ವಿಧಾನ ಪರಿಷತ್ತಿನ ಕಾರ್ಯಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಸಭಾಪತಿ ಬಸವರಾಜ ಎಸ್.ಹೊರಟ್ಟಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕುಂದಾನಗರಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಮುಗಿದಿದ್ದು, ಡಿ.19 ರಿಂದ ಡಿ.29 ರವರೆಗೆ ನಡೆದ ವಿಧಾನ ಪರಿಷತ್ತಿನ ಕಾರ್ಯಕಲಾಪವನ್ನು ಸಭಾಪತಿ ಬಸವರಾಜ ಎಸ್.ಹೊರಟ್ಟಿ ಅನಿರ್ದಿಷ್ಟಾವಧಿಗೆ ಮುಂದೂಡಿದರು.

ಅಧಿವೇಶನವನ್ನು ಡಿ.30 ವರೆಗೆ ಕರೆಯಲಾಗಿತ್ತು. ಆದರೆ ಒಂದು ದಿನ ಮೊದಲೇ ಅಧಿವೇಶನ ಮೊಟಕುಗೊಳಿಸಲಾಗಿದೆ.

ವಿಧಾನ ಪರಿಷತ್ತಿನಲ್ಲಿ 9 ದಿನ: ವಿಧಾನ ಪರಿಷತ್ತಿನಲ್ಲಿ 9 ದಿನ 45 ಗಂಟೆಗಳ ಕಾಲ ಚರ್ಚೆ ನಡೆಯಿತು. ವಿಧಾನ ಸಭೆಯಿಂದ ಅಂಗೀಕೃತವಾದ 6, ತಿದ್ದುಪಡಿಯೊಂದಿಗೆ ಅಂಗೀಕೃತವಾದ 01 ಹಾಗೂ ವಿಧಾನ ಪರಿಷತ್ತಿನಲ್ಲಿ ಮಂಡಿಸಿದ 02 ವಿಧೇಯಕಗಳನ್ನು ಪರಿಷತ್ತಿನಲ್ಲಿ ಅಂಗೀಕರಿಸಲಾಗಿದೆ.

ಮಹಾರಾಷ್ಟ್ರದ ಧೋರಣೆಗೆ ಖಂಡನೆ: ಪರಿಷತ್ ಕಲಾಪದಲ್ಲಿ ಬೆಳಗಾವಿ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರದ ಧೋರಣೆ ಖಂಡಿಸಿ ಒಕ್ಕೊರಲಿನಿಂದ ಖಂಡನಾ ನಿರ್ಣಯ ಕೈಗೊಳ್ಳಲಾಯಿತು. ರಾಜ್ಯ ಗಡಿ ವಿಚಾರವಾಗಿ ಸರ್ವ ಪಕ್ಷಗಳು ಒಂದಾಗಿದ್ದು ರಾಷ್ಟ್ರ ಮಟ್ಟದಲ್ಲಿ ಸೋಜಿಗವಾಗಿ ಕಂಡುಬಂತು. ರಾಷ್ಟ್ರ ಮಟ್ಟದ ಮುಖ್ಯ ಸುದ್ದಿವಾಹಿನಿಗಳು ಈ ಸಂಗತಿಯನ್ನು ಬಿತ್ತರಿಸಿದವು ಎಂದು ಸಭಾಪತಿ ಹೊರಟ್ಟಿ ತಿಳಿಸಿದರು.

ಡಿ.19 ರಂದು ಪರಿಷತ್ತಿನಲ್ಲಿ ನಿಧನರಾದ ಗಣ್ಯರುಗಳಿಗೆ ಸಂತಾಪ ವ್ಯಕ್ತಪಡಿಸಲಾಯಿತು. ಡಿ.20 ರಂದು ವಿಧಾನ ಪರಿಷತ್ತಿನ ಕಾರ್ಯದರ್ಶಿ ಮಹಾಲಕ್ಷ್ಮೀ ಅವರು ಕಳೆದ ಅಧಿವೇಶನದ ವರದಿ ಹಾಗೂ ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಮಂಡಿಸಿದರು. ಡಿ.21ರಂದು ಶಾಸಕ ಬಸವರಾಜ ಹೊರಟ್ಟಿ ಸಭಾಪತಿಯಾಗಿ ಸರ್ವಾನುಮತದಿಂದ ಆಯ್ಕೆಯಾದರು. ಸಭಾಪತಿ ಚುನಾವಣೆ ಕಾರ್ಯಕಲಾಪ ಮುಗಿಯುವ ಹೊರಗೆ ಹಂಗಾಮಿ ಸಭಾಪತಿ ರಘುನಾಥ್ ‌ರಾವ್ ಮಲ್ಕಾಪೂರೆ‌ ಸದನದ ಕಾರ್ಯಕಲಾಪ ನಿರ್ವಹಿಸಿದರು. ಡಿ.23 ರಂದು ವಿಧಾನ ಪರಿಷತ್ತಿನ ಉಪ ಸಭಾಪತಿ ಸ್ಥಾನದ ಚುನಾವಣೆಯಲ್ಲಿ ಶಾಸಕ ಪ್ರಾಣೇಶ್‌ ಎಂ.ಕೆ.ಉಪ ಸಭಾಪತಿಯಾಗಿ ಚುನಾಯಿತರಾದರು.
ಡಿ.30 ಕಾರ್ಯಕಲಾಪ ಮೊಟಕುಗೊಳಿಸಿದ್ದರಿಂದ ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಗಳ ನಿಯಮ 37 (ಎ)ರ ರೀತ್ಯಾ ಡಿ.30 ಉತ್ತರಿಸಬೇಕಾಗಿದ್ದ 15 ಪ್ರಶ್ನೆಗಳ ಪೈಕಿ 08 ಪ್ರಶ್ನೆಗಳಿಗೆ ಹಾಗೂ ಲಿಖಿತ ಮೂಲಕ ಉತ್ತರಿಸುವ 102 ಪ್ರಶ್ನೆಗಳ ಪೈಕಿ 29 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಗಳನ್ನು ಮಂಡಿಸಲಾಯಿತು.

ವಿಧಾನಸಭೆ ಕಲಾಪ ಮುಂದೂಡಿಕೆ: ಕಾಂಗ್ರೆಸ್ ಸದಸ್ಯರ ಸಭಾತ್ಯಾಗದೊಂದಿಗೆ ಸ್ಪೀಕರ್ ಕಾಗೇರಿ ಬೆಳಗಾವಿ ವಿಧಾನಸಭೆ ಅಧಿವೇಶನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದರು. ಆ ಮೂಲಕ ಒಂಬತ್ತು ದಿನಗಳ ವಿಧಾನಸಭೆ ಕಲಾಪ ಮುಕ್ತಾಯವಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!