ಬೆನ್ನಟ್ಟಿಕೊಂಡು ಹೋಗಿ ಪಾಕಿಸ್ತಾನಿ ಯುದ್ಧವಿಮಾನಗಳನ್ನು ಪುಡಿಗಟ್ಟಿದ ʼಪರಮ ವೀರʼನೀತ…

-ಗಣೇಶ ಭಟ್‌, ಗೋಪಿನಮರಿ

1971ರ ಯುದ್ಧದ ಸಮಯವದು, ಶ್ರೀನಗರದ ಏರ್‌ಬೇಸ್‌ ನಲ್ಲಿ ಭಾರತೀಯ ವಾಯುಪಡೆಯ ʼಹಾರುವ ಗುಂಡುಗಳುʼ (Flying Bullets) ಅಂತಲೇ ಪ್ರಸಿದ್ಧಿ ಪಡೆದಿದ್ದ 18ನೇ ಸ್ಕ್ವಾಡ್ರನ್‌ ನಿಯೋಜನೆಗೊಂಡಿತ್ತು. ಅವರಾರಿಗೂ ಶ್ರೀನಗರದಂತಹ ಕೊರೆಯುವ ಚಳಿಯಲ್ಲಿ, ಅಂತಹ ಬಿಗುವಿನ ವಾತಾವರಣದಲ್ಲಿ ಕಾರ್ಯಾಚರಣೆ ನಡೆಸಿದ ಅನುಭವ ಇರಲಿಲ್ಲ. ಆದರೆ ದೇಶಕಾಯುವ ಹೊಣೆ ಹೊತ್ತಿದ್ದ ಅವರು ಅದೊಂದೇ ಲಕ್ಷ್ಯವನ್ನಿಟ್ಟುಕೊಂಡು ಶ್ರೀನಗರವನ್ನು ಕಾಪಾಡಲು ಸಜ್ಜಾಗಿ ಕುಳಿತಿದ್ದರು. ಅಂದುಕೊಂಡಂತೆ ವೈರಿಗಳ ಆರು ಜೆಟ್‌ ವಿಮಾನಗಳು ದಾಳಿ ನಡೆಸಿದವು. ದಾಳಿಯಿಂದ ತಪ್ಪಿಸಿಕೊಂಡು ಅವರನ್ನು ಎದುರಿಸಲು ಭಾರತೀಯ ವಾಯುಸೇನೆಯ ಇಬ್ಬರು ಪೈಲಟ್‌ಗಳು ಹೊರಟರು. ವಿಮಾನ ಹಾರಿಸಬೇಕಿದ್ದ ರನ್‌ ವೇ ಮೇಲೆ ತೀವ್ರವಾಗಿ ದಾಳಿಯಾಗುತ್ತಿತ್ತು. ಒಂದು ಫೈಟರ್‌ ಜೆಟ್‌ ಹಾರಿತ್ತು. ಆದರೆ ಇನ್ನೊಂದು ಹಾರುವುದರೊಳಗೆ ಶತ್ರುಗಳ ದಾಳಿ ಹೆಚ್ಚಿತ್ತು. ಆ ದಾಳಿಯ ನಡುವೆಯೇ ಟೇಕ್‌ ಆಫ್‌ ಮಾಡಿದ ಆ ವೀರಯೋಧ ಶತ್ರುವಿನ ಎರಡು ಫೈಟರ್‌ ಜೆಟ್‌ಗಳನ್ನು ಪುಡಿಗಟ್ಟಿದ. ಹೋರಾಟದ ವೇಳೆ ಆತನ ವಿಮಾನವೂ ಜಖಂ ಆಗಿತ್ತು. ಹೀಗೆ ಮೇಲೆ ಹಾರಿ ಶತ್ರುವನ್ನು ಸಸದೆಬಡಿದ ಆತ ಅಲ್ಲಿಂದಲೇ ಸ್ವರ್ಗಸ್ಥನಾಗಿಬಿಟ್ಟ. ತಾಯಿ ಭಾರತಿಯನ್ನು ರಕ್ಷಿಸುವ ಯಜ್ಞದಲ್ಲಿ ಮತ್ತೊಬ್ಬ ವೀರನ ಆತ್ಮಾಹುತಿಯ ಅರ್ಪಣೆಯಾಗಿತ್ತು. ಆ ವೀರನ ಹೆಸರೇ ʼಫ್ಲೈಯಿಂಗ್‌ ಆಪೀಸರ್‌ ನಿರ್ಮಲ್ ಜಿತ್ ಸಿಂಗ್ ಸೆಖೋನ್ʼ.

ಹುಟ್ಟಿದ್ದು 17 ಜುಲೈ 1945 ರಂದು ಪಂಜಾಬ್‌ನ ಲುಧಿಯಾನಾದ ಇಸ್ಸೆವಾಲ್ ಗ್ರಾಮದಲ್ಲಿ. ಬಾಲ್ಯದಿಂದಲೂ ವಾಯುಪಡೆ, ವಿಮಾನಗಳೆಂದರೆ ನಿರ್ಮಲ್‌ ಜಿತ್‌ ಗೆ ಅದೇನೋ ಹುಚ್ಚು. ಆತನ ಮನೆಯೂ ಕೂಡ ಭಾರತೀಯ ವಾಯುಪಡೆಯ ಲುಧಿಯಾನ ವಾಯುನೆಲೆಯ ಸಮೀಪದಲ್ಲಿಯೇ ಇತ್ತು. ಆತನ ತಂದೆಯೂ ಕೂಡ ಭಾರತೀಯ ವಾಯುಪಡೆ (IAF) ಯಲ್ಲಿ ಸೇವೆ ಸಲ್ಲಿಸಿ  ಆನರರಿ ಫ್ಲೈಟ್ ಲೆಫ್ಟಿನೆಂಟ್ ಆಗಿ ನಿವೃತ್ತಿ ಹೊಂದಿದ್ದರು. ಹೀಗಾಗಿ ಬಾಲ್ಯದಿಂದಲೇ ಈತನಿಗೆ ವಾಯುಪಡೆಯ ಬಗ್ಗೆ ಅದೇನೋ ಆಸಕ್ತಿಯಿತ್ತು. ದೊಡ್ಡವನಾಗಿ ಇಂಜಿನಿಯರಿಂಗ್‌ ಓದುತ್ತಿದ್ದ ಈತನಿಗೆ ವಾಯಪಡೆಯನ್ನು ಸೇರುವ ಅವಕಾಶ ಒದಗಿ ಬಂದಿತ್ತು. ಇಂಜಿನಿಯರಿಂಗ್‌ ಓದನ್ನು ಅರ್ಧಕ್ಕೇ ನಿಲ್ಲಿಸಿದ ನಿರ್ಮಲ್‌ ಜಿತ್‌ 1967ರಲ್ಲಿ ಫೈಟರ್‌ ಪೈಲಟ್‌ ಆಗಿ ಸೇರಿಕೊಂಡಿದ್ದ. ಕಠಿಣ ತೆರಬೇತಿಯ ನಂತರ ಭಾರತೀಯ ವಾಯುಪಡೆಯಲ್ಲಿ ʼಹಾರುವ ಗುಂಡುಗಳುʼ (Flying Bullets) ಅಂತಲೇ ಪ್ರಸಿದ್ಧಿ ಪಡೆದಿದ್ದ 18ನೇ ಸ್ಕ್ವಾಡ್ರನ್‌ಗೆ ನಿಯೋಜನೆಗೊಂಡಿದ್ದ.

1971ರಲ್ಲಿ ಅದಾಗಲೇ ಎರಡು ಬಾರಿ ಭಾರತೀಯ ಪಡೆಗಳೆದುರು ಸೋತು ಸುಣ್ಣವಾಗಿದ್ದ ಪಾಕಿಸ್ತಾನ ಮತ್ತೊಮ್ಮೆ ಯುದ್ಧಕ್ಕಿಳಿದಿತ್ತು. ಆ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ 18 ನೇ ಸ್ಕ್ವಾಡ್ರನ್‌ ಶ್ರೀನಗರದ ವಾಯುನೆಲೆಗೆ ನಿಯೋಜನೆಗೊಂಡಿತ್ತು. 1948ರ ಕದನ ವಿರಾಮದ ಒಪ್ಪಂದಂತೆ, ಮತ್ತೊಮ್ಮೆ ಪಾಕಿಸ್ತಾನದೊಂದಿಗೆ ಯುದ್ಧ ಆರಂಭವಾಗುವವರೆಗೂ ವಾಯುಪಡೆಯ ಯಾವುದೇ ರಕ್ಷಣಾ ವಿಮಾನಗಳು ಶ್ರೀನಗರದಲ್ಲಿ ನೆಲೆಗೊಂಡಿರಲಿಲ್ಲ. ಆದರೀಗ ಯುದ್ಧವೇ ಏರ್ಪಟ್ಟಿತ್ತು. ಹಾಗಾಗಿ ಭಾರತೀಯ ವಾಯುಪಡೆಯ 18 ನೇ ಸ್ಕ್ವಾಡ್ರನ್‌ ಶ್ರೀನಗರದ ವಾಯುನೆಲೆಗೆ ನಿಯೋಜನೆಗೊಂಡಿತ್ತು. ಅದರ ಭಾಗವಾಗಿ ಫ್ಲೈಯಿಂಗ್‌ ಆಪೀಸರ್‌ ನಿರ್ಮಲ್ ಜಿತ್ ಸಿಂಗ್ ಸೆಖೋನ್ ಕೂಡ ಇದ್ದರು. ಆದರೆ ಅವರ ತಂಡಕ್ಕೆ ಶ್ರೀನಗರದ ಭೌಗೋಳಿಕ ಪರಿಚಯವಿರಲಿಲ್ಲ. ಕಾಶ್ಮೀರದ ಕಟುಚಳಿಗೆ ಒಗ್ಗಿರಲಿಲ್ಲ. ಆದರೆ ಶೌರ್ಯ ಮತ್ತು ದೃಢಸಂಕಲ್ಪದಿಂದ ಅವರ ತಂಡ ರಕ್ಷಣಾ ಕಾರ್ಯದಲ್ಲಿ ನಿರತವಾಗಿತ್ತು.

14 ಡಿಸೆಂಬರ್ 1971, ಪೇಶಾವರದ ವಾಯುನೆಲೆಯಿಂದ ಹೊರಟ 6 F-86 ಜೆಟ್‌ಗಳು ಶ್ರೀನಗರದ ಮೇಲೆ ದಾಳಿಯಿಟ್ಟವು. ಆಗ ಯುದ್ಧ ಸನ್ನದ್ಧತೆಯಲ್ಲಿಯೇ ಇದ್ದ ನಿರ್ಮಲ್‌ ಜಿತ್‌, ಫ್ಲೈಟ್ ಲೆಫ್ಟಿನೆಂಟ್ ಘುಮ್ಮನ್‌ ಅವರ ನೇತೃತ್ವದಲ್ಲಿ ಎರಡು ಫೈಟರ್‌ ಜೆಟ್‌ ಗಳ ವ್ಯೂಹ ರಚಿಸಿ ಹೋರಾಡಲು ಸಿದ್ಧವಾದರು. ಘುಮ್ಮನ್‌ ಅವರಿದ್ದ ವಿಮಾನ ಟೇಕ್‌ಆಫ್‌ ಆಗಿತ್ತು. ಆದರೆ ಅದರಿಂದ ಧೂಳೆದ್ದಿದ್ದರಿಂದ ನಿರ್ಮಲ್‌ ಟೇಕ್‌ ಮಾಡಲು ಕೆಲ ನಿಮಿಷ ಕಾಯಬೇಕಾಗಿ ಬಂತು. ಅಷ್ಟರಲ್ಲಿ ಶತ್ರು ವಿಮಾನಗಳು ರನ್‌ ವೇಯತ್ತಲೇ ದಾಳಿ ಮಾಡುತ್ತ ಮುನ್ನುಗ್ಗಿದವು. ರನ್ ವೇಗಳ ಮೇಲೆ ಶತ್ರುಗಳ ಬಾಂಬ್‌ ಬಿದ್ದು ಸ್ಫೋಟವಾಯಿತು. ಆದರೂ ಟೇಕ್‌ಆಫ್‌ ಮಾಡುವಷ್ಟು ಜಾಗವಿತ್ತು. ಅತ್ತ ಆರು ಶತ್ರು ಫೈಟರ್‌ ಜೆಟ್‌ ಗಳು ಮುನ್ನುಗ್ಗಿ ಬರುತ್ತಿದ್ದರೆ ಅವರ ದಾಳಿಯನ್ನೂ ಲೆಕ್ಕಿಸದೇ ನಿರ್ಮಲ್‌ ಜಿತ್‌ ಟೇಕ್‌ ಆಫ್‌ ಮಾಡಿದರು. ಹಾರಾಟ ಸಫಲವಾಗಿತ್ತು.

ಕೂಡಲೇ ಎರಡೆರಡು ಶತ್ರು ಫೈಟರ್‌ ವಿಮಾನಗಳ ಮೇಲೆ ದಾಳಿಯಿಟ್ಟರು. ಒಂದು ವಿಮಾನ ಧ್ವಂಸವಾದರೆ ಇನ್ನೊಂದಕ್ಕೆ ಭಾರೀ ಹೊಡೆತಬಿದ್ದು ಅದು ಹೊಗೆ ಬಿಡುತ್ತ ರಜೌರಿಯ ಕಡೆ ಮುಖ ಮಾಡಿತ್ತು. ಈ ಭೀಕರ ಕಾರ್ಯಾಚರಣೆಯ ವೇಳೆ ನಿರ್ಮಲ್‌ ಅವರ ವಿಮಾನಕ್ಕೂ ತೊಂದರೆಯಾಗಿತ್ತು. ಆದರೆ ನಿರ್ಮಲ್‌ ವಾಪಸ್ಸಾಗದೇ ಮತ್ತೆ ಹೋರಾಡುತ್ತ ಆ ವಿಮಾನವನ್ನು ಹಿಂಬಾಲಿಸಿಕೊಂಡು ಹೋಗಿ ಅದನ್ನೂ ಸುಟ್ಟುಹಾಕಿದರು. ಅವರಿಗೆ ಬೇಸ್‌ ಗೆ ಹಿಂದಿರುಗುವಂತೆ ಆದೇಶ ನೀಡಲಾಗಿತ್ತು. ಆದರೆ ಅವರ ವಿಮಾನಕ್ಕೆ ಭಾರೀ ಹಾನಿಯಾಗಿತ್ತು. ಒಂದು ಮರದಷ್ಟು ಎತ್ತರಕ್ಕೆ ಅವರ ವಿಮಾನ ಹಾರಿರುವುದು ಕೊನೆಯದಾಗಿ ಗೋಚರಿಸಿತ್ತಂತೆ… ಅವರ ವಿಮಾನದ ನಿಯಂತ್ರಣ ವ್ಯವಸ್ಥೆಯ ವೈಫಲ್ಯದಿಂದಾಗಿ ವಿಮಾನ ನೆಲಕ್ಕಪ್ಪಳಿಸಿತ್ತು. ಕೊನೆಯ ಕ್ಷಣದಲ್ಲಿ ಇಜೆಕ್ಷನ್‌ ಗೆ ಯತ್ನಿಸಿದರೂ ಕೂಡ ಅದು ಸಫಲವಾಗಿರಲಿಲ್ಲ. ಹೀಗೆ ಶತ್ರುಗಳನ್ನು ಮಟ್ಟಹಾಕಿ ತಾವೂ ಕೂಡ ಪ್ರಾಣಾರ್ಪಣೆ ಮಾಡಿ ಸ್ವರ್ಗಸ್ಥರಾಗಿಬಿಟ್ಟರು ನಿರ್ಮಲ್‌ ಜಿತ್.‌

ಅವರ ತ್ಯಾಗ ವ್ಯರ್ಥವಾಗಲಿಲ್ಲ. ಪಾಕಿಸ್ತಾನಿ ಜೆಟ್‌ ವಿಮಾನಗಳು ಹೆದರಿ ಓಡಿಹೋಗಿದ್ದವು. ಶ್ರೀನಗರದ ಪ್ರದೇಶದ ಮೇಲೆ, ವಾಯುನೆಲೆಯ ಮೇಲೆ ದಾಳಿ ನಡೆಸಲು ಸಾಧ್ಯವಾಗದೇ ಶತ್ರುಗಳು ಮಣ್ಣುಮುಕ್ಕಿದ್ದರು. ಸೇಖೋನ್‌ ಅವರ ಈ ತ್ಯಾಗಕ್ಕೆ, ಅವರು ತೋರಿದ ಅಪ್ರತಿಮ ಶೌರ್ಯಕ್ಕೆ, ನೈಜ ಸಾಹಸಕ್ಕೆ ಭಾರತದ ಅತ್ಯುನ್ನತ ಶೌರ್ಯ ಪ್ರಶಸ್ತಿ ʼಪರಮ ವೀರ ಚಕ್ರʼವನ್ನು ನೀಡಿ ಅವರಿಗೆ ಗೌರವಿಸಲಾಗಿದೆ. ಇತ್ತೀಚೆಗೆ ಅಂಡಮಾನಿನ ದ್ವೀಪವೊಂದಕ್ಕೆ ಅವರ ಹೆಸರನ್ನಿಟ್ಟು ಅವರನ್ನು ಅಮರರನ್ನಾಗಿಸಲಾಗಿದೆ. ಭಾರತೀಯ ವಾಯುಸೇನೆಯಲ್ಲಿ ಮೊದಲ ಪರಮವೀರ ಚಕ್ರ ಪಡೆದವರೆಂದರೆ ಅದು ʼಫ್ಲೈಯಿಂಗ್‌ ಆಪೀಸರ್‌ ನಿರ್ಮಲ್ ಜಿತ್ ಸಿಂಗ್ ಸೆಖೋನ್ʼ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!