ಪ್ರಧಾನಿ ನರೇಂದ್ರ ಮೋದಿಗೆ ಜರ್ಮನ್‌ನ ಬರ್ಲಿನ್​​ನಲ್ಲಿ ಅದ್ದೂರಿ ಸ್ವಾಗತ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

‘ಭಾರತ್ ಮಾತಾ ಕಿ ಜೈ, ವಂದೇ ಮಾತರಂ , ಮೋದಿ ಮೋದಿ’ ಉದ್ಘಾರಗಳು, ಘೋಷವಾಕ್ಯಗಳು ನಿರಂತರ ಅನುರಣಿಸಿದವಿಲ್ಲಿ ಅನಿವಾಸಿ ಭಾರತೀಯ ಸಮುದಾಯದ ಸಿರಿಕಂಠಗಳಿಂದ.
ಯುರೋಪ್‌ಗೆ ತಮ್ಮ ಮೂರು ದಿನಗಳ ಪ್ರವಾಸದಂಗ ಸೋಮವಾರ ಜರ್ಮನಿಯ ಬರ್ಲಿನ್‌ಗೆ ಬಂದಿಳಿದ ಭಾರತದ ಪ್ರಧಾನಿ ನರೇಂದ್ರ ಮೋದಿಜಿ ಅವರನ್ನು ,ಅಲ್ಲಿನ ಭಾರತೀಯ ಸಮುದಾಯ ತಮ್ಮ ಕುಟುಂಬದ ಆತ್ಮೀಯ ಸದಸ್ಯನಂತೆ ತುಂಬು ಪ್ರೀತಿ, ಆತ್ಮೀಯತೆ , ಆದರಗಳಿಂದ ಬರಮಾಡಿದ ಸನ್ನಿವೇಶ ಕಣ್ತುಂಬುವಂತಿತ್ತು.
ಬರ್ಲಿನ್‌ನಲ್ಲಿ ತಮ್ಮ ವಾಸ್ತವ್ಯದ ಹೊಟೇಲ್‌ಗೆ ಮೋದಿಯವರು ತಲುಪುತ್ತಿದ್ದಂತೆ, ಬೋಲೋ ಭಾರತ್ ಮಾತಾ ಕಿ ಜೈ, ವಂದೇ ಮಾತರಂ, ಮೋದಿ ಮೋದಿ ಎಂಬ ಘೋಷಣೆಗಳನ್ನು ನಿರಂತರ ಮೊಳಗುವುದರೊಂದಿಗೆ ಅನಿವಾಸಿ ಭಾರತೀಯರು ಈ ರಾಷ್ಟ್ರನಾಯಕನನ್ನು ಹೆಮ್ಮೆಯಿಂದ, ಭರ್ಜರಿಯಾಗೇ ಬರಮಾಡಿಕೊಂಡರು. ಹಲವರು ಮೋದಿಜಿ ಜತೆ ಫೋಟೋ ಕ್ಲಿಕ್ಕಿಸಿಕೊಂಡರೆ, ಪುಟ್ಟ ಬಾಲಕಿಯೋರ್ವಳು ಮೋದಿಜಿಗೆ ಫಲಕವೊಂದನ್ನು ಕಿರುಕೊಡುಗೆಯಾಗಿ ನೀಡಿದಳು. ಮೋದಿ ಈ ಫಲಕವನ್ನು ಕ್ಯಾಮರಾ ಕಣ್ಣಿಗೆ ನೇರ ಹಿಡಿದಾಗ ಅದರಲ್ಲಿದ್ದ ಚಿತ್ರ ಎಲ್ಲರಿಗೂ ಗೋಚರಿಸಿತ್ತು. ಅದರಲ್ಲಿದ್ದ ಚಿತ್ರ ಯಾರದ್ದು ಗೊತ್ತೇ, ಸ್ವಯಂ ಮೋದಿಜಿ ಅವರದ್ದು. ಬಾಲಕಿ ಮೋದಿಜಿ ಅವರಿಗೆ ಕೊಡುಗೆಯಾಗಿ ನೀಡಲೆಂದೇ ತಯಾರಿಸಿದ ಈ ಫಲಕಕ್ಕೆ ತನ್ನ ಸಹಿ ಹಾಕಿದ ಮೋದಿಜಿ, ಬಾಲಕಿಗೆ ಪ್ರೀತಿಯಿಂದ ಕೃತಜ್ಞತೆ ಸೂಚಿಸಿದರು. ತನ್ನ ಸುತ್ತ ನೆರೆದ ಮಕ್ಕಳೆಲ್ಲರ ತಲೆಯನ್ನೂ ಪ್ರೀತಿಯಿಂದ ತಡವಿ ಆಶೀರ್ವದಿಸಿದರು. ಇನ್ನು ದೊಡ್ಡವರು ಕೂಡ ಮೋದಿಜಿ ಅವರಿಂದ ಆಶೀರ್ವಾದ ಪಡೆದು ಪುಳಕಿತರಾದರು.

ಪ್ರಥಮ ಇನ್ ಪರ್ಸನ್ ಮೀಟಿಂಗ್ ಓಲಫ್ ಜತೆ
ಮೋದಿಜಿಯವರು ತಮ್ಮ ಪ್ರಥಮ ಇನ್ ಪರ್ಸನ್ ಮೀಟಿಂಗ್‌ನ್ನು ಜರ್ಮನಿಯ ಹೊಸ ಛಾನ್ಸೆಲರ್ ಓಲಫ್ ಸ್ಕೋಲ್ಜ್ ಜತೆ ನಡೆಸಲಿದ್ದಾರೆ. ಏಕಕಾಲಕ್ಕೆ ಭಾರತ -ಜರ್ಮನಿ ನಡುವಣ 6ನೇ ಅಂತರ್ ಸರಕಾರಿ ಸಮಾಲೋಚನೆಗಳ ಸಹಾಧ್ಯಕ್ಷತೆ ವಹಿಸುವರು. ಪ್ರಸ್ತುತ ಭೇಟಿಯು ಭಾರತ -ಜರ್ಮನಿ ನಡುವಣ ಸ್ನೇಹಕೊಂಡಿಯ ಬಲವರ್ಧನೆಗೆ ಪೂರಕವಾಗುವುದೆಂಬ ವಿಶ್ವಾಸ ತನಗಿದೆ ಎಂದು ಮೋದಿ ಬರ್ಲಿನ್ ತಲುಪಿದ ನಂತರ ಟ್ವೀಟ್ ಮಾಡಿದ್ದಾರೆ. ಸೋಮವಾರ ಬರ್ಲಿನ್‌ನಲ್ಲಿ 2 ಸಾವಿರಕ್ಕೂ ಅಧಿಕ ಭಾರತೀಯರನ್ನು ಉದ್ದೇಶಿಸಿ ಮೋದಿಜಿ 45ನಿಮಿಷಗಳ ಕಾಲ ಭಾಷಣ ಮಾಡುವರು.

ಭಾರತದಿಂದ ಜಗತ್ತು ಬಹಳಷ್ಟು ನಿರೀಕ್ಷಿಸುತ್ತಿದೆ
ಮೋದಿಯವರು ತಮ್ಮ 45ನಿಮಿಷಗಳ ಭಾಷಣದಲ್ಲಿ ಏನು ಹೇಳುವರು, ಅವರ ದೃಷ್ಟಿಕೋನವೇನೆಂಬ ಬಗ್ಗೆ ಅಲ್ಲಿನ ಭಾರತೀಯ ಸಮುದಾಯ ಸಾಕಷ್ಟು ಕುತೂಹಲ ಹೊಂದಿದೆ. ಕಾರಣ ,ಯುರೋಪ್ ಖಂಡದಲ್ಲಿ ಸಾಕಷ್ಟು ಸಂಖ್ಯೆಯ ಭಾರತೀಯರಿದ್ದಾರೆ, ಅದರಲ್ಲೂ ಜರ್ಮನಿಯಲ್ಲಿ ಭಾರತೀಯರ ಸಂಖ್ಯೆ ಅತ್ಯಧಿಕವಿದೆ. ಹಾಗಾಗಿ ತಮ್ಮನ್ನು ಉದ್ದೇಶಿಸಿ ಮೋದಿಜಿ ಯಾವ ಸಂದೇಶ ಕೊಡುವರೆಂಬುದನ್ನು ಕಿವಿಗೊಟ್ಟು ಕೇಳಲು ಭಾರತೀಯರು ಕಾತರರಾಗಿದ್ದಾರೆ.

ಸಹಕಾರ ಸೂರ್ತಿಗೆ ಬಲತುಂಬುವೆ: ಮೋದಿ

ಯುರೋಪ್ ಖಂಡವು ಹಲವು ಸವಾಲುಗಳನ್ನು ಎದುರಿಸುತ್ತಿರುವ ಸನ್ನಿವೇಶದಲ್ಲೇ ತಾನಲ್ಲಿಗೆ ಭೇಟಿ ಕೊಡುತ್ತಿದ್ದೇನೆ. ಶಾಂತಿ ಮತ್ತು ಸಮೃದ್ಧಿ ಬಯಸುವ ಭಾರತದ ಪಾಲಿಗೆ ಯುರೋಪಿಯನ್ನರು ಮಹತ್ತ್ವದ ಸಂಗಾತಿಗಳು, ಹಾಗಾಗಿ ತನ್ನ ಕಾರ್ಯಕ್ರಮಗಳ ಮೂಲಕ ಯುರೋಪ್ ರಾಷ್ಟ್ರಗಳೊಂದಿಗಿನ ಸಹಕಾರ ಸೂರ್ತಿಯನ್ನು ಮತ್ತಷ್ಟು ಬಲಪಡಿಸಲು ಶ್ರಮಿಸುವುದಾಗಿ ಮೋದಿ ಪ್ರವಾಸಾರಂಭಕ್ಕೆ ಮುನ್ನ ತಿಳಿಸಿದ್ದರು.
ಜರ್ಮನ್‌ನ ಕೌನ್ಸೆಲರ್ ಓಲಫ್ ಜತೆ ಮಾತುಕತೆ ನಂತರ ಪ್ರಧಾನಿಯವರು ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡರಿಕ್‌ಸೆನ್ ಕೋರಿಕೆ ಮೇರೆಗೆ ಕೊಪನ್‌ಹೆಗನ್‌ಗೆ ಅಕೃತ ಭೇಟಿ ಕೊಡುವರೆಂದು ವಿದೇಶ ವ್ಯವಹಾರಗಳ ಖಾತೆ ಪ್ರಕಟಣೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!