April 18, 2026
Saturday, April 18, 2026
spot_img

ಮಹಿಳೆಯರಿಗೆ ನ್ಯಾಯ ಸಿಗಬೇಕಾದ ಅವಕಾಶ ಮತ್ತೊಮ್ಮೆ ಕೈತಪ್ಪಿದೆ: ಹೆಚ್.ಡಿ.ಕೆ ವಿಷಾದ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆಯಲ್ಲಿ ಮಹಿಳಾ ಮೀಸಲು ಮಸೂದೆ ತಿರಸ್ಕೃತವಾಗಿರುವ ಹಿನ್ನೆಲೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಪರ ನಿಲುವಿನಲ್ಲಿ ಕಾಂಗ್ರೆಸ್ ಯಾವುದೇ ಬದಲಾವಣೆ ತೋರಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡ ಅವರು, 1996ರಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಂಡು, ಮೂರು ದಶಕಗಳ ನಂತರವೂ ಅದೇ ಮನೋಭಾವ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಅಂದು ಹೆಚ್.ಡಿ.ದೇವೇಗೌಡ ಅವರ ನೇತೃತ್ವದ ಸರ್ಕಾರ ಮಹಿಳೆಯರಿಗೆ 33% ಮೀಸಲು ನೀಡಲು ಮಸೂದೆ ಮಂಡಿಸಿತ್ತು. ಆದರೆ ಕಾಂಗ್ರೆಸ್ ಮತ್ತು ಅದರ ಮೈತ್ರಿಕೂಟಗಳು ಆ ಪ್ರಯತ್ನವನ್ನು ವಿಫಲಗೊಳಿಸಿದ್ದವು ಎಂದು ಟೀಕಿಸಿದ್ದಾರೆ.

ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಮಹಿಳಾ ಮೀಸಲು ಸಾಧನೆಗಾಗಿ ಕೈಗೊಂಡಿರುವ ಪ್ರಯತ್ನಕ್ಕೂ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಅಡ್ಡಿಯಾಗಿವೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಮಹಿಳೆಯರಿಗೆ ನ್ಯಾಯ ಸಿಗಬೇಕಾದ ಮಹತ್ವದ ಅವಕಾಶ ಮತ್ತೊಮ್ಮೆ ತಪ್ಪಿದಂತಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಮಹಿಳಾ ಮೀಸಲು ಮಸೂದೆಯನ್ನು ವಿರೋಧಿಸಿದ ಶಕ್ತಿಗಳನ್ನು ದೇಶದ ನಾರಿಶಕ್ತಿ ಕ್ಷಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, ಇದನ್ನು ಮಹಿಳಾ ಗೌರವಕ್ಕೆ ಮಾಡಿದ ಅಪಮಾನವೆಂದು ಹೇಳಿದ್ದಾರೆ. ಭವಿಷ್ಯದಲ್ಲಿ ಈ ನಿರ್ಧಾರಕ್ಕೆ ಕಾರಣರಾದವರು ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ಇದಲ್ಲದೆ, ದೇಶದ ಮಹಿಳೆಯರು ನಿರಾಶರಾಗಬಾರದು ಎಂದು ಮನವಿ ಮಾಡಿದ ಕುಮಾರಸ್ವಾಮಿ, ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಮಹಿಳಾ ಮೀಸಲು ಗುರಿ ಸಾಧನೆ ಸಾಧ್ಯವೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !