ಹಬ್ಬಕ್ಕೆಂದು ಊರನ್ನೇ ಖಾಲಿ ಮಾಡಿದ ಜನ, ಇಡೀ ಗ್ರಾಮಕ್ಕೆ ಮುಳ್ಳು ಬೇಲಿ!

– ನಾಗರಾಜ್ ಮಾಡ್ಲಾಕನಹಳ್ಳಿ

ಜಾತ್ರೆ, ಹಬ್ಬ ಹರಿದಿನಕ್ಕಾಗಿ ಮನೆ ಶೃಂಗರಿಸೋದು ವಾಡಿಕೆ. ಆದರೆ ಇಡೀ ಊರಿಗೆ ಊರನ್ನೇ ಖಾಲಿ ಮಾಡಿ ಮನೆಗೆ ಬೀಗ ಜಡಿದು ಹೊಲ-ಗದ್ದೆಗಳಲ್ಲಿ ಹಬ್ಬ ಮಾಡುವ ವಿಭಿನ್ನ ಆಚರಣೆ ವಿಜಯನಗರ ಜಿಲ್ಲೆ ಮರಿಯಮ್ಮನಹಳ್ಳಿ ಸಮೀಪದ ಗರಗ ಗ್ರಾಮದಲ್ಲಿದೆ.
ಬುಧವಾರ ಗ್ರಾಮ ದೇವತೆ ಮಾರಮ್ಮ ಮತ್ತು ಗುಳೆ ಲಕ್ಕಮ್ಮ ದೇವತೆಗಳ ಜೊತೆಯಲ್ಲಿ ಊರನ್ನೇ ತೊರೆದು ಹೊಲ ಗದ್ದೆಗೆ ಸೇರಿದ ಗ್ರಾಮಸ್ಥರು ಅಲ್ಲಿಯೇ ಸಂಭ್ರಮದ ಗುಳೆ ಲಕ್ಕಮ್ಮನ ಜಾತ್ರೆ ನಡೆಸಿದರು.

ಗ್ರಾಮದಲ್ಲಿ ನೀರವ ಮೌನ, ಯಾವುದೇ ಜೀವ ಸಂಕುಲದ ಸುಳಿವಿಲ್ಲ, ಇಡೀ ಊರಿಗೆ ಊರೆ ಸ್ತಬ್ಧ. ಗ್ರಾಮದಲ್ಲಿ ಒಂದು ನರಪಿಳ್ಳೆಯ ಸುಳಿವಿಲ್ಲ. ಇಡೀ ಗ್ರಾಮಕ್ಕೆ ಮುಳ್ಳು ಬೇಲಿಹಾಕಿ, ಬಾಣಂತಿ, ವಯೋವೃದ್ಧರು ಎನ್ನದೇ ಎಲ್ಲರೊಂದಿಗೆ, ದೇವತೆಗಳನ್ನೂ ಕರೆ ತಂದು ಊರ ಹೊರಗಿದ್ದರು. ಗ್ರಾಮಸ್ಥರು ಪ್ರತಿ ವರ್ಷಕ್ಕೊಮ್ಮೆ ಆಚರಿಸಿಕೊಂಡು ಬಂದ ಪದ್ಧತಿ ಇದು.

ಪ್ರತಿ ವರ್ಷ ರೋಹಿಣಿ ಮಳೆಗೆ ಜೋಳ ಬಿತ್ತನೆ ನಂತರ ಗ್ರಾಮಕ್ಕೆ ಮುಂದಿನ ಮಳೆಗಳು ಉತ್ತಮವಾಗಿ ಸುರಿಯಲಿ ಸೊಂಪಾದ ಬೆಳೆ ಬರಲೆಂದು ಮಾರಮ್ಮ ದೇವಿ ಹಾಗೂ ಗುಳೆ ಲಕ್ಕಮ್ಮ ದೇವಿಯೊಂದಿಗೆ ಗ್ರಾಮದ ಹೊರವಲಯದಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ನೆಲೆಸುತ್ತಾರೆ. ಬೆಳಿಗ್ಗೆ ಬರುವ ವೇಳೆ ಪ್ರತಿ ಕುಟುಂಬ ಮನೆಯಲ್ಲಿನ ಜಾನುವಾರು, ಕುರಿ, ಕೋಳಿ, ಬೆಕ್ಕು, ನಾಯಿ ಸಮೇತ ಊರ ಹೊರವಲಯಕ್ಕೆ ಬಂದು ಸೇರುತ್ತಾರೆ.

ಮನೆಯಿಂದ ಜೋಳ, ಸಜ್ಜೆ ರೊಟ್ಟಿ, ಶೇಂಗಾ ಕಡಲೆಕಾಯಿ ಚಟ್ನಿ, ಬದನೆಕಾಯಿ ಪಲ್ಯ, ವಿವಿಧ ರೀತಿಯ ಕಾಳಿನ ಪಲ್ಯ ತಯಾರಿಸಿಕೊಂಡು ಹೋಗಿ ಹೊಲ-ಗದ್ದೆಗಳಲ್ಲಿ ಊಟ ಮಾಡಿ, ಮಧ್ಯಾಹ್ನದ ಅಡುಗೆ ಅಲ್ಲಿಯೇ ಮಾಡಿಕೊಂಡು ದೇವತೆಗಳಿಗೆ ನೈವೇದ್ಯ ಅರ್ಪಿಸಿ ನಂತರ ಊಟ ಮಾಡುತ್ತಾರೆ. ಸಂಜೆ ಆರು ಗಂಟೆ ನಂತರ ಗುಳೇ ಲಕ್ಕಮ್ಮ ದೇವಿಯನ್ನು ಗ್ರಾಮ ಹೊರಗಡೆ ಯಶವಂತನಗರ ಅರಣ್ಯದಲ್ಲಿ ಬಿಟ್ಟು ಬರುತ್ತಾರೆ. ಗ್ರಾಮದೇವತೆಯೊಂದಿಗೆ ಗ್ರಾಮ ಪ್ರವೇಶ ಮಾಡುವ ಮುನ್ನ ಜೋಳದ ಸಂಗಟಿ (ಅನ್ನ)ವನ್ನು ತಯಾರಿಸಿ ಗ್ರಾಮದ ಸುತ್ತಲೂ ಬಲಿ ಅನ್ನದಂತೆ ಹಾಕಲಾಗುತ್ತದೆ. ನಂತರ ಗ್ರಾಮದೇವತೆ ಮಾರಮ್ಮ ದೇವಿಯನ್ನು ಸಕಲ ವಾದ್ಯ ಮೇಳಗಳೊಂದಿಗೆ ಸಂಜೆ 7 ಗಂಟೆಗೆ ಗ್ರಾಮದಲ್ಲಿ ಬರಮಾಡಿಕೊಂಡು ಗ್ರಾಮ ಪ್ರವೇಶ ಮಾಡುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!