ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ನೂತನ ಸಂಸತ್ ಭವನದ ಛಾವಣಿಯೇ ಸೋರುತ್ತಿದೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಪ್ರತಿಪಕ್ಷಗಳು ಕಳಪೆ ಕಾಮಗಾರಿ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿವೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿದೆ.
ಸಮಾಜವಾದಿ ಪಕ್ಷದ ಸಂಸದ ಅಖಲೇಶ್ ಯಾದವ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, 1000ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಂಸತ್ ಭವನದ ಛಾವಣಿ ಸೋರುತ್ತಿದೆ. ಛಾವಣಿ ಮೇಲಿನ ಗ್ಲಾಸ್ ಒಡೆದಿದ್ದು, ನೆಲದಲ್ಲಿ ನೀಲಿ ಬಕೆಟ್ ಇಟ್ಟಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ನೂತನ ಸಂಸತ್ ಭವನಕ್ಕಿಂತ ಹಳೆಯ ಕಟ್ಟಡವೇ ಉತ್ತಮವಾಗಿತ್ತು. ಕೊನೇಪಕ್ಷ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಸಂಸತ್ ಭವನದಲ್ಲಿ ನೀರು ಸೋರುತ್ತಿರುವುದು ನಿಲ್ಲುವವರೆಗೆ ನಾವು ಹಳೆಯ ಸಂಸತ್ ಭವನಕ್ಕೆ ಹೋಗಬಾರದೇಕೆ? ಇದು ಕೇಂದ್ರ ಸರ್ಕಾರದ ಕಲಪೆ ಕಾಮಗಾರಿಗೆ ನಿದರ್ಶನವೇ ಎಂದು ಜನ ಕೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಮತ್ತೊಂದೆಡೆ ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೋಯಿತ್ರಾ ಕೂಡ ಇದೇ ವಿಡಿಯೋವನ್ನು ಶೇರ್ ಮಾಡಿದ್ದು, ಹೊರಗಡೆ ಪ್ರಶ್ನೆ ಪತ್ರಿಕೆ ಸೋರಿಕೆ,ಒಳಗಡೆ ಮಳೆ ನೀರು ಸೋರಿಕೆ ಎಂದು ಟೀಕಿಸಿದ್ದಾರೆ.