ಶ್ರೀನಾರಾಯಣ ಗುರುಗಳಿಗೆ ಅಪಚಾರವೆಸಗಿದ್ದು ಎಡರಂಗವೇ ವಿನಾ ಕೇಂದ್ರ ಅಲ್ಲ: ಶ್ರೀಸತ್ಯಾನಂದ ತೀರ್ಥ ಸ್ವಾಮೀಜಿ

ಹೊಸದಿಗಂತ ವರದಿ, ಮಂಗಳೂರು:

ಶ್ರೀನಾರಾಯಣ ಗುರುಗಳ ಸ್ತಬ್ಧಚಿತ್ರ ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಯ್ಕೆಯಾಗಲಿಲ್ಲ ಎಂಬುದನ್ನೇ, ಶ್ರೀನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ತಿರಸ್ಕರಿಸಲಾಗಿದೆ, ಶ್ರೀನಾರಾಯಣ ಗುರುಗಳನ್ನು ಕಡೆಗಣಿಸಲಾಗಿದೆ, ಮೋದಿ ಸರಕಾರ ಶ್ರೀನಾರಾಯಣ ಗುರುಗಳಿಗೆ ಅಪಮಾನವೆಸಗಿದೆ ಎಂದೆಲ್ಲ ಕೇರಳದ ಎಡರಂಗ ಸರಕಾರ ಆರಂಭಿಸಿದ ಸುಳ್ಳು ಪ್ರಚಾರವನ್ನೇ ಕರ್ನಾಟಕದ ಕೆಲವು ರಾಜಕೀಯ ಹಿತಾಸಕ್ತಿಗಳು ಮುಂದುವರಿಸುತ್ತಿರುವ ಬಗ್ಗೆ ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದತೀರ್ಥ ಸ್ವಾಮೀಜಿ ತೀವ್ರ ಖೇದ ವ್ಯಕ್ತಪಡಿಸುತ್ತಾರೆ.
ಶ್ರೀಗುರುಗಳು ಜ್ಞಾನಿಗಳಾಗಿ ಎಂದಿದ್ದರು, ಆದರೆ…
ಅವರು ‘ಹೊಸದಿಗಂತ’ದ ಜೊತೆ ಮಾತನಾಡಿ ಈ ವಿವಾದದ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಶ್ರೀನಾರಾಯಣ ಗುರುಗಳು, “ಅಜ್ಞಾನದಿಂದ ಹೊರಬನ್ನಿ, ಸುಜ್ಞಾನಿಗಳಾಗಿ, ಈ ಸುಜ್ಞಾನವನ್ನು ಇತರರಿಗೂ ಹಂಚಿ. ಎಲ್ಲರಿಗೂ ಅರಿವು ಅಂದರೆ ಜ್ಞಾನ ಮೂಡಿಸಿ” ಎಂದು ಕರೆ ನೀಡಿದರು. ಆದರೆ ಇಂದು ರಾಜಕೀಯ ಹಿತಾಸಕ್ತಿಗಳು ಅವರ ಹೆಸರಿನಲ್ಲಿ ಸತ್ಯವಲ್ಲದ ಅಂಶವನ್ನು ಮುಂದಿಟ್ಟುಕೊಂಡು ಗೊಂದಲ ಸೃಷ್ಟಿಸಲು ಯತ್ನಿಸಿರುವುದು ಆಘಾತಕಾರಿ ಎನ್ನುತ್ತಾರೆ.
ಶ್ರೀಗುರುಗಳಿಗೆ ಅಪಚಾರ ಯಾರಿಂದ?
ಶ್ರೀನಾರಾಯಣ ಗುರುಗಳಿಗೆ ಅಪಚಾರವೆಸಗಿದ ಒಂದು ಸರಕಾರ ಇದ್ದರೆ ಅದು ಕೇರಳದ ಎಡರಂಗ ಸರಕಾರ. ಈ ಹಿಂದೆ ಇಡಿ ಶಿವಗಿರಿ ಮಠವನ್ನೇ ಕೇರಳದ ಎಡರಂಗ ಸರಕಾರ ಸ್ವಾಧೀನಪಡಿಸಿಕೊಂಡು 24 ಮಂದಿ ಸ್ವಾಮೀಜಿ (ಈ ರೀತಿ ಕೇರಳ ಸರಕಾರದಿಂದ ಅನ್ಯಾಯ, ದೌರ್ಜನ್ಯಕ್ಕೀಡಾದ ಪೂಜ್ಯ ಸ್ವಾಮೀಜಿಗಳಲ್ಲಿ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಕೂಡಾ ಒಬ್ಬರು)ಗಳನ್ನು ಆರೆಸ್ಸೆಸ್ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿ ಮಠದಿಂದ ಹೊರಹಾಕಿತ್ತು. ಅಲ್ಲದೆ ಕಣ್ಣೂರಿನಲ್ಲಿ ಎಡರಂಗ ಆಯೋಜಿತ ಮೆರವಣಿಗೆಯಲ್ಲಿ ಶ್ರೀನಾರಾಯಣ ಗುರುಗಳ ಪ್ರತಿಮೆಯನ್ನು ಶಿಲುಬೆಗೇರಿಸಿ ಅವಮಾನವೆಸಗಿತ್ತು.ಕೇರಳದ ಪತ್ರಿಕೆಯೊಂದರಲ್ಲಿ ಸಿಪಿಎಂ ನಾಯಕ ಕುಂಞರಾಮನ್ ಅವರು ಶ್ರೀನಾರಾಯಣ ಗುರುಗಳು ಮಾನಸಿಕ ಅಸ್ವಸ್ಥರು ಎಂದು ನಿಂದಿಸಿ ಹೇಳಿಕೆ ನೀಡಿದ್ದರು. ಆದರೆ ಇಂದು ಟಿವಿಯಲ್ಲಿ ಮಾತನಾಡುವ ಮಂದಿ ಶ್ರೀಗುರುಗಳಿಗೆ ಅಪಚಾರವೆಸಗುತ್ತಿದ್ದಾಗ ಎಲ್ಲಿ ಹೋಗಿದ್ದರು? ಆಗ ಚಕಾರವೆತ್ತದ ಮಂದಿ ಈಗ ಸ್ತಬ್ಧಚಿತ್ರದ ಹೆಸರಿನಲ್ಲಿ ಶ್ರೀನಾರಾಯಣ ಗುರುಗಳನ್ನು ತಮ್ಮ ರಾಜಕೀಯ ಉದ್ದೇಶ ಮತ್ತು ಸ್ವಾರ್ಥಕ್ಕೆ ಬಳಸಿಕೊಂಡು ಜನರನ್ನು ಎತ್ತಿಕಟ್ಟಲೆತ್ನಿಸುತ್ತಿರುವುದು ತೀರಾ ದುರದೃಷ್ಟಕರ ಎಂಬುದಾಗಿ ಅವರು ಹೇಳುತ್ತಾರೆ.
ಕೇರಳದಲ್ಲಿ ಆಗದ ವಿವಾದ ಇಲ್ಲೇಕೆ?
ಶ್ರೀನಾರಾಯಣ ಗುರುಗಳ ಸ್ತಬ್ಧಚಿತ್ರ ಆಯ್ಕೆಯಾಗದಿರುವುದಕ್ಕೆ ತನ್ನ ತಪ್ಪೇ ಕಾರಣ ಎಂಬುದು ಕೇರಳ ಸರಕಾರಕ್ಕೆ ಚೆನ್ನಾಗಿ ಗೊತ್ತಿದೆ. ಆದರೂ ಅದನ್ನು ಮುಚ್ಚಿ ಕೊಳ್ಳಲು ಕೇಂದ್ರ ಸರಕಾರದ ವಿರುದ್ಧ ಆರೋಪ ಮಾಡಿತು. ಇಷ್ಟಾದರೂ ಕೇರಳದ ಜನತೆ ಇಂತಹ ಆರೋಪವನ್ನು ನಂಬಿ ಮೋಸಹೋಗಲಿಲ್ಲ. ಅಲ್ಲಿ ಇದು ವಿವಾದದ ವಿಷಯವಾಗಲಿಲ್ಲ. ರಾಜಕೀಯ ಉದ್ದೇಶಕ್ಕಾಗಿ ಇಂತಹ ಆರೋಪ ಮಾಡಿದ್ದೇ ಆದರೆ ಕೇರಳದ ಜನತೆ ಅದನ್ನೆಲ್ಲ ಅಷ್ಟು ಸುಲಭದಿಂದ ನಂಬಿ ಗುಲ್ಲೆಬ್ಬಿಸುವುದಿಲ್ಲ. ಮಾತ್ರವಲ್ಲ ಇಂತಹುದನ್ನು ಗಂಭೀರವಾಗಿ ಸ್ವೀಕರಿಸುವುದೂ ಇಲ್ಲ. ಆದರೆ ಅಲ್ಲಾಗದ ಗೊಂದಲ ಕರ್ನಾಟಕದ ಕರಾವಳಿಯಲ್ಲಿ ಏಕಾಯಿತು ಎಂಬುದು ಅರ್ಥವಾಗುತ್ತಿಲ್ಲ ಎನ್ನುತ್ತಾರೆ.
ನಿಜ ಏನು?
ಕೇರಳದ ಪಿಣರಾಯಿ ಸರಕಾರ ಮೊದಲಿಗೆ ಒಂದು ಹಕ್ಕಿ ಚಿತ್ರವಿರುವ ಸ್ತಬ್ಧಚಿತ್ರ ಕಳುಹಿಸಿತು. ಅದು ಕೊಲ್ಲಂ ಜಿಲ್ಲೆಯಲ್ಲಿನ ‘ಜಟಾಯುಪಾರಾ’ (ಸೀತಾಮಾತೆಯನ್ನು ರಾವಣ ಕದ್ದು ಕೊಂಡೊಯ್ಯುವ ವೇಳೆ ತಡೆಯಲು ಯತ್ನಿಸಿದ ಜಟಾಯುವಿನ ರೆಕ್ಕೆಯನ್ನು ಕಡಿದು ಅದು ಬಿದ್ದ ಸ್ಥಳ) ಹಿನ್ನೆಲೆಯ ಚಿತ್ರ. ಅದರ ಬೆನ್ನಿಗೇ ನಾರಾಯಣ ಗುರುಗಳ ಚಿತ್ರವನ್ನೂ ಕಳುಹಿಸಿತು. ಇದರ ಹಿಂದಿನ ಉದ್ದೇಶ ಏನಿತ್ತು ಎಂಬುದು ಸ್ಪಷ್ಟ. ಈಗ ವಿವಾದ ಸೃಷ್ಟಿಸುತ್ತಿರುವ ಮಂದಿ ಹೇಳುವಂತೆ, ಒಂದು ವೇಳೆ ಸಮಿತಿ ಮುಂದೆ ಶ್ರೀ ಶಂಕರಾಚಾರ್ಯರ ಹೆಸರು ಚರ್ಚೆಗೆ ಬಂದಿದ್ದರೂ ಅದರಲ್ಲಿ ತಪ್ಪೇನಿದೆ? ಆದರೆ ಶ್ರೀನಾರಾಯಣ ಗುರುಗಳಿಗೆ ಅವಮಾನ ಎಸಗುವ ಯಾವುದೇ ಉದ್ದೇಶ ಕೇಂದ್ರಕ್ಕೆ ಇರಲು ಸಾಧ್ಯವಿಲ್ಲ ಎಂಬುದು ವಿವೇಕ ಇರುವ ಯಾರಿಗಾದರೂ ಅರ್ಥವಾಗುವ ಸಂಗತಿ.
ಮೋದಿಯವರು ಶಿವಗಿರಿ ಮಠಕ್ಕೆ ಬಂದಾಗ, ಕೇರಳದ ದೇವಸ್ವಂ ಸಚಿವರೊಬ್ಬರು ಶಿವಗಿರಿ ಮಠದ ಸ್ವಾಮೀಜಿಗಳನ್ನು ಮೋದಿ ಚೇಲಾಗಳೆಂದು ನಿಂದಿಸಿದ್ದರು. ಆದರೆ ಮೋದಿಯವರು ಮೂರು ಬಾರಿ ಶಿವಗಿರಿ ಕ್ಷೇತ್ರಕ್ಕೆ ಬಂದು ಶ್ರೀನಾರಾಯಣ ಗುರುಗಳ ಬಗ್ಗೆ ಅಪ್ರತಿಮ ಗೌರವ, ಶ್ರದ್ಧೆ ವ್ಯಕ್ತಪಡಿಸಿದ್ದರು ಎಂಬುದಾಗಿ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ನೆನಪಿಸುತ್ತಾರೆ.
ಎಡರಂಗ ಸರಕಾರದ ದಬ್ಬಾಳಿಕೆ, ದೌರ್ಜನ್ಯ
ಅಂದು ಕೇರಳದ ಎಡರಂಗ ಸರಕಾರ ಶಿವಗಿರಿ ಮಠವನ್ನು ವಶಪಡಿಸಿಕೊಂಡು ಅದರ ಆಡಳಿತ ನಿರ್ವಹಣೆಗೆ ಸರಕಾರಿ ಅಧಿಕಾರಿಗಳನ್ನು ನೇಮಿಸಿತ್ತು.ಅವರಿಗೆಲ್ಲ ವೇತನ ನೀಡುತ್ತಿದ್ದುದು ಶಿವಗಿರಿ ಮಠದಿಂದಲೇ ! ಕೊನೆಗೆ ಮಠದಲ್ಲಿ ಹಣ ಖಾಲಿಯಾದಾಗ ಕೇರಳ ಸರಕಾರ ಮಾಡಿದ್ದೇನು ಗೊತ್ತೇ? ಪಾಲಕ್ಕಾಡಿನ ಆಶ್ರಮದಲ್ಲಿದ್ದ ಬೆಲೆ ಬಾಳುವ ಶ್ರೀಗಂಧದ ಮರಗಳನ್ನು ಕಡಿದು ಮಾರಾಟ ಮಾಡಿ ಈ ಅಧಿಕಾರಿಗಳಿಗೆ ವೇತನ ನೀಡಿದ್ದು !! ಕೊನೆಗೆ ಸ್ವಾಮೀಜಿಗಳು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋದ ಬಳಿಕ ನ್ಯಾಯಾಲಯ ಶ್ರೀಮಠವನ್ನು ಸರಕಾರದ ಹಿಡಿತದಿಂದ ಮುಕ್ತಗೊಳಿಸಿತು. ಸ್ವಾಮೀಜಿಯವರಿಗೆ ನ್ಯಾಯ ನೀಡಿತು ಎಂದು ಸ್ವಾಮೀಜಿಯವರು ಆ ಕರಾಳ ದಿನಗಳನ್ನು ವಿವರಿಸುತ್ತಾರೆ.
ಸತ್ಯ ಅರಿತುಕೊಳ್ಳಿ
ಪ್ರಧಾನಿ ನರೇಂದ್ರ ಮೋದಿ ಸರಕಾರ ಮೊದಲು ಅಧಿಕಾರಕ್ಕೆ ಬಂದಾಗ , ಕೇರಳದ ವಿಶ್ವವಿಖ್ಯಾತ ಶ್ರೀ ಅನಂತಪದ್ಮನಾಭ ದೇವಸ್ಥಾನದ ಅಭಿವೃದ್ಧಿಗಾಗಿ 78 ಕೋ. ರೂ.ಗಳ ನೆರವು ಘೋಷಿಸಿದ್ದರು. ಅವರು ಶಿವಗಿರಿ ಮಠಕ್ಕೆ ಬಂದಿದ್ದಾಗ 100 ಕೋ. ರೂ.ಗಳ ನೆರವು ಘೋಷಿಸಿದರು. ಆದರೆ ತಾಂತ್ರಿಕ ನೆಲೆಯಲ್ಲಿ ಅದನ್ನು ನೀಡಲು ಸಾಧ್ಯವಿಲ್ಲ ಎಂದಾದಾಗ 70 ಕೋ.ರೂ.ಗಳ ನೆರವು ಘೋಷಿಸಿದರು. ಮಾತ್ರವಲ್ಲದೆ ಶಿವಗಿರಿ ಮಠದಲ್ಲಿ ಏನಾಗಬೇಕಾಗಿದೆ ಎಂಬುದನ್ನು ಅಧ್ಯಯನ ನಡೆಸಲು ಅಂದಿನ ಕೇಂದ್ರ ಸಚಿವ ಅಲ್ಫಾನ್ಸ್ ಕಣ್ಣಂತಾನಮ್ ಅವರನ್ನೇ ಖುದ್ದಾಗಿ ಕಳುಹಿಸಿ, ನೆರವು ಬಿಡುಗಡೆಗೊಳಿಸಿದ್ದರು. ಮೋದಿ ಸರಕಾರವೇ ಶಿವಗಿರಿ ಮಠಕ್ಕೆ ಇಂತಹ ನೆರವು ನೀಡಿದ ಏಕೈಕ ಸರಕಾರ.
ಸ್ವಾಮೀಜಿಗೆ ಕೇಂದ್ರ ಪ್ರಶಸ್ತಿ ನೀಡಿದಾಗಲೂ ನಿಂದೆ
ಪ್ರವಾಹ ಬಂದಾಗ ಶ್ರೀಮಠದ ಸ್ವಾಮೀಜಿ ಶ್ರೀ ವಿಶುದ್ಧಾನಂದ ಸ್ವಾಮೀಜಿಯವರು ಶ್ರೀಮಠದ ಮೂಲಕ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ್ದರು. ಅಂದು ಸಂತ್ರಸ್ತರಿಗಾಗಿ ಅಭೂತಪೂರ್ವ ರೀತಿಯಲ್ಲಿ ನೆರವಿತ್ತ ಸ್ವಾಮೀಜಿಯವರಿಗೆ ಕೇಂದ್ರ ಸರಕಾರ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿತು. ಆಗಲೂ ಎಡರಂಗ ಸರಕಾರದಿಂದ ಕಿರಿಕಿರಿ ಎದುರಾಯಿತು. ಹಾಗೆಂದು ಕೇರಳದ ಹಿಂದಿನ ಎಡರಂಗ ಸರಕಾರದ ವಿತ್ತಸಚಿವ ಥಾಮಸ್ ಐಸಾಕ್ ಅವರು (ಬ್ರಿಟನ್‌ಗೆ ಹೋಗಿದ್ದಾಗ ಶ್ರೀ ಗುರುಗಳ ಬಗ್ಗೆ ಅಲ್ಲಿ ವ್ಯಕ್ತವಾದ ಅಪಾರ ಗೌರವದಿಂದ ಪ್ರೇರಣೆಗೊಂಡು) ಮಾತ್ರ ಶ್ರೀಮಠಕ್ಕೆ ಬಂದು 19  ಕೋ.ರೂ.ಗಳ ನೆರವಿತ್ತು ಯಾತ್ರಿಕರಿಗೆ ಭವನವೊಂದರ ನಿರ್ಮಾಣಕ್ಕೆ ನೆರವಿತ್ತುದನ್ನು ಮರೆಯಲಾಗದು ಎನ್ನುತ್ತಾರೆ ಅವರು. ಪ್ರವಾಹ ಸಂದರ್ಭ ಶಿವಗಿರಿ ಮಠದಿಂದ ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋ.ರೂ.ಗಳನ್ನು ನೀಡಲಾಗಿತ್ತು ಎಂದೂ ಬೊಟ್ಟು ಮಾಡುತ್ತಾರೆ.
ಶ್ರೀನಾರಾಯಣ ಗುರುಗಳ ಜಯಂತಿ ರಜೆ ಘೋಷಿಸಿದ್ದು ಡಾ.ಆಚಾರ್ಯರು
ಶ್ರೀನಾರಾಯಣ ಗುರುಗಳ ಗೌರವಾರ್ಥ ಮೊದಲು ಉಡುಪಿ, ಮಂಗಳೂರು ಜಿಲ್ಲೆಗಳಲ್ಲಿ ರಜೆ ಘೋಷಿಸಿದವರು ಮಾಜಿ ಸಚಿವ , ಬಿಜೆಪಿ ನಾಯಕ ದಿ.ಡಾ.ವಿ.ಎಸ್.ಆಚಾರ್ಯ ಅವರು. ಸಮಾರಂಭವೊಂದರಲ್ಲಿ ತಾವು ಈ ಬಗ್ಗೆ ಪ್ರಸ್ತಾವಿಸಿದಾಗ ಅದಕ್ಕೆ ಸ್ಪಂದಿಸಿ ರಜೆ ಘೋಷಿಸಿದ್ದರು. ಅಲ್ಲದೆ ಡಾ.ವಿ.ಎಸ್.ಆಚಾರ್ಯ ಅವರು ಶಿವಗಿರಿ ಮಠಕ್ಕೆ ಬಂದು ಶ್ರೀಗುರುಗಳ ಬಗ್ಗೆ ಅಪಾರ ಶ್ರದ್ಧೆ ಗೌರವ ಸಮರ್ಪಿಸಿದ್ದರು.“ನನ್ನ ಜನ್ಮ ಸಾರ್ಥಕವಾಯಿತು “ಎಂದು ಉದ್ಗರಿಸಿದ್ದರು. ಡಾ.ಎಪಿಜೆ ಕಲಾಂ ಅವರು ಕೂಡಾ ಶಿವಗಿರಿ ಮಠಕ್ಕೆ ಬಂದು ವಿಶೇಷ ಶ್ರದ್ಧೆ ತೋರಿದವರು ಎಂದು ಸ್ವಾಮೀಜಿ ನೆನಪಿಸುತ್ತಾರೆ. ಆದರೆ ಈಗ ವಿವಾದ ಸೃಷ್ಟಿಸುತ್ತಿರುವ ಮಂದಿ ಶಿವಗಿರಿಗೆ ಬಂದಿಲ್ಲ, ಬಂದ ಕೆಲವರು ಅಲ್ಲಿ ಗೌರವ, ಶ್ರದ್ಧೆ ತೋರದೆ ಹೇಗೆ ನಡೆದುಕೊಂಡಿದ್ದರು ಎಂಬ ಅಂಶವನ್ನೂ ಅವರು ವಿವರಿಸುತ್ತಾರೆ.
ಏಕತೆಗೆ ಧಕ್ಕೆ ತರುವ ಗುಲ್ಲು
ನಿಜವಾಗಿಯೂ ಇಂದು ಸತ್ಯದ ಬಲ ಇಲ್ಲದ ಇಂತಹ ಒಂದು ವಿವಾದ ಸೃಷ್ಟಿ ಯಾಕಾಯಿತು? ಕೆಲವರು ಯಾಕೆ ಇಂತಹ ಸುಳ್ಳು ಪ್ರಚಾರವನ್ನು ನಂಬುವಂತಾಯಿತು? ಎಂಬುದು ನಾವು ಗಂಭೀರವಾಗಿ ಚಿಂತಿಸಬೇಕಾದ ಅಂಶ. ತಮ್ಮ ಸಣ್ಣ ಸಣ್ಣ ಸ್ವಾರ್ಥ ಸಾಧನೆಗಾಗಿ ಇಂತಹ ಸನ್ನಿವೇಶ ಸೃಷ್ಟಿಸಿದ ಮಂದಿಯ ಅಜ್ಞಾನದ ಬಗ್ಗೆ ನಿಜವಾಗಿಯೂ ಮರುಕವುಂಟಾಗುತ್ತಿದೆ. ಸಮಾಜದಲ್ಲಿ ಏಕತೆ, ಸಾಮರಸ್ಯ, ಸದ್ಭಾವನೆಗಾಗಿ ಕರೆ ನೀಡಿರುವ ಶ್ರೀನಾರಾಯಣ ಗುರುಗಳ ಹೆಸರಿನಲ್ಲಿ ಇಂತಹ ಗುಲ್ಲು ಖಂಡಿತಾ ಸರಿಯಲ್ಲ . ಇದು ಹಿಂದುಸಮಾಜದ ಏಕತೆಯನ್ನು ಹಾಳು ಮಾಡಬೇಕೆಂದು ಕಾಯುವ ಶಕ್ತಿಗಳಿಗೆ ಅವಕಾಶ ಕಲ್ಪಿಸಿಕೊಡುವ ತಪ್ಪು ಹೆಜ್ಜೆ ಎಂದು ಎಚ್ಚರಿಸುವ ಸ್ವಾಮೀಜಿ, ವಿವೇಕ, ಜ್ಞಾನ, ಏಕತೆ ನಮ್ಮ ಮಂತ್ರವಾಗಿರಲಿ ಎಂದು ಕಳಕಳಿಯ ಕಿವಿಮಾತು ಹೇಳುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!