ಹೊಸ ದಿಗಂತ ಡಿಜಿಟಲ್ ಡೆಸ್ಕ್
ಬಿಹಾರ ಸಂಪುಟದಲ್ಲಿ ನೂತನ ಕಾನೂನು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಕಾರ್ತಿಕೇಯ್ ಸಿಂಗ್ ವಿರುದ್ಧ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವಿದ್ದು, ಅಲ್ಲದೇ ನ್ಯಾಯಾಲಯ ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಿದ್ದು, ಕಾನೂನು ಉಲ್ಲಂಘಿಸಿದ ಆರೋಪ ಎದುರಿಸುತ್ತಿದ್ದಾರೆ.
2014ರಲ್ಲಿ ನಡೆದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಕೇಯ ಸಿಂಗ್ ವಿರುದ್ಧ ದಾನಾಪುರ ನ್ಯಾಯಾಲಯ ಜುಲೈ 16ರಂದು ಬಂಧನ ವಾರಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅವರು ಆಗಸ್ಟ್ 16ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರು. ವಿಪರ್ಯಾಸವೆಂದರೆ, ಕಾರ್ತಿಕೇಯ್ ಸಿಂಗ್ ಅವರಿಗೆ ಕಾನೂನು ಖಾತೆಯನ್ನು ನೀಡಲಾಗಿದೆ.
ಇತ್ತ ಸಿಂಗ್ ನ್ಯಾಯಾಲಯಕ್ಕೆ ಹಾಜರಾಗಿಲ್ಲ ಮತ್ತು ಇದುವರೆಗೆ ನ್ಯಾಯಾಲಯದಲ್ಲಿ ಯಾವುದೇ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೂಡ ಸಲ್ಲಿಸಿಲ್ಲ. ಪ್ರಾಸಿಕ್ಯೂಷನ್ ಪ್ರಕಾರ, 2014ರಲ್ಲಿ ಬಿಲ್ಡರ್ ರಾಜೀವ್ ರಂಜನ್ ಅವರನ್ನು ಅಪಹರಿಸಲಾಗಿತ್ತು. ಇದರಲ್ಲಿ ಸಿಂಗ್ ಅವರ ಕೈವಾಡ ಇದೆ ಎನ್ನಲಾಗಿದೆ.
ಜೊತೆಗೆ ಸಿಂಗ್ ಅವರನ್ನು ಅಕ್ರಮ ಬಂದೂಕುಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲು ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿ ಬೇರ್ ಜೈಲಿನಲ್ಲಿರುವ ಡಾನ್ ಪಟ್ಟದಿಂದ ರಾಜಕಾರಣಿಯಾಗಿರುವ ಅನಂತ್ ಸಿಂಗ್ ಅವರ ನಿಕಟವರ್ತಿ ಎಂದು ಪರಿಗಣಿಸಲಾಗಿದೆ.
ಈಮಧ್ಯೆ, ಕ್ರಿಮಿನಲ್ ಹಿನ್ನೆಲೆ ಹೊಂದಿರುವ ನಾಯಕರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವ ಬಿಹಾರದ ಹೊಸ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.