ಇಂಗ್ಲೆಂಡನ್ನು ಅದುರಿಸಿಬಿಟ್ಟಿದೆ ನರ್ಸ್-ಆಂಬ್ಯುಲೆನ್ಸ್ ಡ್ರೈವರ್ ಗಳ ಸ್ಟ್ರೈಕ್ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ವೇತನ ಹೆಚ್ಚಳಕ್ಕೆ ಸರ್ಕಾರವನ್ನು ಒತ್ತಾಯಿಸಿ ಇಂಗ್ಲೆಂಡಿನಲ್ಲಿ ದಾದಿಯರು, ಆಂಬ್ಯುಲೆನ್ಸ್ ಕಾರ್ಮಿಕರು ಸೇರಿದಂತೆ ಅನೇಕರು ಬೀದಿಗಿಳಿದು ಮುಷ್ಕರ ಪ್ರಾರಂಭಿಸಿದ್ದಾರೆ. ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ತಮ್ಮ ಕೆಲಸದ ಸ್ಥಳದ ಸುತ್ತ ಜಮಾಯಿಸಿದ ನೌಕರರು ಮುಷ್ಕರ ಹೂಡಿದ್ದಾರೆ.

ಕ್ರಿಸ್‌ ಮಸ್‌ ಆಚರಣೆಯ ಸಂಭ್ರಮವನ್ನು ಎದುರು ನೋಡುತ್ತಿರುವ ಇಂಗ್ಲೆಂಡಿಗೆ ನರ್ಸ್‌ ಗಳ ಹಾಗು ಆಂಬ್ಯುಲೆನ್ಸ್‌ ಕಾರ್ಮಿಕರ ಈ ಮುಷ್ಕರವು ಹಬ್ಬದ ಸಂಭ್ರಮದ ವಾತಾವರಣಕ್ಕೆ ಬ್ರೇಕ್‌ ಹಾಕಿದೆ. ಮುಷ್ಕರವನ್ನು ಬೆಂಬಲಿಸಿ ಪ್ಯಾರಾಮೆಡಿಕಲ್‌ ಸಿಬ್ಬಂದಿಗಳು ಹಾಗು ಕಾಲ್‌ ಹ್ಯಾಂಡ್ಲರ್‌ ಗಳು ಹೊರನಡೆದಿದ್ದಾರೆ. ಇದರಿಂದ ಪ್ರಾಥಮಿಕ ಶುಶ್ರೂಷಕರಿಲ್ಲದೇ ಪ್ರಾಣಹಾನಿಯ ಹೆಚ್ಚಳಕ್ಕೆ ಕಾರಣವಾಗಬಹುದು ಎಂಬ ಆತಂಕ ಎದುರಾಗಿದೆ. ಆದರೆ ಸರ್ಕಾರವು ಈ ಮುಷ್ಕರವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಆರೋಗ್ಯ ಸಿಬ್ಬಂದಿಗಳಿಗೆ ಕೆಲಸಕ್ಕೆ ಹಿಂದಿರುಗುವಂತೆ ಒತ್ತಾಯಿಸುತ್ತಿದೆ.

ಆರೋಗ್ಯ ಕಾರ್ಯದರ್ಶಿ ಸ್ಟೀವ್ ಬಾರ್ಕ್ಲೇಆರೋಗ್ಯ ಕಾರ್ಯಕರ್ತರು ಬೇಕಂತಲೇ ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಆರೋಗ್ಯ ಸಿಬ್ಬಂದಿಗಳ ಒಕ್ಕೂಟದ ರಾಷ್ಟ್ರೀಯ ಕಾರ್ಯದರ್ಶಿ, ರಾಚೆಲ್ ಹ್ಯಾರಿಸನ್ “ಸರ್ಕಾರವು ಪ್ರತೀವರ್ಷ ಆರೋಗ್ಯ ಕಾರ್ಯಕರ್ತರ ಬೇಡಿಕೆ ಈಡೇರಿಸಲು ವಿಫಲಬವಾಗಿದೆ. ಇದು ಸರ್ಕಾರ ಆರೋಗ್ಯ ಕಾರ್ಯಕರ್ತರಿಗೆ ಮಾಡುತ್ತಿರುವ ಅವಮಾನ” ಎಂದು ಆರೋಪಿಸಿದ್ದಾರೆ.

ಕಳೆದೊಂದು ದಶಕದಿಂದ ಇಂಗ್ಲೆಂಡಿನಲ್ಲಿ ಹಣದುಬ್ಬರ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಗಳಿಗೆ ನೀಡುತ್ತಿರುವ ವೇತನ ಅವರ ಜೀವನ ನಿರ್ವಹಣೆಗೆ ಸಾಲುತ್ತಿಲ್ಲ. ಅವರು ವೆಚ್ಚನಿರ್ವಹಣೆಯ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಹಾಗಾಗಿ ಸರ್ಕಾರ ವೇತನ ಹೆಚ್ಚಿಸಬೇಕು ಎಂದು ಆರೋಗ್ಯ ಕಾರ್ಯಕರ್ತರು ವ್ಯಾಪಕವಾಗಿ ಬೀದಿಗಿಳಿದು ಮುಷ್ಕರ ಕೈಗೊಂಡಿದ್ದಾರೆ. ಇದು ಇಡೀ ಇಂಗ್ಲೆಂಡಿನ ಆರೋಗ್ಯ ವ್ಯವಸ್ಥೆಯನ್ನು ಅಲುಗಾಡಿಸಿದೆ. ವೇತನವನ್ನು ಚರ್ಚಿಸಲು ಸರ್ಕಾರ ನಿರಾಕರಿಸಿದರೆ ಹೊಸ ವರ್ಷದಲ್ಲಿ ಮತ್ತಷ್ಟು ಆರೋಗ್ಯ ಸೇವೆ ನಿಲ್ಲಿಸುವುದಾಗಿ ಆರೋಗ್ಯ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!