ಹೊಸದಿಗಂತ ವರದಿ,ಚಿತ್ರದುರ್ಗ:
ಊಟ ನೀಡುವಂತೆ ಒತ್ತಾಯಿಸಿ ಅಳುತ್ತಿದ್ದ ಆರು ವರ್ಷದ ಬಾಲಕನ ಪಾಪಿ ತಂದೆಯೊಬ್ಬ ಗುದ್ದಿ ಕೊಂದಿರುವ ಧಾರುಣ ಘಟನೆ ಶುಕ್ರವಾರ ಚಿತ್ರದುರ್ಗ ತಾಲ್ಲೂಕಿನ ಹಳೇ ರಂಗಾಪುರ ಗ್ರಾಮದಲ್ಲಿ ನಡೆದಿದೆ. ಮಂಜುನಾಥ ತಂದೆಯ ಕೈಯಿಂದಲೇ ಮೃತಪಟ್ಟ ನತದೃಷ್ಠ ಬಾಲಕ.
ತಂದೆ ತಿಪ್ಪೇಶ್ ಪ್ರತಿನಿತ್ಯ ಕುಡಿದು ಬಂದು ಪತ್ನಿ ಗೌರಮ್ಮಳನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಮಗು ಮಂಜುನಾಥ ಶುಕ್ರವಾರ ಊಟಕ್ಕೆ ಅನ್ನ ನೀಡುವಂತೆ ಅಳುತ್ತಿದ್ದ. ಇದರಿಂದ ಸಿಟ್ಟಿಗೆದ್ದ ತಂದೆ ತಿಪ್ಪೇಶ್ ಮಗುವಿನ ಎದೆ ಹಾಗೂ ಬೆನ್ನಿನ ಭಾಗಕ್ಕೆ ಜೋರಾಗಿ ಗುದ್ದಿದ್ದಾನೆ. ಇದರಿಂದ ಮೂರ್ಛೆ ಹೋದ ಬಾಲಕ ಮಂಜುನಾಥನನ್ನು ಚಿತ್ರದುರ್ಗದ ಆಸ್ಪತ್ರೆಗೆ ಕೊಂಡೊಯ್ಯಲಾಗುತ್ತಿತ್ತು. ಮಾರ್ಗಮಧ್ಯೆ ಬಾಲಕ ಮಂಜುನಾಥ್ ಮೃತಪಟ್ಟಿದ್ದಾನೆ.
ಆಸ್ಪತ್ರೆಯ ಮುಂದೆ ಕುಟುಂಬದವರ ಸಂಕಟ ಮುಗಿಲು ಮುಟ್ಟಿತ್ತು. ಘಟನಾ ಸ್ಥಳಕ್ಕೆ ಭರಮಸಾಗರ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.