ದೇಶವಾಸಿಗಳ ಚಿತ್ತ ಕೆಂಪು ಕೋಟೆಯತ್ತ: ನಾಳೆ 9ನೇ ಬಾರಿಗೆ ದೇಶವನ್ನುದ್ದೇಶಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ನಾಳೆ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರ ಧ್ವಜಾರೋಹಣ ಮಾಡಿ ದೇಶವನ್ನುದ್ದೇಶಿ ಮಾತನಾಡಲಿದ್ದಾರೆ. ಇದು ಕೆಂಪು ಕೋಟೆಯಲ್ಲಿ ಮೋದಿ ಅವರು ಮಾಡುವ ಸತತ 9ನೇ ಭಾಷಣವಾಗಿದೆ.

ಈಗಾಗಲೇ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಅಮೃತ ಮಹೋತ್ಸವ ನಿಮಿತ್ತ ಹರ್​ ಘರ್​ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರಿಂದ ಕಳೆದ ಎರಡು ದಿನಗಳಿಂದಲೂ ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ.ಇದೀಗ ನಾಳೆ ಪ್ರಧಾನಿ ಮೋದಿ ಅವರ ಮಾತಿನತ್ತ ದೇಶವಾಸಿಗಳ ಚಿತ್ತ ನೆಟ್ಟಿದೆ.

ಭಯೋತ್ಪಾದಕ ದಾಳಿಗಳ ಬಗ್ಗೆ ಮುನ್ನೆಚ್ಚರಿಕೆ
ಇಡೀ ದೇಶ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸಲು ಸಜ್ಜಾಗಿರುವ ಬೆನ್ನಲ್ಲೇ ಭಯೋತ್ಪಾದಕರ ದಾಳಿ ಭೀತಿ ಕೂಡ ಎದುರಾಗಿದೆ. ಈ ಸಂಬಂಧ ಈಗಾಗಲೇ ಗುಪ್ತಚರ ಇಲಾಖೆ (ಇಂಟಲಿಜೆನ್ಸ್ ಬ್ಯೂರೋ) ಐದು ಹೊಸ ಎಚ್ಚರಿಕೆಗಳನ್ನು ನೀಡಿದೆ. ಸ್ವಾತಂತ್ರ್ಯ ದಿನಾಚರಣೆಯ ಮೊದಲು ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಇತರ ಹಲವಾರು ನಗರಗಳಲ್ಲಿ ಸಂಭವನೀಯ ಭಯೋತ್ಪಾದಕ ದಾಳಿಗಳ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ.

ಕೆಂಪು ಕೋಟೆಯಲ್ಲಿ ನಡೆಯಲಿರುವ ಧ್ವಜಾರೋಹಣ ಸಮಾರಂಭದ ವೇಳೆ ಭಯೋತ್ಪಾದಕರು ಐಇಡಿಗಳನ್ನು ಬಳಸಬಹುದೆಂಬ ಎಚ್ಚರಿಕೆಯನ್ನೂ ಕೊಟ್ಟಿದೆ. ಏತನ್ಮಧ್ಯೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ ಶಂಕಿತನನ್ನು ಭಯೋತ್ಪಾದಕ ನಿಗ್ರಹ ದಳ ಬಂಧಿಸಿದೆ. ಹೀಗಾಗಿ ಹೈ ಅಲರ್ಟ್ ವಹಿಸಲಾಗುತ್ತಿದೆ.

ಕೆಂಪು ಕೋಟೆ ಬಳಿ ಹದ್ದಿನ ಕಣ್ಣಿಡಲಾಗಿದ್ದು, 400 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ವೈಮಾನಿಕ ಉಪಕರಣಗಳು ಮತ್ತು ಡ್ರೋನ್‌ಗಳು ಸೇರಿದಂತೆ ಮಾನವಸಹಿತ ಅಥವಾ ಮಾನವರಹಿತವಾಗಿ ವಸ್ತುಗಳಿಂದ ಯಾವುದೇ ಬೆದರಿಕೆಯನ್ನು ಎದುರಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಒಂದು ದಿನ ಮುಂಚಿತವಾಗಿಯೇ ಡ್ರೋನ್ ನಿಗ್ರಹ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಈ ವ್ಯವಸ್ಥೆ ಮತ್ತು ಅದರ ಪಕ್ಕದಲ್ಲಿ ಸ್ಥಾಪಿಸಲಾದ ಜಾಮರ್‌ನ ಸಹಾಯದಿಂದ ಡ್ರೋನ್‌ಗಳನ್ನು ಪತ್ತೆಹಚ್ಚುವ ಮತ್ತು ನಿಷ್ಕ್ರಿಯಗೊಳಿಸಲು ಸಾಧ್ಯವಾಗಲಿದೆ ಎಂದು ಡಿಆರ್‌ಡಿಒ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!