ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಪ್ಪಳ ಜಿಲ್ಲೆಯಲ್ಲಿ ಕಲುಷಿತ ನೀರು ಕುಡಿದು 10 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ವಾಂತಿ ಬೇಧಿಗೆ ತುತ್ತಾಗಿದ್ದ ಬಾಲಕಿ ನಿರ್ಮಲಾ ಈರಪ್ಪ ಮೃತಪಟ್ಟಿದ್ದು, ಒಟ್ಟಾರೆ ಮೃತರ ಸಂಖ್ಯೆ 3 ಕ್ಕೆ ಏರಿಕೆಯಾಗಿದೆ.
ಕಲುಷಿತ ನೀರು ಕುಡಿದ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಕಿ ನಿರ್ಮಲಾ ನೀರು ಕುಡಿದ ನಂತರ ಬೇಧಿ ಆರಂಭವಾಗಿದೆ ನಂತರ ಆಕೆ ತೀವ್ರ ಅಸ್ವಸ್ಥಳಾಗಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಡಿಯುವ ನೀರಿಗೆ ಕೊಳಚೆ ನೀರು ಸೇರಿದ್ದು, ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.