Thursday, March 30, 2023

Latest Posts

ಮುಂದಿನ ಚುನಾವಣೆಯಲ್ಲಿ ಜನರೇ ಪಾಠ ಕಲಿಸಲಿದ್ದಾರೆ: ಉದ್ಧವ್‌ ಆಕ್ರೋಶ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದಲ್ಲಿ ಬಾಳಾಸಾಹೇಬ್‌ ಠಾಕ್ರೆ ಸ್ಥಾಪಿಸಿದ ಶಿವಸೇನೆ ಪಕ್ಷದ ಹೆಸರು ಹಾಗೂ ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಚುನಾವಣೆ ಆಯೋಗವು ಏಕನಾಥ್‌ ಶಿಂಧೆ ಬಣಕ್ಕೆ ನೀಡಿ, ಅವರ ಬಣವೇ ನಿಜವಾದ ಶಿವಸೇನೆ ಎಂಬುದಾಗಿ ಘೋಷಿಸಿರುವುದಕ್ಕೆ ಉದ್ಧವ್‌ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕೃತ ನಿವಾಸ ಮಾತೋಶ್ರೀ ಎದುರು ನೆರೆದಿದ್ದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಾಗೂ ಏಕನಾಥ್‌ ಶಿಂಧೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಜನರಿಗೆ ಯಾವುದು ನಿಜವಾದ ಶಿವಸೇನೆ ಎಂಬುದು ಗೊತ್ತಿದೆ. ಅವರಿಗೆ ಶಿವಸೇನೆಯ ಹೆಸರು ಬೇಕು, ಪಕ್ಷದ ಬಿಲ್ಲು ಮತ್ತು ಬಾಣದ ಗುರುತು ಬೇಕು. ಆದರೆ, ಶಿವಸೇನೆಯ ಕುಟುಂಬ ಬೇಡ. ಯುದ್ಧ ಆರಂಭವಾಗಿದೆ, ಮುಂದಿನ ಚುನಾವಣೆಯಲ್ಲಿ ಜನರೇ ಕಳ್ಳರಿಗೆ ಪಾಠ ಕಲಿಸಲಿದ್ದಾರೆ ಎಂದೂ ಹೇಳಿದರು.

ಉದ್ಧವ್‌ಗೆ ತಿರುಗೇಟು ಕೊಟ್ಟ ಬಿಜೆಪಿ

ಮಾತೋಶ್ರೀ ಎದುರು ಉದ್ಧವ್‌ ಠಾಕ್ರೆ ಅವರು ಕಾರಿನ ಸನ್‌ರೂಫ್‌ನಲ್ಲಿ ನಿಂತು ಅವರ ತಂದೆ ಬಾಳಾಸಾಹೇಬ್‌ ಠಾಕ್ರೆ ಅವರನ್ನು ನೆನಪಿಸುವ ಹಾಗೆ ಬಲ ಪ್ರದರ್ಶನ ಮಾಡಿದರು. ಇದಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, “ಕಾರಿನ ಮೇಲೆ ನಿಂತು ಮಾತನಾಡಿದ ತಕ್ಷಣ ಉದ್ಧವ್‌ ಠಾಕ್ರೆ ಅವರು ಬಾಳಾಸಾಹೇಬ್‌ ಠಾಕ್ರೆ ಆಗುವುದಿಲ್ಲ” ಎಂದಿದೆ.

ಬಾಳಾಸಾಹೇಬ್‌ ಠಾಕ್ರೆ ಅವರು ಹಗಲು-ರಾತ್ರಿ ಕಷ್ಟಪಟ್ಟು ಶಿವಸೇನೆಯನ್ನು ಕಟ್ಟಿದರು. ಪಕ್ಷದ ಕಾರ್ಯಕರ್ತರೊಂದಿಗೆ ಒಡನಾಡಿ, ಪಕ್ಷವನ್ನು ಅಧಿಕಾರಕ್ಕೆ ತಂದರು. ಆದರೆ, ಉದ್ಧವ್‌ ಠಾಕ್ರೆ ಅವರು ಮನೆಯಿಂದಲೇ ಹೊರಬರುವುದಿಲ್ಲ, ಪಕ್ಷದ ಕಾರ್ಯಕರ್ತರ ಸಮಸ್ಯೆಗಳಿಗೆ ಕಿವಿಯಾಗುವುದಿಲ್ಲ” ಎಂದು ಬಿಜೆಪಿ ಮುಖಂಡ ಕೇಶವ್‌ ಉಪಾಧ್ಯೆ ಟ್ವೀಟ್‌ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!