ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಬಾಬ್ ಅಂಗಡಿ ಮಾಲೀಕರೊಬ್ಬರು ಹೊತ್ತು ಉರಿಯುತ್ತಿದ್ದ ಎಲ್‌ಪಿಜಿ ಸಿಲಿಂಡರ್ ಅನ್ನು ಅಂಗಡಿಯಿಂದ ಹೊರಕ್ಕೆ ಎಸೆದ ಪರಿಣಾಮ ಐದು ದ್ವಿಚಕ್ರ ವಾಹನಗಳು ಮತ್ತು ಆಟೋರಿಕ್ಷಾ ಸುಟ್ಟು ಭಸ್ಮವಾಗಿರುವ ಘಟನೆ ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಈಜಿಪುರ ಮುಖ್ಯರಸ್ತೆಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಈಜಿಪುರ ಮುಖ್ಯರಸ್ತೆಯಲ್ಲಿರುವ ಕಬಾಬ್ ಅಂಗಡಿಯಲ್ಲಿ ರಾತ್ರಿ 9.30ರ ಸುಮಾರಿಗೆ ರೀಫಿಲ್ ಮಾಡಿದ್ದ ಸಿಲಿಂಡರ್ ನೊಂದಿಗೆ ಖಾಲಿ ಗ್ಯಾಸ್ ಸಿಲಿಂಡರ್ ಬದಲಿಸಲು ಪ್ರಯತ್ನಿಸುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಸ್ಟೌ ಆಫ್ ಮಾಡಲು ಮರೆತಿದ್ದು, ರೆಗ್ಯುಲೇಟರ್ ಸಂಪರ್ಕ ಕಡಿತಗೊಳಿಸಿದಾಗ ಸಿಲಿಂಡರ್‌ಗೆ ಬೆಂಕಿ ಹೊತ್ತಿಕೊಂಡಿದೆ.
ಇದರಿಂದ ಗಾಬರಿಗೊಂಡ ಮಾಲೀಕ ತನ್ನನ್ನು ಮತ್ತು ಅಂಗಡಿಯನ್ನು ಉಳಿಸಿಕೊಳ್ಳಲು ಹೊತ್ತಿ ಉರಿಯುತ್ತಿರುವ ಸಿಲಿಂಡರ್ ಅನ್ನು ರಸ್ತೆಗೆ ಎಸೆದಿದ್ದಾರೆ. ಪರಿಣಾಮವಾಗಿ ಆಟೋರಿಕ್ಷಾಕ್ಕೆ ಮೊದಲು ಬೆಂಕಿ ಹೊತ್ತಿಕೊಂಡಿದ್ದು, ಸ್ವಲ್ಪದರಲ್ಲೇ ಪಕ್ಕದಲ್ಲಿ ನಿಲ್ಲಿಸಿದ್ದ ಐದು ದ್ವಿಚಕ್ರ ವಾಹನಗಳಿಗೆ ಬೆಂಕಿ ವ್ಯಾಪಿಸಿದೆ.
ಘಟನೆ ನೋಡಿದ ಜನರು ನೀಡಿದ ಮಾಹಿತಿಯಿಂದ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸಮೀಪದ ಅಂಗಡಿಗಳ ಸಿಬ್ಬಂದಿ ಮತ್ತು ಜನರು ಕೂಡಾ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ವಿವೇಕ್ ನಗರ ಪೊಲೀಸರು ಅಂಗಡಿ ಮಾಲೀಕರ ವಿರುದ್ಧ ಬಿಎನ್‌ಸಿ ನ ಸೆಕ್ಷನ್ 287ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.