ಪ್ರತ್ಯೇಕ ಸರ್ಕಾರ ರಚಿಸಿದೆಯಂತೆ ಪಾಕಿಸ್ತಾನಿ ತಾಲೀಬಾನ್ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪಾಕಿಸ್ತಾನಿ ತಾಲೀಬಾನ್‌ (ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್) ತನ್ನ ಆಂತರಿಕ ಸ್ವರೂಪವನ್ನು ಬದಲಾಯಿಸಿ, ಸರ್ಕಾರದ ಮಾದರಿಯಲ್ಲಿಯೇ ಸಚಿವಾಲಯ, ಸ್ಕ್ವಾಡ್ರನ್‌ ಗಳನ್ನು ಘೋಷಣೆ ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್‌ಎನ್‌ ನ್ಯೂಸ್‌18 ವರದಿ ಮಾಡಿದೆ. ಈ ವರದಿಯ ಪ್ರಕಾರ ಪಾಕಿಸ್ತಾನಿ ತಾಲೀಬಾನ್‌ ಆಂತರಿಕ ವ್ಯವಸ್ಥೆಯಲ್ಲಿ ರಕ್ಷಣಾ, ನ್ಯಾಯಾಂಗ, ಮಾಹಿತಿ, ರಾಜಕೀಯ ವ್ಯವಹಾರಗಳು, ಆರ್ಥಿಕ ವ್ಯವಹಾರಗಳು, ಶಿಕ್ಷಣ, ಫತ್ವಾ ಹೊರಡಿಸುವ ಅಧಿಕಾರ, ಗುಪ್ತಚರ  ಇಲಾಖೆಗಳಂತಹ ವಿವಿಧ ಸಚಿವಾಲಯಗಳನ್ನು ವಿಭಾಗಿಸಿದೆ.

ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಭಯೋತ್ಪಾದನಾ ಸಂಘಟನೆಯು ಈಗ ರಕ್ಷಣಾ ಸಚಿವಾಲಯವನ್ನೂ ಹೊಂದಿದ್ದು ಅಮೆರಿಕದ ಭಯೋತ್ಪಾದಕರ ಪಟ್ಟಿಯಲ್ಲಿರುವ ಮುಫ್ತಿ ಮುಜಾಹಿಮ್ ಇದರ ನೇತೃತ್ವ ವಹಿಸಿದ್ದಾನೆ ಎನ್ನಲಾಗಿದೆ. ಉತ್ತರ ಮತ್ತು ದಕ್ಷಿಣ ವಲಯಗಳೆಂದು ವಿಭಾಗಿಸಲಾಗಿದ್ದು ಪೇಶಾವರ್, ಮಲಕಾಂಡ್, ಮರ್ದಾನ್, ಗಿಲ್ಗಿಟ್ ಬಾಲ್ಟಿಸ್ತಾನ್ ಮತ್ತು ಹಜಾರಾ ವಿಲಯಾ ಮುಂತಾದ ಪ್ರದೇಶಗಳನ್ನು ಇದು ಒಳಗೊಂಡಿದೆ. ಈ ಸರ್ಕಾರದ ಮಾದರಿಯು ಆತ್ಮಹತ್ಯಾ ಬಾಂಬರ್‌ಗಳ ವಿಶೇಷ ಪಡೆಯೊಂದನ್ನು ಹೊಂದಿದ್ದು ‘ಸ್ಪೆಷಲ್ ಇಸ್ತಿಶಾದಿ ಫೋರ್ಸ್’ ಎಂದು ಹೆಸರಿಸಲಾಗಿದೆ. ಇದರ ಗುಪ್ತಚರ ವಿಭಾಗವನ್ನು ನೂರ್ ವಾಲಿ ಮೆಹ್ಸೂದ್ ನಿರ್ವಹಿಸಲಿದ್ದು ದಾರುಲ್ ಕಾಜಾ (ಅಂತಿಮ ನಿರ್ಧಾರ ಅಥವಾ ತೀರ್ಪು) ಎಂಬ 20 ಸದಸ್ಯರನ್ನೊಳಗೊಂಡ ಸಮಿತಿ ಹಾಗು ದಾರುಲ್ ಇಫ್ತಾ (ನಿರ್ಧಾರಗಳನ್ನು ಹೊರಡಿಸುವ ಸ್ಥಳ) ಎಂಬ 14 ಸದಸ್ಯರನ್ನು ಒಳಗೊಂಡ ಸಮಿತಿ ನೇಮಿಸಲಾಗಿದೆ. ಪಾಕಿಸ್ತಾನಿ ಪಡೆಗಳ ವಿರುದ್ಧ ಮಾತ್ರ ಕೆಲಸ ಮಾಡುವುದಾಗಿ ಉಗ್ರಗಾಮಿ ಗುಂಪು ಟಿಟಿಪಿ ಹೇಳಿದೆ.

ಇವುಗಳ ನಡುವೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಸಂಘಟನೆಯು ಪಾಕಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸಿದೆ ಎಂದು ಶೆಹಬಾಜ್ ಷರೀಫ್ ಸರ್ಕಾರವು ಆರೋಪಿಸಿದೆ. ಪಾಕಿಸ್ತಾನ-ಅಫ್ಘಾನಿಸ್ತಾನದ ಗಡಿ ಪ್ರದೇಶದಲ್ಲಿ ಈ ಸಂಘಟನೆಯು 7,000 ದಿಂದ 10,00ಗಳಷ್ಟು ಸಂಖ್ಯೆಯ ಭಯೋತ್ಪಾದಕರನ್ನು ಒಳಗೊಂಡಿದೆ ಎನ್ನಲಾಗಿದೆ.

ಕ್ರಿಸ್‌ಮಸ್‌ ದಿನದಂದು, ಯುಎಸ್ ರಾಯಭಾರ ಕಚೇರಿಯು ಇಸ್ಲಾಮಾಬಾದ್‌ನ ಮ್ಯಾರಿಯಟ್ ಹೋಟೆಲ್‌ನಲ್ಲಿ ಅಮೆರಿಕದ ನಾಗರಿಕರ ವಿರುದ್ಧ ಸಂಭವನೀಯ ಭಯೋತ್ಪಾದಕ ಬೆದರಿಕೆಯ ಎಚ್ಚರಿಕೆಯನ್ನು ನೀಡಿತ್ತು ಮತ್ತು ಅಮೆರಿಕದ ಸಿಬ್ಬಂದಿಗಳು ಈ ಹೋಟೆಲ್‌ ಗೆ ತೆರಳದಂತೆ ಎಚ್ಚರಿಕೆ ರವಾನಿಸಿತ್ತು. ಡಿಸೆಂಬರ್ 26 ರಂದು, ಇಸ್ಲಾಮಾಬಾದ್‌ನಲ್ಲಿರುವ ಸೌದಿ ಅರೇಬಿಯಾದ ರಾಯಭಾರ ಕಚೇರಿಯು ಪಾಕಿಸ್ತಾನದಲ್ಲಿರುವ ತನ್ನ ನಾಗರಿಕರಿಗೆ ತಮ್ಮ ಚಲನವಲನಗಳನ್ನು ನಿರ್ಭಂಧಿಸುವಂತೆ ಭದ್ರತಾ ಸಲಹೆ ನೀಡಿತ್ತು. ಆದರೆ ಪಾಕ್ ಸರ್ಕಾರ ವಿದೇಶಿಯರಿಗೆ ಬೆದರಿಕೆಯ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡುತ್ತಿದೆ ಎಂದು ಟಿಟಿಪಿ ಹೇಳಿದೆ. “ನಾವು ಅಂತಹ ವಿಷಯಗಳನ್ನು ಯೋಜಿಸುತ್ತಿಲ್ಲ. ರಾಜತಾಂತ್ರಿಕರು ಮತ್ತು ವಿದೇಶಿಗರು ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು,” ಎಂದು ಉಗ್ರಗಾಮಿ ಸಂಘಟನೆ ಟಿಟಿಪಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!