ಗನ್‌ ಇಟ್ಟುಕೊಂಡು ಸಿಎಂಗೆ ಹಾರ ಹಾಕಿದ ವ್ಯಕ್ತಿ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭಾ ಚುನಾವಣೆ ಹಿನ್ನೆಲೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ರೋಡ್‌ ಶೋ ನಡೆಸುವ ವೇಳೆ ಸೊಂಟದಲ್ಲಿ ಗನ್‌ ಇಟ್ಟುಕೊಂಡಿದ್ದ ವ್ಯಕ್ತಿ ಸಿಎಂಗೆ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ನಾಯಕರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ (R Ashok) ತೀವ್ರ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್‌ ಕಾರ್ಯಕರ್ತರು ಗನ್‌ ಇಟ್ಟುಕೊಂಡು ಓಡಾಡುವ ಮೂಲಕ ತಮ್ಮದು ಗೂಂಡಾ ರಾಜ್ಯ ಎಂದು ತೋರಿಸಿಕೊಂಡಿದ್ದಾರೆ. ಇಂತಹ ಘಟನೆಯಿಂದ ಪೊಲೀಸ್‌ ಇಲಾಖೆ ಬದುಕಿದ್ದೂ ಸತ್ತಂತಾಗಿದೆ ಎಂದು ಹೇಳಿದರು.

ಚುನಾವಣೆಯ ಸಂದರ್ಭದಲ್ಲಿ ಒಂದು ತಿಂಗಳು ಮುಂಚಿತವಾಗಿ ಗನ್‌ ವಾಪಸ್‌ ಕೊಡಬೇಕಾಗಿತ್ತು. ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದೆ ಎಂಬ ಕಾರಣಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು ಪೊಲೀಸರ ಮೇಲೆ ಒತ್ತಡ ಹಾಕಿ ಗನ್‌ ಅನ್ನು ಜೇಬಿನಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಇದು ಕಾಂಗ್ರೆಸ್‌ ಕಾರ್ಯಕರ್ತರೇ ಮಾಡುತ್ತಿರುವ ರೌಡಿಸಂ. ಅಂತಹವರು ಮುಖ್ಯಮಂತ್ರಿಗಳಿಗೆ ಹಾರ ಹಾಕುವ ಮೂಲಕ ನಾವು ಕಾನೂನು ಪಾಲನೆ ಮಾಡಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಇದೇ ಕಾಂಗ್ರೆಸ್ಸಿನ ಗೂಂಡಾ ರಾಜ್ಯ ಎಂದು ಆರ್.‌ ಅಶೋಕ್‌ ವಾಗ್ದಾಳಿ ನಡೆಸಿದರು.

ಇದು ಅತಿ ದೊಡ್ಡ ಭದ್ರತಾ ವೈಫಲ್ಯವಾಗಿದೆ. ಇನ್ನು ನಾಳೆಯ ದಿನಗಳಲ್ಲಿ ಯಾರಾದರೂ ಬಾಂಬ್‌ ಇಟ್ಟುಕೊಂಡು ಓಡಾಡಬಹುದು. ಇಂತಹ ಘಟನೆಯಿಂದ ಪೊಲೀಸ್‌ ಇಲಾಖೆ ಬದುಕಿದ್ದೂ ಸತ್ತಂತಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ನಾನು ಸದನದಲ್ಲೇ ಹೇಳಿದ್ದೆ. ಇದು ಕೂಡ ಒಂದು ನಿದರ್ಶನ. ಇದಕ್ಕೆ ಸರ್ಕಾರ ಏನು ಉತ್ತರ ಕೊಡಲಿದೆ ಎಂದು ಜನರು ನಿರೀಕ್ಷಿಸುತ್ತಿದ್ದಾರೆ. ಈ ಕುರಿತು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಲಿದೆ ಎಂದು ಆರ್.‌ ಅಶೋಕ್‌ ತಿಳಿಸಿದರು.

ಬಿ.ವೈ. ವಿಜಯೇಂದ್ರ ವಾಗ್ದಾಳಿ
ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಹೊತ್ತಿನಲ್ಲಿ ಕಾಂಗ್ರೆಸ್ ಪಕ್ಷದ ರೋಡ್ ಶೋ ವೇಳೆ ಗನ್ ಇಟ್ಟುಕೊಂಡ ವ್ಯಕ್ತಿಯೊಬ್ಬ ಮುಖ್ಯಮಂತ್ರಿಗಳಿಗೆ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹಾರ ಹಾಕಿರುವ ಘಟನೆ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಬಿ.ವೈ. ವಿಜಯೇಂದ್ರ ಆತಂಕ ವ್ಯಕ್ತಪಡಿಸಿದ್ದಾರೆ.

ನೀತಿ ಸಂಹಿತೆ ಜಾರಿಯಾದ ಬೆನ್ನಲೇ ಸ್ವರಕ್ಷಣೆಗಾಗಿ ಗನ್ ಲೈಸನ್ಸ್ ಪಡೆದು ತಮ್ಮ ಬಳಿ ಇಟ್ಟುಕೊಳ್ಳುವವರಿಂದ ಆಯುಧಗಳನ್ನು ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೂ ಸ್ವಾಧೀನಕ್ಕೆ ತೆಗೆದು ಕೊಳ್ಳುವ ಪೋಲಿಸರು ಈ ವ್ಯಕ್ತಿಯಿಂದ ಗನ್ ಏಕೆ ವಶಕ್ಕೆ ಪಡೆದುಕೊಂಡಿಲ್ಲ ಎಂಬುದು ನಿಗೂಢ ಪ್ರಶ್ನೆಯಾಗಿದೆ. ಈ ವ್ಯಕ್ತಿಯಾರು? ಈತನ ಹಿನ್ನಲೆ ಏನು ಎಂಬ ಬಗ್ಗೆ ತನಿಖೆಯಾಗಬೇಕಿದೆ. ಕಾಂಗ್ರೆಸ್ ಎಂಥವರನ್ನು ಕಟ್ಟಿಕೊಂಡು ಚುನಾವಣೆ ನಡೆಸಲು ಹೊರಟಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಒದಗಿಸಿದೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ವಿಧ್ವಂಸಕರ ಅಟ್ಟಹಾಸ ಮರುಕಳಿಸುತ್ತಲೇ ಇದ್ದು ಇಂದಿನ ಈ ಘಟನೆಯ ಕುರಿತು ಚುನಾವಣಾ ಆಯೋಗ ಗಂಭೀರ ಕ್ರಮಕ್ಕೆ ಮುಂದಾಗಬೇಕಿದೆ, ಇದರ ಜತೆಗೇ ಸಮಾಜಘಾತುಕ ಶಕ್ತಿಗಳ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟು ಶಾಂತಿಯುತ ಮತದಾನಕ್ಕೆ ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕೆಂದು ಒತ್ತಾಯಿಸುವೆ ಎಂದು ಗುಡುಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!