ಹೊಸದಿಗಂತ ವರದಿ,ಹುಬ್ಬಳ್ಳಿ:
ಪೊಲೀಸ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕೊಲೆಯತ್ನ ಪ್ರಕರಣದ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಬುಧವಾರ ಸಂಜೆ ನಗರದಲ್ಲಿ ನಡೆದಿದೆ.
ಮಹೇಶ ಮೇಟಿ ಎಂಬಾತನಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಇಲ್ಲಿಯ ಲೋಹಿಯಾ ನಗರದ ಯುವತಿಯನ್ನು ಮಹೇಶ ಪ್ರೀತಿ ಮಾಡುವಂತೆ ಹಿಂದೆ ಬಿದಿದ್ದ. ಆಕೆ ಒಪ್ಪದಿದ್ದಾಗ ಮನೆಗೆ ನುಗ್ಗಿ ಹಲ್ಲೆ ಮಾಡಲು ಮುಂದಾಗಿದ್ದಾನೆ. ಆಗ ಯುವತಿಯ ತಾಯಿ ನೀಲಾ ಹಂಪಣ್ಣವರ ಬುದ್ದಿ ಹೇಳು ಬಂದಾಗ ಅವರಿಗೆ ಚಾಕೂವಿನಿಂದ ಇರಿದು ತಪ್ಪಿಸಿಕೊಂಡಿದ್ದ. ಹಳೇ ಹುಬ್ಬಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಗಾಯಗೊಂಡ ನೀಲಾ ಅವರನ್ನು ಚಿಕಿತ್ಸೆಗೆ ನಗರದ ಕೆಎಂಸಿಆರ್‌ಎ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಆರೋಪಿ ವಶಕ್ಕೆ ಪಡೆದು ವಿಚಾರಣೆ ಕರೆದುಕೊಂಡು ಹೋಗಿದ್ದರು. ಆಗ ಹಳೇ ಹುಬ್ಬಳ್ಳಿ ಪೊಲೀಸ್ ಅಕಾರಿ ಸುರೇಶ ಯಳ್ಳೂರ ಹಾಗೂ ಸಿಬ್ಬಂದಿ ನಿಂಗಪ್ಪ ಲಮಾಣಿ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಪೊಲೀಸ್ ಅಕಾರಿ ಸುರೇಶ ಯಳ್ಳೂರ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.
ಗಾಯಗೊಂಡ ಪೊಲೀಸರನ್ನು ಹಾಗೂ ಆರೋಪಿಯನ್ನು ಚಿಕಿತ್ಸೆಗೆ ಕೆಎಂಸಿಆರ್‌ಐ ಆಸ್ಪತ್ರೆಗೆ ರವಾನಿಸಲಾಗಿತ್ತು. ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಕೆಎಂಸಿಆರ್‌ಐ ಆಸ್ಪತ್ರೆಗೆ ಭೇಟಿ ನೀಡಿ ಪೊಲೀಸರ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್. ಇದ್ದರು.
ಕೊಲೆ ಮಾಡಿ ಪರಾರಿಯಾಗುವ ಉದ್ದೇಶದಿಂದ ಆರೋಪಿ ಸ್ನೇಹಿತರಿಂದ ೨೦ ಸಾವಿರ ಸಾಲ ಪಡೆದ್ದ. ವಿಚಾರಣೆ ವೇಳೆ ಈ ವಿಷಯ ಬಾಯಿ ಬಿಟ್ಟಿದ್ದ. ನಮ್ಮ ಪೊಲೀಸ್ ಸಿಬ್ಬಂದಿ ಆರೋಪಿಯನ್ನು ಸ್ಥಳ ಪರಿಶೀಲನೆಗೆ ಹೋದಾಗ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಪೊಲೀಸ್ ಅಕಾರಿ ಸುರೇಶ ಯಳ್ಳೂರ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಚಾಕು ಇರಿತಕ್ಕೆ ಒಳಗಾದ ನೀಲಾ ಹಂಪಣ್ಣವರಗೆ ಒಟ್ಟು ಐದು ಜನ ಹೆಣ್ಣುಮಕ್ಕಳಿದ್ದಾರೆ. ಒಬ್ಬ ಮಗಳಿಗೆ ಮದುವೆಯಾಗುವಂತೆ ಆರೋಪಿ ಒತ್ತಾಯ ಮಾಡಿದ್ದಾನೆ. ಒಪ್ಪದಿದ್ದಾಗ ಈ ರೀತಿ ಮಾಡಿದ್ದಾನೆ. ಸದ್ಯ ಗಾಯಗೊಂಡ ನಿಲಾ ಅವರು ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಯದಿಂದ ಪರಾಗಿದ್ದಾರೆ ಎಂದು ಹೇಳಿದರು.