Saturday, April 1, 2023

Latest Posts

400ಜನರ ಪ್ರಾಣಕ್ಕಾಗಿ ಬೆಂಕಿಯಲ್ಲಿ ಬೆಂದು ಹೋದ ಲೋಕೋಪೈಲೆಟ್‌ ಜೀವನಗಾಥೆ!

-ತ್ರಿವೇಣಿ ಗಂಗಾಧರಪ್ಪ

ಬದ್ಧತೆ ಮತ್ತು ತ್ಯಾಗದ ಪ್ರಜ್ಞೆ ಹೊಂದಿರುವ ಸಾಮಾನ್ಯ ವ್ಯಕ್ತಿ ಧೈರ್ಯ ಮತ್ತು ಶೌರ್ಯದ ಕಾರ್ಯವನ್ನು ನಿರ್ವಹಿಸಲು ಸಮರ್ಥನಾಗಿರುತ್ತಾನೆ ಎಂಬುದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕಿಲ್ಲ.  1956 ರಲ್ಲಿ, ಆಂಗ್ಲೋ-ಇಂಡಿಯನ್ ರೈಲ್ವೇ ಇಂಜಿನ್ ಡ್ರೈವರ್ ಮನಸರ್ ಜೋಹಾನ್ಸ್ 400ಪ್ರಯಾಣಿಕರ ಪ್ರಾಣ ಉಳಿಸಿದ ಮಹಾನ್‌ ವ್ಯಕ್ತಿಯಾಗಿ ಉಳಿದುಹೋಗಿದ್ದಾರೆ.

1956 ರ ಜುಲೈ 25 ಮತ್ತು 26ರ ನಡುರಾತ್ರಿಯಲ್ಲಿ ಹೌರಾ-ಆದ್ರಾ-ಚಕ್ರಧರಪುರ ಪ್ಯಾಸೆಂಜರ್ ರೈಲು 400 ಪ್ರಯಾಣಿಕರನ್ನು ಹೊತ್ತು ಸಾಗುತ್ತಿತ್ತು. ಸುಖ ನಿದ್ರೆಯಲ್ಲಿದ್ದ ಜನರ ಜೀವನದಲ್ಲಿ ವಿಧಿ ಇನ್ನೇನೋ ಆಟವಾಡಲು ಬಯಸಿ ಬೆಂಕಿಯನ್ನು ಉಗುಳಿತ್ತು. ಬೆಂಕಿ ಜ್ವಾಲೆಗೆ ನಲುಗಿಹೋದ ಜೋಹಾನ್ಸ್ ಮತ್ತು ಇಬ್ಬರು ಅಗ್ನಿಶಾಮಕ ಸಿಬ್ಬಂದಿಗೆ ಜನರ ಪ್ರಾಣ ಉಳಿಸವುದು ಒಂದು ಸವಾಲಿನ ಸಂಗತಿಯಾಗಿದ್ದೂ ನಿಜಕ್ಕೂ ಸುಳ್ಳಲ್ಲ. ಸಾರಿಗೆ ಮತ್ತು ವಿದ್ಯುತ್ ಚಲನಶೀಲತೆಯ ಕುರಿತು NITI ಆಯೋಗದ ಸಲಹೆಗಾರ ಸುಧೆಂದು ಜೆ ಸಿನ್ಹಾ ಅವರ ಮಾತಿನಂತೆ ಯಾರೂ ಉಳಿಯದೆ ಸುಟ್ಟು ಬೂದಿಯಾಗುವ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿತ್ತು.

ಅಗ್ನಿಶಾಮಕ ಸಿಬ್ಬಂದಿ ರೈಲಿನಿಂದ ಜಿಗಿಯಲು ಯೋಚಿಸಿದರು. ಆದರೆ ವಿಧಿ ಬೇರೆಯೇ ಆಟವಾಡಿ ಒಂದೊಂದೇ ಬೋಗಿಗೆ ಹರಡಲು ಪ್ರಾರಂಭ ಮಾಡಿತು. ಈಗ ರೈಲನ್ನು ನಿಲ್ಲಿಸುವುದು ಮತ್ತು ಇತರ ಕೋಚ್‌ಗಳಿಗೆ ಬೆಂಕಿ ಹರಡುವುದನ್ನು ತಡೆಯುವುದು ಇವರ ಮುಂದಿರುವ ಏಕೈಕ ಆಯ್ಕೆ. ಅಗ್ನಿಶಾಮಕ ಸಿಬ್ಬಂದಿಯೊಬ್ಬರು ನೋವಿನಿಂದ ನರಳುತ್ತಿದ್ದರೆ, ಮತ್ತೊಬ್ಬರು ರೈಲಿನಿಂದ ಜಿಗಿಯಲು ಮ್ಯಾಕ್‌ಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಚಾಲಕ, “ಇದು ಸರಕುಗಳ ರೈಲು ಅಲ್ಲ ಎಂದು ನಿಮಗೆ ತಿಳಿದಿದೆ. ಇದು ಅಮಾಯಕ ನಾಗರಿಕರಿರುವ ಪ್ಯಾಸೆಂಜರ್ ರೈಲು. ನನ್ನ ಕೊನೆಯ ಉಸಿರು ಇರುವವರೆಗೂ ಶ್ರಮಿಸುತ್ತೇನೆ” ಎಂದ ಧೀರ ಈತ

ಜೋಹಾನ್ಸ್ ರೈಲನ್ನು ಬ್ರೇಕ್ ಮಾಡುವತ್ತ ತಮ್ಮ ಗಮನವನ್ನು ಹರಿಸಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವಂತೆ ಅಗ್ನಿಶಾಮಕ ಸಿಬ್ಬಂದಿಗೆ ಮನವಿ ಮಾಡಿದರು. ಚಲಿಸುವ ರೈಲಿನಿಂದ ಸುರಕ್ಷಿತವಾಗಿ ಹೇಗೆ ಜಿಗಿಯಬೇಕು ಎಂದು ಮಾರ್ಗದರ್ಶನ ನೀಡಿದರು. ಇಬ್ಬರು ಅಗ್ನಿಶಾಮಕ ದಳದವರು ರೈಲಿನಿಂದ ಜಿಗಿಯುತ್ತಿದ್ದಂತೆ ಬೆಂಕಿಯು ಸಂಪೂರ್ಣವಾಗಿ ಆವರಿಸಲು ಪ್ರಾರಂಭಿಸಿತು, ಆದರೆ ಮ್ಯಾಕ್, ನೋವಿನಿಂದ ನರಳುತ್ತಾ, ಈ ರೈಲನ್ನು ಸುರಕ್ಷಿತವಾಗಿ ಎಳೆಯುವ ತನ್ನ ನಿರ್ಣಯದಲ್ಲಿ ದೃಢನಸಂಕಲ್ಪದಿಂದ ಪ್ರಯತ್ನ ಮುಂದುವರಿಸಿದ್ದಾನೆ. ನೋವು ಹೆಚ್ಚಾದಂತೆ ಜನರನ್ನು ಉಳಿಸುವ ಅವನ ಗಮ್ಯ ಕೂಡ ಹೆಚ್ಚುತ್ತಾ ಹೋಗಿದೆ. ಖರಗ್‌ಪುರ ನಿಲ್ದಾಣದ ಹೊರಗಿನ ಸಿಗ್ನಲ್‌ಗೆ ಬರುತ್ತಿದ್ದಂತೆ, ತನ್ನ ಶಕ್ತಿ ಪ್ರಯೋಗಿಸಿ ಬ್ರೇಕ್ ಲಿವರ್ ಅನ್ನು ಎಳೆಯುತ್ತಿದ್ದಂತೆ, ದೇವರು ಕೂಡ ಜನರ ಪರವಾಗಿದ್ದ ಅನಿಸುತ್ತೆ ಅದ್ಭುತವೆಂಬಂತೆ ರೈಲು ಕ್ರಮೇಣ ನಿಲುಗಡೆಯಾಯಿತು. ಎಲ್ಲಾ 400 ಪ್ರಯಾಣಿಕರೊಂದಿಗೆ ಖರಗ್‌ಪುರ ನಿಲ್ದಾಣದ ಹೊರಗಿನ ಸಿಗ್ನಲ್‌ನ ಸ್ವಲ್ಪ ದೂರದಲ್ಲಿ ರೈಲು ನಿಂತಿತು. ಗಾಢ ನಿದ್ದೆಯಲ್ಲಿದ್ದ ಜನರಿಗೆ ಏನಾಗುತ್ತಿದೆ ಎಂಬ ಅರಿವೂ ಇಲ್ಲ.

ರೈಲು ನಿಂತ ಕೂಡಲೇ ತಕ್ಷಣ ಇಂಜಿನ್ ಅನ್ನು ಬೇರ್ಪಡಿಸಲಾಯಿತು, ಜನರನ್ನು ರಕ್ಷಿಸುವ ಕೆಲಸ ಭರದಿಂದ ಸಾಗಿತು. ಇತ್ತ ಸಾಹಸಿ ಯುವಕ ಜೋಹಾನ್ಸ್ ಕಾಪಾಡಲು ಧಾವಿಸಿದರು, ಸುಟ್ಟ ಗಾಯಗಳಿಂದ ಬಿದ್ದದ್ದ ಅವರನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರೂ ದುರದೃಷ್ಟವಶಾತ್‌ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

400ಜನರ ಜೀವ/ಜೀವನದ ಜೊತೆ ಈ ಚಾಲಕನ ತ್ಯಾಗ ಇದೆ ಎಂಬುದು ಇಂದಿಗೂ ಅದೆಷ್ಟೂ ಜನರಿಗೆ ತಿಳಿದಿಲ್ಲ. ಅವರ ನಿಷ್ಕಳಂಕ ಸಮವಸ್ತ್ರ, ಸುಟ್ಟ ಕೈಗಳು, ಅಂತಿಮ ತ್ಯಾಗದ ಸ್ಮರಣಿಕೆಯಾಗಿದೆ. ರಾತ್ರಿ ಅಸಾಧಾರಣ ಶೌರ್ಯಕ್ಕಾಗಿ, ಖರಗ್‌ಪುರ ಸಿಬ್ಬಂದಿ ಬೇಸ್‌ನ ಆಂಗ್ಲೋ-ಇಂಡಿಯನ್ ಇಂಜಿನ್ ಡ್ರೈವರ್‌ಗೆ ಮರಣೋತ್ತರವಾಗಿ 1957 ರಲ್ಲಿ ಕೀರ್ತಿ ಚಕ್ರವನ್ನು ನೀಡಲಾಯಿತು. ರಾಷ್ಟ್ರಪತಿ ಡಾ ರಾಜೇಂದ್ರ ಪ್ರಸಾದ್ ಜೋಹಾನ್ಸ್ ಪತ್ನಿ ಮಾರ್ಜೋರಿ ಮತ್ತು ಅವರ ಕಿರಿಯ ಪುತ್ರ ಮೈಕೆಲ್‌ಗೆ ಪದಕವನ್ನು ಹಸ್ತಾಂತರಿಸಿದರು.

ಸ್ವಾರ್ಥದಿಂದ ಯೋಚಿಸಿ ತಾನೂ ಹೊರಗೆ ಜಿಗಿದಿದ್ದರೆ, 400ಜನರ ಜೀವ ಬೆಂಕಿಯಲ್ಲಿ ಸಜೀವ ದಹನವಾಗುತ್ತಿತ್ತು. ತ್ಯಾಗ, ಶೌರ್ಯದ ಹಿಂದೆ ಅಂದು 400 ಜನರ ಕುಟುಂಬಗಳ ಮುಖದಲ್ಲಿ ನಗು ಜೀವಂತವಾಗಿತ್ತು. ತನ್ನ ಮನೆಯ ದೀಪ ಆರಿಸಿ, ಉಳಿದವರ ಮನೆಯ ದೀಪ ಬೆಳಗಿದ ಮಹಾನ್‌ ವ್ಯಕ್ತಿ ಈತ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!