ಹೊಸದಿಗಂತ ವರದಿ, ವಿಜಯಪುರ:
ಅಪ್ರಾಪ್ತ ವಯಸ್ಕ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರಗೈದ ಅರೋಪಿಗೆ ಜಿಲ್ಲಾ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ, 28 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಜಿಲ್ಲೆಯ ಬಬಲೇಶ್ವರದ ಶ್ರೀಧರ ದಶರಥ ಇಮ್ಮನದ ಶಿಕ್ಷೆಗೆ ಗುರಿಯಾದ ವ್ಯಕ್ತಿ.
ಶ್ರೀಧರ ಇಮ್ಮನದ ಈತನು, ವಿಜಯಪುರದ 13 ವರ್ಷದ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದ, ಅಂಗಡಿಗೆ ಸಾಮಾನು ತರಲು ಹೋಗಿದ್ದ ಬಾಲಕಿಯನ್ನು ಶ್ರೀಧರ ಕರೆದುಕೊಂಡು ಹೋಗಿ ಅಥಣಿಯಲ್ಲಿರುವ ತನ್ನ ಸಂಬಂಧಿಕರ ಖಾಲಿ ಮನೆಯಲ್ಲಿಟ್ಟಿದ್ದನು. ಅಕ್ರಮವಾಗಿ ಇರಿಸಿದ್ದಲ್ಲದೇ ಲೈಂಗಿಕ ಸಂಬಂಧವೂ ಬೆಳೆಸಿದ್ದನು. ಈ ಬಗ್ಗೆ ಗಾಂಧಿಚೌಕ್ ಠಾಣೆಯಲ್ಲಿ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ರಾಮ ನಾಯಕ ಅವರು ಸಾಕ್ಷಾಧಾರಗಳು ರುಜುವಾತಾದ ಹಿನ್ನೆಲೆ ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ 28 ಸಾವಿರ ರೂ.ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಸರ್ಕಾರದ ಪರವಾಗಿ ಅಭಿಯೋಜಕ ವಿ.ಜಿ. ಹಗರಗುಂಡ ವಾದ ಮಂಡಿಸಿದ್ದರು.