Monday, March 27, 2023

Latest Posts

ಮುರಿದ ಕೈಯಲ್ಲೇ ಕಾಶ್ಮೀರ ರಕ್ಷಿಸಿದ ಪರಮವೀರನ ಕತೆ

-ಗಣೇಶ ಭಟ್, ಗೋಪಿನಮರಿ

“ಹಲವು ಹೂಗಳು ಅರಳುತ್ತವೆ.. ಅರಳಿ ಬಾಡಿ ಉದುರುತ್ತವೆ. ಅವುಗಳನ್ನು ಯಾರು ಲೆಕ್ಕಿಸುತ್ತಾರೆ? ಆದರೆ ಗಜೇಂದ್ರ ಶ್ರೀಹರಿಯ ಪೂಜೆಗೆಂದು ಸೊಂಡಿಲಿನಿಂದ ಕೊಯ್ದು ಅರ್ಪಿಸಿದ ತಾವರೆಯೇ ಧನ್ಯವಲ್ಲವೇ ?” ಎಂಬ ಸಾವರ್ಕರರ ಮಾತಿನಂತೆ ಕೆಲವೇ ಕೆಲವರು ಮಾತ್ರ ತಾಯಿಭಾರತಿಗೆ ತಮ್ಮ ಯೌವ್ವನವನ್ನರ್ಪಿಸಿ ಬದುಕನ್ನು ಧನ್ಯವಾಗಿಸಿಕೊಂಡು ಬಿಡುತ್ತಾರೆ. ಅಂಥಹ ಕೆಲವೇ ಕೆಲವು ಅಪ್ರತಿಮ ವ್ಯಕ್ತಿತ್ವಗಳನ್ನು ಸ್ಮರಿಸಲೇ ಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ಹಿನ್ನೆಲೆಯಲ್ಲಿ ದೇಶದ ರಕ್ಷಣೆಗೆ ಹೋರಾಡುತ್ತ ಪ್ರಾಣವನ್ನೇ ಅರ್ಪಿಸಿದ, ತಾಯಿ ಭಾರತಿಯನ್ನು ರಕ್ಷಿಸಲು ಕ್ಷಾತ್ರ ತೇಜದಿಂದ ಹೋರಾಡಿ ಅಪ್ರತಿಮ ಶೌರ್ಯ ಮೆರೆದು ಸೇನೆಯ ಅತ್ಯುನ್ನತ ಗೌರವ ಪಡೆದ ʼಪರಮ ವೀರ ಚಕ್ರʼ ಪುರಸ್ಕೃತರ ಕುರಿತಾದ ಲೇಖನ ಮಾಲೆ ನಿಮಗಾಗಿ…

************************************
ಮೇಜರ್. ಸೋಮನಾಥ ಶರ್ಮಾ

ಪರಕೀಯರ ಆಕ್ರಮಣದಿಂದ ದೇಶ ಸ್ವತಂತ್ರಗೊಂಡು ಕೆಲವೇ ತಿಂಗಳುಗಳು ಕಳೆದಿತ್ತಷ್ಟೇ, ದುರದೃಷ್ಟವಶಾತ್‌ ದೇಶ ಇಬ್ಭಾಗವಾಗಿತ್ತು. ವರ್ಷದ ಹಿಂದೆ ನಮ್ಮವರೇ ಆಗಿದ್ದವರು ಇದೊಂದು ಕಾರಣದಿಂದ ಪಾಕಿಸ್ತಾನಿಗಳಾಗಿ ನಮ್ಮ ಎದುರಾಳಿಗಳಾಗಿ ನಿಂತಿದ್ದರು. ಕಾಶ್ಮೀರ ವಿಷಯದಲ್ಲಿ ನಡೆದ ತಿಕ್ಕಾಟ ಯುದ್ಧಕ್ಕೆ ಕಾರಣವಾಗಿತ್ತು. ಬದ್ಗಾಮ್‌ ಜಿಲ್ಲೆಯಲ್ಲಿ ಪಾಕಿಸ್ತಾನಿ ಸೈನ್ಯ ಮುನ್ನುಗ್ಗಿ ಬರುತ್ತಿದ್ದ ಸಂದರ್ಭದಲ್ಲಿ ಅವರಿಗೆ ತಡೆಗೋಡೆಯಾಗಿ ನಿಂತವರೇ ʼಮೇಜರ್.‌ ಸೋಮನಾಥ್‌ ಶರ್ಮಾʼ. ಅವರ ತುಕಡಿಯಲ್ಲಿದ್ದ ಸೈನಿಕರ ಸಂಖ್ಯೆಯನ್ನು ಮೀರಿ ಮುನ್ನುಗ್ಗಿ ಬಂದ ಶತ್ರು ಸೈನ್ಯವನ್ನು ಹಿಮ್ಮೆಟ್ಟಿಸುತ್ತ ಹೋರಾಡುತ್ತಲೇ ಪ್ರಾಣತೆತ್ತವರಿವರು.

ಹುಟ್ಟಿದ್ದು ಹಿಮಾಚಲ ಪ್ರದೇಶದ ಕಂಗ್ರಾದ ದಾದ್ ಜಿಲ್ಲೆಯಲ್ಲಿ 1923ನೇ ಇಸವಿಯ ಜನವರಿ 31 ರಂದು. ಮಿಲಿಟರಿ ಕುಟುಂಬದಲ್ಲಿಯೇ ಜನಸಿದ್ದರಿಂದ ಸಹಜವಾಗಿಯೇ ಹೋರಾಡುವ ಮನೋಬಲ ರಕ್ತಗತವಾಗಿತ್ತು. ಅವರ ತಂದೆ, ಸಹೋದರರು ಮತ್ತು ಸಹೋದರಿ ಎಲ್ಲರೂ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದರು. ಅವರ ತಂದೆ, ಮೇಜರ್ ಜನರಲ್ ವಿಶ್ವನಾಥ್ ಶರ್ಮಾ ಸೇನಾಧಿಕಾರಿಯಾಗಿದ್ದವರು. ಮಿಲಿಟರಿ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿ ಸೇನೆಗೆ ಸೇರಿದ್ದು ಫೆಬ್ರವರಿ 22, 1942 ರಂದು. ಆಗಿನ್ನೂ ವಯಸ್ಸು 20 ದಾಟಿರಲಿಲ್ಲ. ಬ್ರಿಟಿಷ್ ಭಾರತೀಯ ಸೇನೆಯ 8 ನೇ ಬೆಟಾಲಿಯನ್, 19 ನೇ ಹೈದರಾಬಾದ್ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸಿದರು. ಬ್ರಿಟಿಷ್ ಸೈನ್ಯದೊಂದಿಗೆ ಬರ್ಮಾದಲ್ಲಿ ಜನರಲ್ ಕೆ ಎಸ್ ತಿಮ್ಮಯ್ಯರೊಂದಿಗೆ ಎರಡನೇ ವಿಶ್ವ ಸಮರದಲ್ಲಿ ಭಾಗವಹಿಸಿ ಸೇನೆಯಲ್ಲಿ ಪ್ರಸಿದ್ಧಿ ಗಳಿಸಿದ್ದರು.

ಅದು ನವೆಂಬರ್ 03, 1947. ಶತ್ರು ಸೈನ್ಯವು ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಬದ್ಗಾಮ್‌ ಪ್ರದೇಶದತ್ತ ನುಗ್ಗಿ ಬರುತ್ತಿತ್ತು. ಆಗ ಮೇಜರ್. ಸೋಮನಾಥ್‌ ಶರ್ಮಾರಿದ್ದ 4ನೇ ಕುಮಾಂವ್‌ ರೆಜಿಮೆಂಟಿಗೆ ಈ ಪ್ರದೇಶದ ಉಸ್ತುವಾರಿ ನೀಡಲಾಯಿತು. ಆದರೆ ಶರ್ಮಾ ಕೈ ಮುರಿದುಕೊಂಡಿದ್ದರು. ಹಾಕಿ ಆಡುವ ಸಂದರ್ಭದಲ್ಲಿ ಏಟಾಗಿ ಕೈ ಮುರಿದುಹೋದ ಕಾರಣ ಪ್ಲಾಸ್ಟರ್ ಹಾಕಲಾಗಿತ್ತು. ಇಡೀ ರೇಜಿಮೆಂಟು ಸೇನಾ ಕಾರ್ಯಾಚರಣೆಗೆಂದು ತೆರಳುತ್ತಿರುವಾಗ ಒಬ್ಬ ನಿಜವಾದ ವೀರನ ರಕ್ತ ಸುಮ್ಮನಿರುತ್ತದೇನು? ಶರ್ಮಾ ಅಂಥಹ ವೀರರ ಸಾಲಿಗೆ ಸೇರಿದವರು. ಮುರಿದ ಕೈಯ್ಯಲ್ಲೇ ಶತ್ರುವಿನ ವಿರುದ್ಧ ಹೋರಾಡಲು ಹೊರಟೇ ಬಿಟ್ಟರು.

ಸೇನೆ ಹಾಗು ದೇಶದ ರಕ್ಷಣೆಯ ದೃಷ್ಟಿಯಿಂದ ಬದ್ಗಾಂನಲ್ಲಿಯೇ ಶತ್ರುವನ್ನು ಹಿಮ್ಮೆಟ್ಟಿಸುವುದು ಅತ್ಯಂತ ಅಗತ್ಯವಾಗಿತ್ತು. ಏಕೆಂದರೆ ಒಂದು ವೇಳೆ ಬದ್ಗಾಂ ಕೈ ತಪ್ಪಿ ಹೋದರೆ ಅವರ ಮುಂದಿನ ದಾಳಿ ನೇರವಾಗಿ ಶ್ರೀನಗರದ ಮೇಲೆಯೇ ಆಗುತ್ತದೆ. ಶ್ರೀನಗರದಲ್ಲಿ ವಿಮಾನ ನಿಲ್ದಾಣ ಇತ್ಯಾದಿ ವ್ಯವಸ್ಥೆಗಳಿದ್ದವು. ಹಾಗಾಗಿ ಪೂರೈಕೆ, ಸಂಪರ್ಕ ಎಲ್ಲಾದೃಷ್ಟಿಯಿಂದಲೂ ಶ್ರೀನಗರವನ್ನು ಯಾವುದೇ ಕಾರಣಕ್ಕೂ ಕಾಪಾಡಬೇಕಿತ್ತು.

500ಕ್ಕೂ ಹೆಚ್ಚು ದಾಳಿಕೋರರು ಗುಲ್ಮಾರ್ಗ ಮಾರ್ಗದಿಂದ ಬದ್ಗಾಮ್‌ ಗೆ ನುಗ್ಗಿ ಬಂದು ಬದ್ಗಾಮಿನಲ್ಲಿದ್ದ ಶರ್ಮಾರ ಕಂಪನಿಯನ್ನು ಮೂರು ಕಡೆಗಳಿಂದ ಸುತ್ತುವರೆದು ಬಾಂಬು ಗುಂಡುಗಳ ದಾಳಿ ಮಾಡಲಾರಂಭಿಸಿದರು. ಒಬ್ಬ ಭಾರತೀಯ ಸೈನಿಕನ ಬದಲಾಗಿ ಏಳುಜನ ಶತ್ರು ಸೈನಿಕರಿದ್ದರು. ಆದರೆ ಶರ್ಮಾ ದೃತಿಗೆಡಲಿಲ್ಲ. ತಮ್ಮ ಕಂಪನಿಗೆ ಹುರಿದುಂಬಿಸಿದರು. ಪ್ರತಿ ರಕ್ಷಣಾ ಪೋಸ್ಟ್‌ ಗೂ ಓಡಾಡುತ್ತ ಸೈನಿಕರನ್ನು ಪ್ರೇರೇಪಿಸಿದರು. “ಶತ್ರುಗಳು ನಮ್ಮಿಂದ 50ಗಜ ದೂರದಲ್ಲಿದ್ದಾರೆ. ನಮಗಿಂತ ಜಾಸ್ತಿ ಸಂಖ್ಯೆಯಲ್ಲಿದ್ದಾರೆ. ಆದರೇನಂತೆ ನಾನಂತೂ ಒಂದಿಂಚೂ ಹಿಂದೆ ಸರಿಯುವುದಿಲ್ಲ. ಶತ್ರುವನ್ನು ಮಟ್ಟಹಾಕುವವರೆಗೂ.. ನಮ್ಮ ಕೊನೆಯ ವ್ಯಕ್ತಿ, ಕೊನೆಯ ಗುಂಡು ಇರುವವರೆಗೂ ಹೋರಾಡುತ್ತೇವೆ” ಎಂಬ ಸಂದೇಶವನ್ನು ಕೇಂದ್ರಕ್ಕೆ ರವಾನಿಸಿದವರೇ ಮುರಿದ ಕೈಯ್ಯಲ್ಲೇ ಬಂದೂಕು ಹಿಡಿದು ಶತ್ರುವಿನ ಮೇಲೆ ಎರಗಿದರು. ಹೀಗೇ ವೀರಾವೇಶದಿಂದ ಹೋರಾಡುವಾಗ ಅವರ ಬಳಿಯೇ ಶತ್ರುವಿನ ಶೆಲ್‌ ಬಾಂಬ್‌ ಒಂದು ಸ್ಫೋಟಗೊಂಡಿತು. ವೀರಾವೇಶದಿಂದ ಹೋರಾಡುತ್ತ ಮೇಜರ್.‌ ಸೋಮನಾಥ ಶರ್ಮಾ ಆತ್ಮಾಹುತಿಗೈದರು.

ಹೀಗೆ ಕಾಶ್ಮೀರದ ಮೇಲೆರಗಿ ಬಂದ ಶತ್ರುವಿನ ವಿರುದ್ಧ ವೀರಾವೇಶದಿಂದ ಹೋರಾಡಿದ ಮೇಜರ್‌ ಸೋಮನಾಥ್‌ ಶರ್ಮಾ ಅವರು ತೋರಿದ ಅಪ್ರತಿಮ ಸಾಹಸ, ಶೌರ್ಯಕ್ಕೆ ಅವರಿಗೆ ಸೇನೆಯ ಅತ್ಯುನ್ನತ ಗೌರವವಾದ ಪರಮ ವೀರ ಚಕ್ರ ನೀಡಿ ಸನ್ಮಾನಿಸಲಾಗಿದೆ. ಇತ್ತಿಚೇಗೆ ಅಂಡಮಾನಿನ ದ್ವೀಪವೊಂದಕ್ಕೆ ಅವರ ಹೆಸರಿಡುವ ಮೂಲಕ ಅವರನ್ನು ಅಮರರನ್ನಾಗಿಸಲಾಗಿದೆ. ಸ್ವತಂತ್ರ ಭಾರತದ ಮೊದಲ ಪರಮವೀರ ಚಕ್ರ ಪಡೆದವರೆಂದರೆ ಅದು ಮೇಜರ್‌ ಸೋಮನಾಥ್‌ ಶರ್ಮಾ. ಅವರ ಸಾಹಸ, ನಾಯಕತ್ವ ಮತ್ತು ಮಣಿಯದ ಹೋರಾಟದ ಮನೋಭಾವ ನಮ್ಮೆಲ್ಲರಿಗೂ ಪ್ರೇರಣೆಯನ್ನೀಯಲಿ ಎಂಬುದು ಎಂದಿನ ಆಶಯ

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!