ನೀರಿಗೆ ಬಿದ್ದ ಮೊಬೈಲ್ ಫೋನ್ ಪಡೆಯೋಕೆ ಜಲಾಶಯವನ್ನೇ ಬರಿದುಮಾಡಿದ ಅಧಿಕಾರಿ- ಒಂದೂವರೆ ಸಾವಿರ ಎಕರೆಗೆ ಉಣಿಸಬಹುದಿದ್ದ ನೀರು ವ್ಯರ್ಥ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಛತ್ತೀಸ್‌ಗಢದ ಕಾಂಕೇರ್‌ನ ಕೇರ್‌ಕಟ್ಟಾ ಅಣೆಕಟ್ಟೆಯಲ್ಲಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ಮೊಬೈಲ್ ನೀರಿನೊಳಗೆ ಬಿದ್ದಿದ್ದು, ಅದನ್ನು ಹೊರತೆಗೆಯಲು ಅಧಿಕಾರಿಯೊಬ್ಬರು ಇಡೀ ಜಲಾಶಯದ ನೀರನ್ನೇ ಖಾಲಿ ಮಾಡಿಸಿದ್ದಾರೆ.

ಆಹಾರ ನಿರೀಕ್ಷಕ ರಾಜೇಶ್ ವಿಶ್ವಾಸ್ ನೀರನ್ನು ಬೇಕಾಬಿಟ್ಟಿ ಪೋಲು ಮಾಡಿದ್ದು, ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಇಂದು ತಮ್ಮ ಸ್ನೇಹಿತರ ಜೊತೆ ರಾಜೇಶ್ ವಿಶ್ವಾಸ್ ಕೇರ್‌ಕಟ್ಟಾ ಅಣೆಕಟ್ಟಿಗೆ ಭೇಟಿ ನೀಡಿದ್ದು ತಮ್ಮ ಒಂದು ಲಕ್ಷ ರೂಪಾಯಿ ಮೌಲ್ಯದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್‌ನಲ್ಲಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ವೇಳೆ ಕೈ ಜಾರಿ ಫೋನ್ ಜಲಾಶಯಕ್ಕೆ ಬಿದ್ದಿದೆ.

41 ಲಕ್ಷ ಲೀಟರ್ ನೀರು ಪೋಲು

ನಂತರ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಜನ ನೀರಿಗಿಳಿದು ಮೊಬೈಲ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಫೋನ್ ಸಿಗಲಿಲ್ಲ. ನಂತರ ದರ್ಪದಿಂದ ಅಧಿಕಾರಿ ಡಿಸೇಲ್ ಇಂಜಿನ್‌ಗಳನ್ನು ತರಿಸಿ ನೀರನ್ನು ಹೊರಹಾಕಿಸಿದ್ದಾರೆ. ಜಲಾಶಯದಲ್ಲಿದ್ದ ಒಟ್ಟಾರೆ 41 ಲಕ್ಷ ಲೀಟರ್ ನೀರು ಸುಖಾಸುಮ್ಮನೆ ಪೋಲಾಗಿದೆ. ಇಷ್ಟೊಂದು ನೀರನ್ನು ಕೃಷಿಗೆ ಬಳಕೆ ಮಾಡಿದ್ದರೆ ಒಟ್ಟಾರೆ 1,500ಎಕರೆ ಪ್ರದೇಶಕ್ಕೆ ನೀರು ಹಾಕಬಹುದಿತ್ತು ಎಂದು ಅಂದಾಜಿಸಲಾಗಿದೆ.

ಕರ್ತವ್ಯಕ್ಕಾಗಿಯೇ ಈ ರೀತಿ ಮಾಡಿದೆ

ಒಂದು ಲಕ್ಷ ರೂಪಾಯಿ ಮೊಬೈಲ್ ನೀರಿಗೆ ಬಿತ್ತು ಎನ್ನುವ ಉದ್ದೇಶದಿಂದ ಈ ರೀತಿ ಮಾಡಿಲ್ಲ, ಮೊಬೈಲ್‌ನಲ್ಲಿ ಕೆಲಸಕ್ಕೆ ಸಂಬಂಧಿಸಿದ ಸಾಕಷ್ಟು ಮುಖ್ಯ ಡಾಕ್ಯುಮೆಂಟ್‌ಗಳಿದ್ದವು. ಹಾಗಾಗಿ ನೀರನ್ನು ತೆಗೆಸಿದೆ. ಮೇಲಧಿಕಾರಿಗಳ ಪರ್ಮಿಷನ್ ಕೂಡ ತೆಗೆದುಕೊಂಡಿದ್ದೇನೆ. ಈ ನೀರು ಕೃಷಿಗೆ ಯೋಗ್ಯವೂ ಆಗಿರಲಿಲ್ಲ ಎಂದಿದ್ದಾರೆ.

ಇಷ್ಟು ಪ್ರಯತ್ನಪಟ್ಟರೂ ಉಪಯೋಗ ಇಲ್ಲ

ಇಷ್ಟೆಲ್ಲಾ ನೀರು ಪೋಲು ಮಾಡಿ ಕಡೆಗೆ ಮೊಬೈಲ್ ಪಡೆದುಕೊಂಡರೂ ಮೊಬೈಲ್ ನೀರಿನಲ್ಲಿ ತುಂಬಾ ಸಮಯ ಇದ್ದ ಕಾಲ ಹಾಳಾಗಿದೆ. ಒಟ್ಟಾರೆ ಈ ಎಲ್ಲ ಪ್ರಯತ್ನಗಳೂ ವ್ಯರ್ಥವಾಗಿದೆ. ನೀರನ್ನು ಕೃಷಿಗೆ ನೀಡಿದ್ದರೆ ಜೀವ ನೀಡುವ ಆಹಾರ ಬೆಳೆಯಲು ಉಪಯೋಗವಾಗುತ್ತಿತ್ತು, ಈ ರೀತಿ ಪೋಲು ಮಾಡಿದ್ದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!