ಎಂದು ಕತಾರ್ ಮೂಲದ ಹಮಾಸ್ ಅಧಿಕಾರಿ ಖಲೀಲ್ ಅಲ್ ಹಯ್ಯಾ ವಿಡಿಯೊ ಸಂದೇಶದಲ್ಲಿ ಅಲ್ ಜಜೀರಾಗೆ ತಿಳಿಸಿದ್ದಾರೆ.
ದಕ್ಷಿಣ ಗಾಜಾ ಪಟ್ಟಿಯ ಕಾರ್ಯಾಚರಣೆಯಲ್ಲಿ ಹಮಾಸ್ ಭಯೋತ್ಪಾದಕ ಸಂಘಟನೆಯ ನಾಯಕ ಯಾಹ್ಯಾ ಸಿನ್ವಾರ್‌ನನ್ನು ಹತ್ಯೆ ಮಾಡಿದೆ” ಎಂದು ಇಸ್ರೇಲಿ ಮಿಲಿಟರಿ ಹೇಳಿತ್ತು. ಆದರೆ, ಅವರ ಸಾವನ್ನು ಹಮಾಸ್ ದೃಢಪಡಿಸಿರಲಿಲ್ಲ. ಇದೀಗ ಈ ಬಗ್ಗೆ ಹಮಾಸ್ ಸ್ಪಷ್ಟನೆ ನೀಡಿದ್ದು, ತಮ್ಮ ನಾಯಕನ ಸಾವನ್ನು ಖಚಿತಪಡಿಸಿದೆ.
ಇದೇ ವೇಳೆ ಇಸ್ರೇಲ್ ಗಾಜಾವನ್ನು ತೊರೆಯುವವರೆಗೂ ಯಾವುದೇ ಒತ್ತಾಳುಗಳನ್ನೂ ಬಿಡುಗಡೆ ಮಾಡುವುದಿಲ್ಲ ಎಂದು ಹಮಾಸ್ ಹೇಳಿದೆ. ಕದನ ವಿರಾಮಕ್ಕೆ ಆಗ್ರಹಿಸಿರುವ ಹಮಾಸ್, ಗಾಜಾದಿಂದ ಇಸ್ರೇಲಿ ಪಡೆಗಳು ಹೊರನಡೆಯಬೇಕು ಎಂದು ಹೇಳಿದೆ.
ಸಿನ್ವರ್ ಹತ್ಯೆಯಿಂದ ಧೃತಿಗೆಡುವುದಿಲ್ಲ. ಸಂಘಟನೆ ಅವರ ತ್ಯಾಗದಿಂದ ಶಕ್ತಿ ಪಡೆಯುತ್ತದೆ. ಅವರು ನಮ್ಮ ಚಳವಳಿಯ ಸಂಕೇತವಾಗಿದ್ದರು ಎಂದೂ ಅವರು ಹೇಳಿದ್ದಾರೆ.