ಹೊಸದಿಗಂತ ಡಿಜಿಟಲ್ ಡೆಸ್ಕ್:
ಆತ ಹುಟ್ಟು ಕುರುಡನಲ್ಲ. ಬಾಲ್ಯದಲ್ಲಿ ನಡೆದ ಆಘಾತಕ್ಕೆ ತುತ್ತಾಗಿ ತನ್ನ ಇಡೀ ಜೀವನವನ್ನೆ ಕತ್ತಲೆಯಲ್ಲಿ ಕಳೆದ. ಕಲಿಕೆಯ ಅತೀವ ಆಸಕ್ತಿ ಅಂಧರಿಗೆ ಲಿಪಿಯೊಂದನ್ನು ಕಂಡುಹಿಡಿಯುವಲ್ಲಿ ಪ್ರೇರಣೆಯಾಯಿತು. ಕಣ್ಣಿಲ್ಲದವರಿಗೆ ಜ್ಞಾನಾರ್ಜನೆಯ ಮಹಾದ್ವಾರ ತೆರೆದು ಅವರ ಬಾಳಿಗೆ ಬೆಳಕಾದ. ಯಾರ ಬಗ್ಗೆ ಮಾತಾಡುತ್ತಿರುವುದು ಎಂದು ಯೋಚಿಸುತ್ತಿದ್ದಿರ? ಈತ ಲೂಯಿ ಬ್ರೆಯ್ಲ್. ಅಂಧ ಶಿಕ್ಷಕ, ಅಂಧರ ಲಿಪಿಯ ಜನಕ. ಇವನ ಹೆಸರಿನಿಂದಲೆ ಅದು ಬ್ರೆಯ್ಲ್ ಲಿಪಿ ಎಂದು ಪ್ರಸಿದ್ಧ. ಅಚ್ಚರಿಯೆನೆಂದರೆ ಅಂಧರಿಗೆ ಹೊಸ ಲಿಪಿಯನ್ನು ಸೃಷ್ಟಿಸಿದಾಗ ಇವನಿಗೆ ಕೇವಲ 15 ವರ್ಷ ಮಾತ್ರ.
ಬಾಲ್ಯದ ಆಘಾತ
ಅದು ಫ್ರಾನ್ಸ್ ದೇಶದ ಕೂಪವ್ರೆ ಗ್ರಾಮ. 1809 ಜನವರಿ 4 ರಂದು ಸೈಮನ್ ರೆ ಬ್ರೆಯ್ಲ-ಮೋನಿಕ ಬ್ರೆಯ್ಲ್ ದಂಪತಿಗೆ ಜನಿಸಿದವ ಲೂಯಿ. ಹುಟ್ಟಿದಾಗ ಎಲ್ಲವೂ ಸರಿಯಿತ್ತು. ಸೈಮನ್ ಕುದುರೆ ಸವಾರರಿಗೆ ಚರ್ಮದ ಜೀನ್ ತಯಾರಿಸಿ ಕೊಡುತ್ತಿದ್ದ. ಲೂಯಿಗೆ ಆಗಿನ್ನು ಮೂರು ವರ್ಷ. ತಂದೆಯ ಕಾರ್ಯಾಗಾರದಲ್ಲಿ ಹೊಲಿಕೆಯ ಸಾಮಗ್ರಿಗಳೊಟ್ಟಿಗೆ ಆಟವಾಡುತ್ತಿದ್ದ. ಚೂಪಾದ ಡಬ್ಬಣ ತೆಗೆದುಕೊಂಡು ಚರ್ಮಕ್ಕೆ ಚುಚ್ಚಲಾರಂಭಿಸಿದ. ತಾನು ಏನು ಮಾಡುತ್ತಿದ್ದೆನೆ ಎಂಬ ಅರಿವೂ ಸಹ ಅವನಿಗಿದ್ದಿಲ್ಲ. ಕ್ಷಣಮಾತ್ರದಲ್ಲಿ ಕೈಯಲ್ಲಿದ್ದ ಡಬ್ಬಣ ಹಾರಿ ಅವನ ಎಡ ಕಣ್ಣಿಗೆ ಚುಚ್ಚಿತು. ಸೈಮನ್ ಬಂದು ನೋಡುವುದರೊಳಗೆ ಕಣ್ಣಿನಿಂದ ರಕ್ತ ನೀರಿನಂತೆ ಸುರಿಯುತ್ತಿತ್ತು. ಆಗಿನ್ನು ನಂಜು ನಿರೋಧಕ ಔಷಧಿಗಳು ಆವಿಷ್ಕಾರಗೊಂಡಿರಲಿಲ್ಲ. ಕೆಲ ಗಿಡ ಮೂಲಿಕೆಗಳಿಂದ ಕಣ್ಣಿಗೆ ಚಿಕಿತ್ಸೆ ನೀಡಲಾಯಿತು. ದಿನ ಕಳೆದಂತೆ ಕಣ್ಣು ಕೆಂಪಾದವು, ಊದಿಕೊಂಡವು, ಕೀವು ಕಟ್ಟಿ, ಸೋಂಕಾಗಿ ಬಲಗಣ್ಣಿಗೂ ಘಾಸಿಯುಂಟುಮಾಡಿತು. ಎಲ್ಲವೂ ಮಂಜಿನಂತೆ ಕಾಣತೊಡಗಿದವು. ದೃಷ್ಟಿ ದುರ್ಬಲವಾಗಿ ತನ್ನ ಐದನೇ ವಯಸ್ಸಿನಲ್ಲಿ ಲೂಯಿ ಶಾಶ್ವತವಾಗಿ ಕುರುಡನಾದ.
ಲಿಪಿ ಆವಿಷ್ಕರಿಸುವ ಮುನ್ನ…
ತಾನು ಅಂಧ ಎಂದು ಅರಿವಾದರು ಸಹ ಲೂಯಿ ಎಂದಿಗೂ ಧೈರ್ಯ ಕಳೆದುಕೊಳ್ಳಲಿಲ್ಲ. ಕಲಿಕೆಯಲ್ಲಿ ಅತ್ಯಂತ ಆಸಕ್ತಿ ಹೊಂದಿದ ಈತ, ಪ್ಯಾರಿಸ್‍ನ ದಿ ರಾಯಲ್ ಇನ್‍ಸ್ಟಿಟ್ಯೂಟ್ ಆಫ್ ಬ್ಲೈಂಡ್ ಯೂತ್ ಸಂಸ್ಥೆಯ ಶಾಲೆಗೆ ಸೇರಿದ. ಅಲ್ಲಿನ ಸಂಸ್ಥಾಪಕ ವ್ಯಾಲೆಂಟೈನ್ ಹೊವಿ ಅದಾಗಲೇ ಅಂಧ ಮಕ್ಕಳಿಗೆ ಓದುಲು ಏರಿದ ಮುದ್ರಣ ವಿಧಾನ ಕಂಡು ಹಿಡಿದಿದ್ದ. ಈ ವಿಧಾನದಲ್ಲಿ ತಾಮ್ರದ ತಂತಿಯಿಂದ ವರ್ಣಮಾಲೆಯ ಅಕ್ಷರಗಳನ್ನು ರೂಪಿಸಿ, ಕಾಯಿಸಿ ಮೇಣದ ಕಾಗದಗಳ ಮೇಲೆ ಒತ್ತಲಾಗುತ್ತಿತ್ತು. ಆದರೆ ಇದರಲ್ಲಿ ಅಕ್ಷರಗಳ ವ್ಯತ್ಯಾಸ ಕಂಡು ಹಿಡಿಯುವುದು ಕಷ್ಟವಾಗಿತ್ತು. ಶಬ್ದಗಳು ಅಸ್ಪಷ್ಟವಾಗಿ ಮೂಡುತ್ತಿದ್ದು, ವೆಚ್ಚದಾಯಕವೂ ಆಗಿತ್ತು. ಇನ್ನೊಂದೆಡೆ ಫ್ರ್ಯಾನ್ಸ್ ಸಿಪಾಯಿ ಪಡೆಯ ನಾಯಕ ಚಾಲ್ರ್ಸ ಬಾರ್ಬಿಯೆ ರಹಸ್ಯ ಸಂದೇಶಗಳನ್ನು ರವಾನಿಸಲು ಇರುಳು ಬರವಣಿಗೆ ಎಂಬ ವಿಧಾನವನ್ನು ರೂಪಿಸಿದ್ದ. ಇದರಲ್ಲಿ ಶಬ್ದಗಳಿಗೆ ಸಾಂಕೇತಿಕವಾಗಿ ಉಬ್ಬಿದ ಚುಕ್ಕೆ ಹಾಗೂ ಗೆರೆಗಳನ್ನು ಬಳಸಲಾಗಿತ್ತು. ಈ ವಿಧಾನವೂ ಸಹ ಅಂಧರ ಕಲಿಕೆಗೆ ಪೂರಕವಾಗಲಿಲ್ಲ.
ಚುಕ್ಕಿ ಬರವಣಿಗೆಯ ಆರಂಭದಲ್ಲಿ….
ಬಾರ್ಬಿಯೆನ ಇರುಳು ಬರವಣಿಗೆಯಿಂದ ಪ್ರೇರಿತನಾದ ಲೂಯಿ ಅದನ್ನೆ ಅಭಿವೃದ್ಧಿಗೊಳಿಸಿದ. ಶಬ್ದಗಳನ್ನು ಸಾಂಕೇತಿಸುವ ಗೆರೆ, ಚುಕ್ಕಿಗಳ ಬದಲಾಗಿ ಲೂಯಿ ಚುಕ್ಕೆಗಳನ್ನು ಅಕ್ಷರಗಳಿಗೆ ಸಾಂಕೇತಿಕವಾಗಿ ಮಾಡಿದ. ದಪ್ಪ ಕಾಗದ ಮೇಲೆ ಸ್ಟೈಲಸ್‍ನಿಂದ (ಚಿಕ್ಕ ಮೊಳೆ) ಕೇವಲ 6 ಚುಕ್ಕೆಗಳಿಂದ 63 ವಿನ್ಯಾಸಗಳನ್ನು ರೂಪಿಸಿ, ಇಡೀ ವರ್ಣಮಾಲೆಯ ಅಕ್ಷರ ಹಾಗೂ ಚಿಹ್ನೆಗಳಿಗೆ ಸಂಕೇತ ನೀಡಿದ. ಇದು ಹಿಂದಿನ ವಿಧಕ್ಕಿಂತ ಬಹು ಸುಲಭವಾಗಿತ್ತು. ಆದರೆ ಲೂಯಿಯ ಆವಿಷ್ಕಾರಕ್ಕೆ ಸರಿಯಾದ ಮನ್ನಣೆ ದೊರೆಯಲಿಲ್ಲ. ಆದರೂ ಧೃತಿಗೆಡಲಿಲ್ಲ. ಈ ಆವಿಷ್ಕಾರದ ಮಹತ್ವ ಅರಿತಿದ್ದ ಶಿಕ್ಷಕ ಡಾ. ಜೋಸೆಫ್ ಗೋಥೆ ಲೂಯಿ ಕಂಡು ಹಿಡಿದ ಹೊಸ ವಿಧಾನವನ್ನು ಜನರಿಗೆ ಪರಿಚಯಿಸಿದ. ಅನೇಕರು ನಂಬದಿದ್ದ ಕಾರಣ ಅದನ್ನು ಪರೀಕ್ಷಿಸಿದರು. ಶಿಕ್ಷಕರೊಬ್ಬರು ಓದಿದ ಕೆಲ ಸಾಲುಗಳನ್ನು ಲೂಯಿ ತನ್ನ ಹೊಸ ವಿಧಾನದಲ್ಲಿ ಬರೆದು, ನಂತರ ಓದಿ ತೋರಿಸಿದ. ಲೂಯಿಯ ಸಾಧನೆಯನ್ನು ಗಣ್ಯಮಾನ್ಯರು ಪ್ರಶಂಸಿದರು. ತನ್ನ ಹೊಸ ವಿಧಾನಕ್ಕೆ ಜನರ ಬೆಂಬಲ ದೊರೆತು, ಜಗತ್ತಿನಾದ್ಯಂತ ಇರುವ ಅಂಧರಿಗೆ ನೆರವಾಗಬೇಕೆಂಬ ಕಂಡ ಕನಸು 20 ವರ್ಷಗಳ ನಂತರ, 1844 ರಲ್ಲಿ ನೆರವೆರಿತು. ಲೂಯಿಯ ಹರ್ಷಕ್ಕೆ ಪಾರವೆ ಇರಲಿಲ್ಲ.
ಎರಡು ಬಾರಿ ಶವಸಂಸ್ಕಾರ
ಅಂಧರಿಗೆ ಉಪಯುಕ್ತವಾದ ಲಿಪಿಯನ್ನು ಆವಿಷ್ಕರಿಸದ ಲೂಯಿ ನಂತರ ದಿನಗಳಲ್ಲೂ ಸಾಮಾನ್ಯನಂತೆ ಇದ್ದ. ಹೆಚ್ಚು ಪ್ರಸಿದ್ಧಿಗೊಳ್ಳಲಿಲ್ಲ. 1856 ಕ್ಷಯರೋಗಕ್ಕೆ ತುತ್ತಾಗಿ ಜನವರಿ 6 ರಂದು ಇಹಲೋಕ ತ್ಯಜಿಸಿದ. ಹುಟ್ಟೂರು ಕೂಪವ್ರೆ ಸ್ಮಶಾನದಲ್ಲಿ ಶವ ಹೂಳಲಾಯಿತು. ಲೂಯಿ ನಿಧನದ ನಂತರ ಅವನ ಕೊಡುಗೆ ಬ್ರೆಯ್ಲ್ ಲಿಪಿ ಹೆಚ್ಚು ಪ್ರಸಿದ್ದಿಗೊಂಡು, ವಿಶ್ವವ್ಯಾಪಿಯಾಯಿತು. ಹಲವೆಡೆ ಲೂಯಿ ಹೆಸರಿನಲ್ಲಿ ಅಂಧರ ಶಾಲೆ ಹುಟ್ಟಿಕೊಂಡವು, ಹುಟ್ಟೂರಿನಲ್ಲಿ ಅವನಿಗಾಗಿ ಅಮೃತ ಶಿಲೆಯ ಸ್ಮಾರಕ ನಿರ್ಮಿಸಲಾಯಿತು, ಅನೇಕ ಪತ್ರಿಕೆಗಳು ಅವನ ಸಾಧನೆಯನ್ನು ಕೊಂಡಾಡಿದವು, ಅವನ ನೆನಪಿಗಾಗಿ ಅಂಚೆ ಚೀಟಿ ಬಿಡುಗಡೆಯಾದವು. ಇಂಥಃ ಮಹತ್ವದ ಸಾಧನೆಯನ್ನು ಮನಗಂಡ ಫ್ರ್ಯಾನ್ಸ್ ಸರ್ಕಾರ 1952 ರಲ್ಲಿ ಅಂದರೆ ಲೂಯಿ ನಿಧನದ ನೂರು ವರ್ಷಗಳ ನಂತರ ಕೂಪವ್ರೆ ಸ್ಮಶಾನದಲ್ಲಿದ್ದ ಲೂಯಿಯ ಶವ ಹೊರತೆಗೆದು, ಸಕಲ ಸರ್ಕಾರಿ ಮರ್ಯಾದೆ, ಗೌರವಗಳೊಂದಿಗೆ ಪ್ಯಾರಿಸ್‍ನ ಪಾಂಥೆಯೋ ಸ್ಮಶಾನದಲ್ಲಿ ಮರುಸಂಸ್ಕಾರ ಮಾಡಲಾಯಿತು. ಇಡೀ ಪ್ರಪಂಚದ ಇತಿಹಾಸದಲ್ಲಿ ಯಾವುದೇ ವ್ಯಕ್ತಿಗೆ ಸತ್ತ ಶತಮಾನದ ನಂತರ ಮರುಸಂಸ್ಕಾರ ಹೊಂದಿದ ಉದಾಹರಣೆಯಿಲ್ಲ.
ಭಾರತದಲ್ಲಿ ಬ್ರೆಯ್ಲ್ ಲಿಪಿ
ಲೂಯಿ ಬ್ರೆಯ್ಲ್‍ನ ಲಿಪಿ 1951 ರಲ್ಲಿ ಭಾರತ ಪ್ರವೇಶಿಸಿತು. ಕೆಲವು ಸಾಂಕೇತಿಕ ಬದಲಾವಣೆಯೊಂದಿಗೆ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಬ್ರೆಯ್ಲ್ ಲಿಪಿ ಅಳವಡಿಸಲಾಯಿತು. ಕಾಲ ಕಳೆದಂತೆ ಬ್ರೆಯ್ಲ್ ಲಿಪಿ ಗಣಕಯಂತ್ರಕ್ಕೂ ಅಳವಡಿಸಿ, ಬ್ರೆಯ್ಲ್ ಮುದ್ರಣ ಯಂತ್ರಗಳಿಂದ ಅನೇಕ ಪುಸ್ತಕಗಳನ್ನು ಮುದ್ರಿಸಲಾಯಿತು. ಪ್ರಸ್ತುತ ಅಂಧರಿಗೊಸ್ಕರ ಪುಸ್ತಕ, ಶೈಕ್ಷಣಿಕ ಸಾಮಗ್ರಿ, ಬ್ಲೈಂಡ್ ಸ್ಟಿಕ್ ಇತ್ಯಾದಿ ವಸ್ತುಗಳು ಉತ್ತರಾಖಂಡ ರಾಜ್ಯದ ಡೆಹರಾಡೂನ್ ನಗರದಲ್ಲಿನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವಿಜುಯಲ್ ಹ್ಯಾಂಡಿಕ್ಯಾಪ್ (ಎನ್‍ಐವಿಎಚ್) ಮುಖಾಂತರ ದೇಶದಾದ್ಯಂತ ಪೂರೈಸಲಾಗುತ್ತದೆ.
ತಾನು ಅಂಧನಾಗಿದ್ದು ವಿಶ್ವದ ಇತರ ಅಂಧರ ಬಾಳಿಗೆ ಜ್ಞಾನಾರ್ಜನೆಯ ಬೆಳಕಾಗಿ ಪ್ರಜ್ವಲಿಸಿದ ಲೂಯಿ, ಬದುಕಿನ ಕೊನೆಯವರೆಗೂ ಪ್ರಸಿದ್ಧಿ ಹೊಂದದೆ ಎಲೆ ಮರೆಯ ಕಾಯಿಯಂತೆ ಅಂಧರಿಗಾಗಿ ಶ್ರಮಿಸಿದ. ಪ್ರತಿ ವರ್ಷ ಜನವರಿ 4 ರಂದು ಇಡೀ ಮಾನವ ಕುಲ ಈ ಧಿಮಂತ ವ್ಯಕ್ತಿಯನ್ನು ಸ್ಮರಿಸುತ್ತದೆ.