ಕಡೆಗೂ ಸಿಕ್ಕಿಬಿಡ್ತು ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದ ಕೆಪಿಎಸ್​​ಸಿ ನೇಮಕಾತಿ ಆಯ್ಕೆ ಕಡತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನೇಮಕಾತಿಯ ಆಯ್ಕೆ ಪಟ್ಟಿಯ ಇಡೀ ಫೈಲ್‌ ನಾಪತ್ತೆಯಾಗಿದ್ದು, ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಮಿಸ್‌ ಆದ ಎರಡು ತಿಂಗಳ ನಂತರ ಇದೀಗ ಫೈಲ್‌ ಸಿಕ್ಕಿದೆ. ಘಟನೆ ಸಂಬಂಧ ಮಾಧ್ಯಮಗಳಲ್ಲಿ ಸುದ್ದಿಯಾಗಿ ಎಲ್ಲೆಡೆ ವಿಷಯ ತಿಳಿದ ಬೆನ್ನಲ್ಲೇ ಫೈಲ್‌ ಪತ್ತೆಯಾಗಿದೆ.

ಆಯೋಗದ ಹಿರಿಯ ಅಧಿಕಾರಿಗಳು ಮೌಖಿಕವಾಗಿ ವಿಧಾನಸೌಧ ಪೊಲೀಸರಿಗೆ ಫೈಲ್‌ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಧಿಕೃತ ಪತ್ರದಲ್ಲಿ ಫೈಲ್‌ ಸಿಕ್ಕಿರುವ ಬಗ್ಗೆ ಮಾಹಿತಿ ನೀಡುವಂತೆ ಹೇಳಿದ್ದಾರೆ. ಆಯೋಗ ಪತ್ರ ನೀಡುವುದು ಬಾಕಿ ಇದೆ.

2016ರಲ್ಲಿ ಕರ್ನಾಟಕ ಕೊಳಗೇರಿ ಮಂಡಳಿ ಕಿರಿಯ ಇಂಜಿನಿಯರ್​​ಗಳ ನೇಮಕಾತಿ ಆಗಿತ್ತು. 2018ರಲ್ಲಿ‌ ಹೆಚ್ಚುವರಿ ಆಯ್ಕೆ ಪಟ್ಟಿಯನ್ನ ಪ್ರಕಟಿಸಲಾಗಿತ್ತು. ಇದನ್ನ ಪ್ರಶ್ನಿಸಿ ವಿವೇಕಾನಂದ ಹೆಚ್.ಡಿ ಎಂಬುವರು ಹೈಕೋರ್ಟ್​​ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.

ನ್ಯಾಯಾಲಯದ ಆದೇಶದಂತೆ ಕೆಪಿಎಸ್​ಸಿ ಗೌಪ್ಯ ಶಾಖೆ-3ಯು ಆಯ್ಕೆ ಪಟ್ಟಿ ಕಡತನ್ನು ಸಿದ್ಧಪಡಿಸಿತ್ತು. ಬಳಿಕ 2024ರಲ್ಲಿ ಜನವರಿ 22ರಂದು‌ ಕೆಪಿಎಸ್​ಸಿ ಆಪ್ತ ಕಾರ್ಯದರ್ಶಿ ಅವರಿಗೆ ಸಲ್ಲಿಸಲಾಗಿತ್ತು. ಆ ಬಳಿಕ ಕಡತ ನಾಪತ್ತೆಯಾಗಿದೆ ಎಂದು ದೂರಿನಲ್ಲಿ ಆಯೋಗದ ಸಹಾಯಕ ಅಧಿಕಾರಿ ರಾಘವೇಂದ್ರ ಅವರು ಉಲ್ಲೇಖಿಸಿದ್ದರು.

ಕಣ್ಮರೆಯಾಗಿರುವ ಕಡತವು ಆಕಸ್ಮಿಕವಾಗಿ ಆಯೋಗದ ಬೇರೆ ಶಾಖೆಗಳಿಗೆ ಹೋಗಿರುವ ಸಾಧ್ಯತೆಯಿದ್ದು, ಈ ಸಂಬಂಧ ಎಲ್ಲಾ ಶಾಖೆಗಳಿಗೆ ಕಡತ ಶೋಧಿಸುವಂತೆ ಜ್ಞಾಪನ ಪತ್ರ ಹೊರಡಿಸಲಾಗಿತ್ತು. ನಿರಂತರವಾಗಿ ಪರಿಶೀಲನೆ ನಡೆಸಿದರೂ ಕಡತ ಸಿಗದಿರುವ ಬಗ್ಗೆ ಆಯಾ ಶಾಖೆಗಳ ಅಧಿಕಾರಿಗಳು ಉತ್ತರಿಸಿದ್ದರು.

ಈ ಹಿನ್ನೆಲೆಯಲ್ಲಿ ಅಧಿಕಾರಿ ಹಾಗೂ‌ ಸಿಬ್ಬಂದಿಯೊಳಗೊಂಡ ತಂಡ ರಚಿಸಿ ಎಲ್ಲಾ ಶಾಖೆಗಳಿಗೂ ತೆರಳಿ ಪರಿಶೀಲಿಸಿತ್ತು. ಆಗಲೂ ಕಡತ ಸಿಗದ ಪರಿಣಾಮ ಸಂಬಂಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಪೊಲೀಸರಿಗೂ ದೂರು ನೀಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!