November 12, 2026
Thursday, November 12, 2026
spot_img

ಪ್ರತಿ ಟನ್ ಕಬ್ಬಿಗೆ ₹3,800 ದರ ಘೋಷಿಸಿ, ಇಲ್ಲವಾದರೆ ಕಾರ್ಖಾನೆ ಬಂದ್ ಹೋರಾಟಕ್ಕೆ ಕರೆ : ಚೂನ್ನಪ್ಪ ಪೂಜೇರಿ

ಹೊಸದಿಗಂತ ವರದಿ ಬೆಳಗಾವಿ:

ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಪ್ರತಿ ಟನ್‌ಗೆ ₹3,800 ದರ ನೀಡಬೇಕು. ಇಲ್ಲವಾದರೆ ಕಾರ್ಖಾನೆಗಳ ಮುಂದೆ ಪ್ರತಿಭಟನೆ ನಡೆಸಿ ಬಂದ್ ಮಾಡಿಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಚೂನ್ನಪ್ಪ ಪೂಜೇರಿ ಎಚ್ಚರಿಸಿದರು.

ಗುರುವಾರ ಬೆಳಗಾವಿ ನಗರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ‌ ಅವರು, ಈ ಹಿಂದೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸಕ್ಕರೆ ದರದ ಆಧಾರದ ಮೇಲೆ ಕಬ್ಬಿಗೆ ₹3,800 ನೀಡಲು ಕಾರ್ಖಾನೆ ಮಾಲೀಕರು ಒಪ್ಪಿಕೊಂಡಿದ್ದರು. ಆದರೆ ಬಳಿಕ ತಮ್ಮ ನಿಲುವು ಬದಲಿಸಿ ರೈತರಿಗೆ ಅನ್ಯಾಯ ಮಾಡಿದ್ದಾರೆಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಹಾಗೂ ಯೋಗೇಶ ಪಾಟೀಲ ವಿರುದ್ಧ ಗಂಭೀರ ಆರೋಪಿಸಿದರು.

ಬೆಳೆ ನಾಶವಾಗುವ ಆತಂಕದಿಂದ ಅನಿವಾರ್ಯವಾಗಿ ತಾತ್ಕಾಲಿಕವಾಗಿ ₹3,600 ದರಕ್ಕೆ ಒಪ್ಪಿಕೊಳ್ಳಬೇಕಾಯಿತು. ಇದನ್ನು ರೈತರ ಅಂತಿಮ ಒಪ್ಪಿಗೆ ಎಂದು ಪರಿಗಣಿಸಬಾರದು. ರಾಜ್ಯದ ಎಲ್ಲ ಕಾರ್ಖಾನೆಗಳೂ ₹3,800 ದರ ಘೋಷಿಸಬೇಕು ಎಂದು ಕಾರ್ಖಾನೆಯ ಮಾಲಿಕರ ಮೂಲಕ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಕಲಬುರಗಿ, ಬೀದರ್, ಹಾವೇರಿ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ರೈತರಿಗೆ ನ್ಯಾಯಯುತ ದರ ಕೊಡಿಸಬೇಕು. ಈ ಕುರಿತು ತಕ್ಷಣ ಜಿಲ್ಲಾ ಉಸ್ತುವಾರಿ ಸತೀಶ್ ಜಾರಕಿಹೊಳಿ ಅವರು, ಸಚಿವರೊಂದಿಗೆ ಸಭೆ ನಡೆಸಿ ನಿರ್ಧಾರ ಕೈಗೊಳಬೇಕು. ಇಲ್ಲದಿದ್ದರೆ ರೈತರು ಕಾರ್ಖಾನೆಗಳಿಗೆ ಮುತ್ತಿಗೆ ಹಾಕಲಿದ್ದಾರೆ ಎಂದು ಎಚ್ಚರಿಸಿದರು.

ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ ಸೂಕ್ತ ಪರಿಹಾರ ಘೋಷಿಸಬೇಕು. ಡಿಸೆಂಬರ್ ನಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದಲ್ಲಿಯೂ ರೈತರ ಸಮಸ್ಯೆಯನ್ನು ತೀವ್ರವಾಗಿ ಪ್ರಸ್ತಾಪಿಸಲಾಗುವುದರ ಜತೆಗೆ ಉಗ್ರ ಹೋರಾಟ ಮಾಡಲಾಗುವುದು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Must Read