ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಆಟೋವೊಂದರ ಮುಂಭಾಗದಲ್ಲಿ ಮೆಟಾ ಕಂಪನಿಯ ಐಡಿ ಕಾರ್ಡ್ ತೂಗುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಇದರ ಹಿನ್ನೆಲೆಯಲ್ಲಿ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿವೆ.
ಈ ವಿಡಿಯೋವನ್ನು ಸಿದ್ಧಾಂತ್ ಸಿಂಗ್ ರಜಪೂತ್ ಎಂಬ ವ್ಯಕ್ತಿ ಹಂಚಿಕೊಂಡಿದ್ದಾರೆ. ಪ್ರಯಾಣಿಕರ ಆಸನದಿಂದ ಚಿತ್ರೀಕರಿಸಿದ ದೃಶ್ಯದಲ್ಲಿ ಆಟೋ ಚಾಲಕ ವಾಹನ ಓಡಿಸುತ್ತಿರುವುದು ಗೋಚರಿಸುತ್ತದೆ. ಆದರೆ, ಹೆಚ್ಚು ಗಮನ ಸೆಳೆಯುವುದು ಆಟೋ ಮೇಲ್ಭಾಗದಲ್ಲಿ ತೂಗುತ್ತಿರುವ ಮೆಟಾ ಸಂಸ್ಥೆಯ ಗುರುತಿನ ಚೀಟಿ. ಆರಂಭದಲ್ಲಿ ಅದು ಚಾಲಕನದ್ದೇ ಎಂದು ಹೇಳಲಾಗಿದ್ದರೂ, ನಂತರ ಅದರ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಇದನ್ನೂ ಓದಿ:
ವಿಡಿಯೋ ವೈರಲ್ ಆದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಚಾಲಕ ಹಿಂದೊಮ್ಮೆ ಮೆಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವನಾಗಿರಬಹುದು, ಉದ್ಯೋಗ ಕಳೆದುಕೊಂಡ ನಂತರ ಆಟೋ ಓಡಿಸುತ್ತಿದ್ದಾನೆ ಎಂಬ ಊಹೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು, ಪ್ರಯಾಣಿಕರೊಬ್ಬರು ಐಡಿ ಕಾರ್ಡ್ ಮರೆತುಹೋಗಿರಬಹುದು ಎಂದು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಟೆಕ್ ಕ್ಷೇತ್ರದಲ್ಲಿ ನಡೆಯುತ್ತಿರುವ ಉದ್ಯೋಗ ಕಡಿತಗಳ ಹಿನ್ನೆಲೆ, ಈ ಘಟನೆ ಹೆಚ್ಚು ಗಮನ ಸೆಳೆದಿದೆ. ಆದರೆ, ಆ ಐಡಿ ಕಾರ್ಡ್‌ನ ಮೂಲ ಮತ್ತು ಅದರ ಹಿಂದೆ ಇರುವ ನಿಜಾಂಶ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.



