ರಣಜಿ ಕಿರೀಟ ಮುಡಿಗೇರಿಸಿಕೊಂಡ ಮುಂಬೈ ಟೀಮ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಜಿಂಕ್ಯ ರಹಾನೆ ನೇತೃತ್ವದ ಮುಂಬೈ ಕ್ರಿಕೆಟ್ ತಂಡಕ್ಕೆ 2024ನೇ ಸಾಲಿನ ರಣಜಿ ಟ್ರೋಫಿ ಚಾಂಪಿಯನ್ ಪಟ್ಟ ದೊರಕಿದೆ.

ವಾಂಖೇಡೆ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದ ಕೊನೆಯ ದಿನ ವಿದರ್ಭ ಎದುರು 169 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದ ಮುಂಬೈ 42ನೇ ಬಾರಿಗೆ ರಣಜಿ ಟ್ರೋಫಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದೆ.

ಫೈನಲ್‌ನಲ್ಲಿ ವಿದರ್ಭ ಎದುರು ಗೆಲುವು ಸಾಧಿಸುವ ಮೂಲಕ ಬರೋಬ್ಬರಿ 8 ವರ್ಷಗಳ ಬಳಿಕ ಮುಂಬೈ ರಣಜಿ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಮುಂಬೈ ತಂಡವು 2015-16ರಲ್ಲಿ ಕೊನೆಯ ಬಾರಿಗೆ ರಣಜಿ ಟ್ರೋಫಿ ಜಯಿಸಿತ್ತು. ಇದೀಗ ಅಜಿಂಕ್ಯ ರಹಾನೆ ಮುಂಬೈ ಪರ ರಣಜಿ ಟ್ರೋಫಿ ಗೆದ್ದ 29ನೇ ನಾಯಕ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.

ಮುಂಬೈ ನೀಡಿದ್ದ 538 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ವಿದರ್ಭ ತಂಡವು ನಾಲ್ಕನೇ ದಿನದಾಟದಂತ್ಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 248 ರನ್ ಗಳಿಸಿತ್ತು. ಕೊನೆಯ ದಿನ ಗೆಲ್ಲಲು ವಿದರ್ಭ ತಂಡಕ್ಕೆ ಇನ್ನೂ 290 ರನ್‌ಗಳ ಅಗತ್ಯವಿತ್ತು. ಕೊನೆಯ ದಿನ ನಾಯಕ ಅಕ್ಷಯ್ ವಾಡ್ಕರ್ ಹಾಗೂ ಹರ್ಷ್ ದುಬೆ ಶತಕದ ಜತೆಯಾಟವಾಡುವ ಮೂಲಕ ಮುಂಬೈ ಬೌಲರ್‌ಗಳನ್ನು ಕಾಡಿದರು. ನಾಯಕ ಅಕ್ಷಯ್ ವಾಡ್ಕರ್ 199 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 102 ರನ್ ಸಿಡಿಸಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ತನುಷ್ ಕೋಟ್ಯಾನ್ ಯಶಸ್ವಿಯಾದರು. ನಾಯಕನ ವಿಕೆಟ್ ಪತನದ ಬೆನ್ನಲ್ಲೇ ಅರ್ಧಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಹರ್ಷ್ ದುಬೆ(65 ರನ್, 128 ಎಸೆತ) ಕೂಡಾ ಪೆವಿಲಿಯನ್ ಹಾದಿ ಹಿಡಿದರು. ಇದಾದ ಕೆಲವೇ ಹೊತ್ತಿನಲ್ಲಿ ವಿದರ್ಭ ತಂಡವು ಎಲ್ಲಾ ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ ವಿದರ್ಭ ತಂಡವು 368 ರನ್‌ಗಳಿಗೆ ಸರ್ವಪತನ ಕಂಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!