ನಾಳೆ ತೆರೆ ಕಾಣಲಿದೆ ಸಿನಿ ಪ್ರಿಯರ ಗಮನಸೆಳೆದಿರುವ ಬಹುನಿರೀಕ್ಷಿತ ತುಳು ಚಿತ್ರ ‘ಕೊರಮ್ಮ’

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಆಕರ್ಷಕ ಟೈಟಲ್ ಮೂಲಕವೇ ಸಿನಿ ಪ್ರಿಯರ ಗಮನಸೆಳೆದಿರುವ ಬಹುನಿರೀಕ್ಷಿತ ತುಳು ಚಿತ್ರ ‘ಕೊರಮ್ಮ’ ಆ.11ರಂದು ಮಂಗಳೂರು, ಸುರತ್ಕಲ್, ಪುತ್ತೂರು, ಪಡುಬಿದ್ರೆಯ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

ಸಫೈರ್ ಪ್ರೊಡಕ್ಷನ್ ಹೌಸ್ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾದ ಈ ಚಲನಚಿತ್ರ ತುಳು ನಾಡಿನ ಸೊಗಡಿನೊಂದಿಗೆ ಮೂಡಿಬಂದಿದೆ. ಕುತೂಹಲಕಾರಿಯಾದ ಉತ್ತಮ ಕಥೆ, ಚಿತ್ರಕತೆ, ಉತ್ತಮ ಛಾಯಾಗ್ರಹಣ, ಕಲಾವಿದರ ಅದ್ಭುತ ನಟನೆ, ಉತ್ತಮ ಸಂಗೀತ ಈ ಪಂಚ ಗ್ಯಾರಂಟಿಗಳ ಮೂಲಕ ಚಿತ್ರಪ್ರಿಯರಿಗೆ ‘ಕೊರಮ್ಮ’ ಹತ್ತಿರವಾಗಲಿದೆ ಎಂದು ನಿರ್ದೇಶಕ ಶಿವಧ್ವಜ್ ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಳೆಯ ಗುತ್ತಿನ ಮನೆಯ ಗತ್ತು ಗೈರತ್ತನ್ನು ಇಂದಿನ ಯುನವಜನತೆಯ ಮುಂದಿಡುವುದರೊಂದಿಗೆ ಆಕರ್ಷಣೆ ಪಡೆದುಕೊಳ್ಳುತ್ತಾ ಸಾಗುವ ಈ ಚಿತ್ರ ನಮ್ಮೊಳಗಿನ ಬಾಂಧವ್ಯ, ಮಾನವೀಯ ಮೌಲ್ಯವನ್ನು ಗಟ್ಟಿಗೊಳಿಸುತ್ತಾ ಸಾಗುತ್ತದೆ. ಜಾತಿ ವ್ಯವಸ್ಥೆಯನ್ನು ಮೀರಿ ಮಾನವ ಧರ್ಮಕ್ಕೆ ಒತ್ತುಕೊಟ್ಟು ಅತ್ಯುತ್ತಮ ಸಿನೆಮಾವಾಗಿ ಚಿತ್ರ ಮೂಡಿಬಂದಿದೆ ಎಂದು ಶಿವಧ್ವಜ್ ಶೆಟ್ಟಿ ಚಿತ್ರದ ವಿವರ ನೀಡಿದರು.

ತುಳುನಾಡ ಸಂಸ್ಕೃತಿ, ಆಚಾರ ವಿಚಾರ, ನಡೆನುಡಿ, ಜೀವನ ಪದ್ಧತಿಯನ್ನು ಒಳಗೊಂಡ ಕುತೂಹಲಕಾರಿ ಕಥಾ ಹಂದರರೊಂದಿಗೆ ಚಿತ್ರ ನಿರ್ಮಾಣ ಮಾಡಲಾಗಿದೆ. ಚಿತ್ರವು ಕಾರ್ಕಳದ ಬೈಲೂರಿನ ಸುತ್ತಮುತ್ತ ಚಿತ್ರೀಕರಣಗೊಂಡಿದ್ದು, ಗುರುಪ್ರಸಾದ್ ಹೆಗ್ಡೆ, ರೂಪಾಶ್ರೀ ವರ್ಕಾಡಿ, ಮೋಹನ್ ಶೇಣಿ, ಬಿಂದು ರಕ್ಷಿದಿ, ಜಿನಪ್ರಸಾದ್, ದಿವ್ಯಶ್ರೀ ನಾಯಕ್, ಲಕ್ಷ್ಮಣ ಕುಮಾರ್ ಮಲ್ಲೂರು, ನಮಿತಾ ಕೂಳೂರು, ಸುಮನ ಮಂಗಳೂರು, ಹರೀಶ್ ಜೋಡುರಸ್ತೆ ಮೊದಲಾದವರು ನಟಿಸಿದ್ದಾರೆ ಎಂದರು.

ತುಳುನಾಡಿನ ಪೂರ್ವಜರ ಬದುಕನ್ನು ಮಾರ್ಮಿಕವಾಗಿ ಕೊರಮ್ಮ ಚಿತ್ರದ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ತುಳು ಚಿತ್ರವಾದ ಕಾರಣ ಮಂಗಳೂರಿನ ಸುತ್ತಮುತ್ತ ಈ ಚಿತ್ರವನ್ನು ಬಿಡುಗಡೆಗೊಳಿಸಲಾಗುತ್ತಿದ್ದು, ಇತರ ರಾಜ್ಯಗಳಲ್ಲಿಯೂ ಚಿತ್ರ ಬಿಡುಗಡೆಗೆ ತಯಾರಿ ನಡೆಸಲಾಗಿದೆ ಎಂದು ಶಿವಧ್ವಜ್ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!