ಬೀಳುವ ಸ್ಥಿತಿಯಲ್ಲಿ ಮೇಡಿಗಡ್ಡ ಲಕ್ಷ್ಮಿ ಬ್ಯಾರೇಜ್: ಆತಂಕದಲ್ಲಿ ಸ್ಥಳೀಯರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೆಲಂಗಾಣದ ಕಾಳೇಶ್ವರಂ ಎತ್ತಿಪೋತಲ ಜಲಾಶಯ ಯೋಜನೆಯ ಭಾಗವಾಗಿ ನಿರ್ಮಿಸಲಾದ ಮೇಡಿಗಡ್ಡ ಲಕ್ಷ್ಮೀ ಬ್ಯಾರೇಜ್‌ನ ಪಿಲ್ಲರ್‌ಗಳು ಕುಸಿಯುವ ಹಂತದಲ್ಲಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಲಕ್ಷ್ಮೀ ಬ್ಯಾರೇಜ್‌ನ 15ನೇ ಪಿಲ್ಲರ್‌ನಿಂದ 20ನೇ ಪಿಲ್ಲರ್‌ವರೆಗೆ ಸೇತುವೆ ಬಾಗಿದಂತೆ ಕಾಣುತ್ತಿದೆ. ಅದರಲ್ಲೂ ಬ್ಯಾರೇಜ್ ಬಿ-ಬ್ಲಾಕ್ ನ 19, 20 ಮತ್ತು 21ನೇ ಪಿಲ್ಲರ್ ಗಳ ನಡುವಿನ ಸೇತುವೆ ಸುಮಾರು 30 ಮೀಟರ್ ಉದ್ದ..ಒಂದು ಅಡಿಯವರೆಗೂ ಬಾಗಿದೆ.

ಸೇತುವೆಯ ಕೆಳಗಿರುವ ಬ್ಯಾರೇಜ್ ಪಿಲ್ಲರ್‌ಗಳು ನೆಲಕ್ಕಿಳಿದಿರುವುದರಿಂದ ಸೇತುವೆಯೂ ಕುಸಿದಿದೆಯಾ? ಅಥವಾ ಬ್ಯಾರೇಜ್ ಗೇಟ್ ಮತ್ತು ಸೇತುವೆಯ ನಡುವಿನ ಸಿಮೆಂಟ್ ಮತ್ತು ಕಬ್ಬಿಣದ ತೊಲೆಗಳ ನಡುವೆ ಏನಾದರೂ ದೋಷದಿಂದ ಈ ರೀತಿ ಆಗಿದ್ಯಾ? ಎಂಬುದು ಸ್ಪಷ್ಟವಾಗಿಲ್ಲ. ಸದ್ಯ ಸೇತುವೆ ದಾಟಲು ಜನರು ಹಾಗೂ ಪ್ರಯಾಣಿಕರಿಗೆ ಅವಕಾಶ ನೀಡುತ್ತಿಲ್ಲ. ಶನಿವಾರ ಕತ್ತಲು ಹಾಗೂ ನೀರಿರುವ ಕಾರಣ ನದಿಯಲ್ಲಿನ ಪಿಲ್ಲರ್ ಯಾವ ಸ್ಥಿತಿಯಲ್ಲಿದೆ ಎಂಬುದು ಗೊತ್ತಾಗಿಲ್ಲ ಎಂದು ಎಂಜಿನಿಯರಿಂಗ್ ಅಧಿಕಾರಿಗಳು ತಿಳಿಸಿದ್ದಾರೆ. ವಾಸ್ತವವಾಗಿ ಎಷ್ಟು ಪಿಲ್ಲರ್‌ಗಳು ಬೀಳುವ ಸ್ಥಿತಿಯಲ್ಲಿವೆ ಎಂಬುದು ಶೀಘ್ರದಲ್ಲೇ ಸ್ಪಷ್ಟವಾಗಲಿದೆ ಎಂದರು.

ಇದೇ ವೇಳೆ ನೀರಾವರಿ ಇಇ ತಿರುಪತಿ ರಾವ್ ಮಾತನಾಡಿ, ಗೇಟಿನಿಂದ ಸದ್ದು ಬರುತ್ತಿದ್ದು, ಬೆಳಗಾಗುವವರೆಗೆ ಏನೂ ಹೇಳುವಂತಿಲ್ಲ. ಪ್ರಸ್ತುತ 40 ಗೇಟ್‌ಗಳನ್ನು ತೆರೆದು ನೀರನ್ನು ಹರಿಬಿಡಲಾಗುತ್ತಿದೆ ಎಂದರು. ಭಾನುವಾರ ಬೆಳಗ್ಗೆ ಅಧಿಕಾರಿಗಳು ಬ್ಯಾರೇಜ್ ಪರಿಶೀಲನೆ ನಡೆಸಲಿದ್ದಾರೆ.

ಮೇಡಿಗಡ್ಡ ಬ್ಯಾರೇಜ್‌ನ ನೀರಿನ ಸಂಗ್ರಹ ಸಾಮರ್ಥ್ಯ 16.17 ಟಿಎಂಸಿ ಇದ್ದು, ಸದ್ಯ 10.100 ಟಿಎಂಸಿ ನೀರು ಸಂಗ್ರಹವಾಗಿದೆ. ಶನಿವಾರ ಸಂಜೆಯಿಂದ 8 ಗೇಟ್ ಗಳ ಮೂಲಕ 14,930 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!