May 1, 2026
Friday, May 1, 2026
spot_img

ತೆಂಕುತಿಟ್ಟು ಯಕ್ಷಗಾನ ಲೋಕದ ದಿಗ್ಗಜ, ಯಕ್ಷಗುರು ಸೂರಿಕುಮೇರು ಕೆ. ಗೋವಿಂದ ಭಟ್ ವಿಧಿವಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಂಕುತಿಟ್ಟು ಯಕ್ಷಗಾನದ ಅಪ್ರತಿಮ ಕಲಾವಿದ, ದಶಕಗಳಿಗೂ ಅಧಿಕ ಕಾಲ ರಂಗಸ್ಥಳವನ್ನು ಆಳಿದ ಯಕ್ಷಗುರು ಸೂರಿಕುಮೇರು ಕೆ. ಗೋವಿಂದ ಭಟ್ ಅವರು ತೀರ್ಥಹಳ್ಳಿಯ ತಮ್ಮ ಪುತ್ರನ ನಿವಾಸದಲ್ಲಿ ಶುಕ್ರವಾರ ರಾತ್ರಿ ವಿಧಿವಶರಾಗಿದ್ದಾರೆ.

ಅವರಿಗೆ 90 ವರ್ಷ ವಯಸ್ಸಾಗಿತ್ತು.

ಯಕ್ಷಗಾನದ ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದ ಗೋವಿಂದ ಭಟ್ಟರು, ತಾಳಮದ್ದಳೆಯಲ್ಲಿಯೂ ಪ್ರಸಿದ್ಧರಾಗಿದ್ದರು. ರಂಗಸ್ಥಳದಲ್ಲಿ ತಮ್ಮ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು ಸಿದ್ದಹಸ್ತರಾಗಿದ್ದರು.

ಅವರು ಮೂವರು ಪುತ್ರರ ಸಹಿತ ಬಂಧುಬಳಗ, ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.

ತಮ್ಮ 11ನೇ ವಯಸ್ಸಿನಲ್ಲಿ ಯಕ್ಷಗಾನ ಲೋಕಕ್ಕೆ ಕಾಲಿಟ್ಟ ಗೋವಿಂದ ಭಟ್ಟರು ಶ್ರೀ ಧರ್ಮಸ್ಥಳ ಮೇಳವೊಂದರಲ್ಲೇ 50 ವರ್ಷಗಳಿಗೂ ಅಧಿಕ ಕಾಲ ತಿರುಗಾಟ ನಡೆಸಿದ್ದರು. ರಕ್ತಬೀಜ, ಈಶ್ವರ, ಗಣಮಣಿ, ಅರ್ಜುನ, ಭೀಷ್ಮ, ಪರಶುರಾಮ, ಕೀಚಕ… ಹೀಗೆ ಎಲ್ಲಾ ಪಾತ್ರಗಳನ್ನು ನಿರ್ವಹಿಸಿದ್ದರಲ್ಲದೆ ಸ್ತ್ರೀ ವೇಷದಲ್ಲೂ ಸೈ ಎನ್ನಿಕೊಂಡಿದ್ದರು ಭಟ್ಟರು. ಅವರ ನಿಧನ ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !