ಹೊಸದಿಗಂತ ವರದಿ ಮುಂಡಗೋಡ:
೭ನೇ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ಶ್ರೀಮಾರಿಕಾಂಬಾ (ದ್ಯಾಮವ್ವ)ದೇವಿ ರಥೋತ್ಸವವು ಸಾವಿರಾರು ಜನರ ಭಕ್ತಿ ಪೂರ್ವ ಜಯಘೋಷಗಳ ನಡುವೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಅತಿ ವಿಜೃಂಭಣೆಯಿಂದ ಬುಧವಾರ ಜರುಗಿತು.
ಬೆಳಗ್ಗೆ 8.51ರ ಹೊತ್ತಿಗೆ ಸಕಲ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ಶ್ರೀವರದ ಆಂಜನೇಯ ಸ್ವಾಮಿ ಸನಿದಾನ ಶ್ರೀ ಕ್ಷೇತ್ರ ಗಡಿ ಏರಿಯ ಅವಧೂತ ರಾಜೇಂದ್ರ ಭಟ್ಟರು ಚಾಲನೆಯಿಂದ ತೇರು ಸಾಗಿತು. ಈ ವೇಳೆ ಮಾಜಿ ಶಾಸಕ ವಿ.ಎಸ್.ಪಾಟೀಲ, ತಹಶೀಲ್ದಾರ ಶಂಕರ ಗೌಡಿ, ಪ.ಪಂ ಮುಖ್ಯಾಧಿಕಾರಿ ಸಂತೋಷಕುಮಾರ ಎಚ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಈ ನಡುವೆ ದಾರಿಯುದ್ದಕ್ಕೂ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ರಥಬೀದಿಯಲ್ಲಿ ಸುಮಾರು 5ತಾಸಿಗಿಂತಲೂ ಹೆಚ್ಚು ಸಮಯ ಸಾಗಿದ ತೇರು ನಂತರ ಮಧ್ಯಾಹ್ನ 1.45ರ ಸುಮಾರಿಗೆ (ಚೌತಮನೆ)ಜಾತ್ರಾ ಗದ್ದುಗೆ ತಲುಪಿತು. ನಂತರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜಾತ್ರಾ ಗದ್ದುಗೆಯಲ್ಲಿ ದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಮೆರವಣಿಗೆಯಲ್ಲಿ ತೇರಿಗೆ ಭಕ್ತರು ಬಾಳೆಹಣ್ಣು ಮತ್ತು ಉತ್ತತ್ತಿ ಎಸೆದರು. ಇನ್ನು ಕೆಲವರು ಕೋಳಿ, ಹುಂಜಗಳನ್ನು ತೇರಿಗೆ ಎಸೆಯುವ ಮೂಲಕ ತಮ್ಮ ಹರಕೆ ತೀರಿಸಿದರು.
ಮೆರವಣಿಗೆಯಲ್ಲಿ ಪಂಚವಾದ್ಯಾ, ಡೊಳ್ಳು ಕುಣಿತ, ಚಂಡೆಮಾದ್ಯ, ಚಿಲಿಪಿಲಿ ಗೊಂಬೆ ನೃತ್ಯ, ಹುಲಿವೇಷ ನೃತ್ಯ, ಮೈಲಾರಲಿಂಗ ಭಕ್ತರಿಂದ ಕುಣಿತ ಸೇರಿದಂತೆ ಹತ್ತು ಹಲವು ನೃತ್ಯ ತಂಡಗಳು ರಥೋತ್ಸವದ ಮೆರವಣಿಗೆಗೆ ರಂಗು ತಂದವು. ಕಲಾವಿದರ ವಿಭಿನ್ನ ವಾದ್ಯ, ವೇಷ- ಭೂಷಣಗಳು ಜನಮನ ಸೆಳೆದವು. ಡೊಳ್ಳು ಕುಣಿತ ಮೆರವಣಿಗೆಗೆ ಮೆರಗು ನೀಡಿತು. ಶ್ರೀಮಾರಿಕಾಂಬೆಗೆ ಜಯದ ಘೋಷಣೆ ಹಾಗೂ ಉದೋ ಉದೋ ಎಂದು ಕೂಗುತ್ತಾ ರಥವನ್ನು ಜಗ್ಗಿ ಮುಂದೆ ಸಾಗಿಸುತ್ತಿರುವದು ಕಂಡು ಬಂತು. ೭೫ ವರ್ಷಗಳ ನಂತರ ೭ನೇ ಬಾರಿಗೆ ನಗರದಲ್ಲಿ ಮಾರಿಕಾಂಬೆ ಜಾತ್ರೆ ಭಕ್ತರ ಹರ್ಷೋದ್ಘಾರಗಳ ನಡುವೆ ಯಶಸ್ವಿಯಾಗಿ ನಡೆಯಿತು. ಸಾಗುತ್ತ ಹೋದಂತೆ ಭಕ್ತರ ಸಂಖ್ಯೆಯೂ ಹೆಚ್ಚಾಗುತ್ತಾ ಬಂತು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದರು.
ಭವ್ಯ ಮೆರವಣಿಗೆ: ಸುಮಾರು 200 ಮೀಟರ್ ಅಂತರದಲ್ಲಿರುವ ಚೌತಮನೆವರೆಗೆ ಭಕ್ತರೆಲ್ಲ ಸೇರಿ ದೇವಿಯ ರಥವನ್ನು ಎಳೆಯುತ್ತಿರುವ ದೃಶ್ಯ ಕಂಡು ಬಂತು. ಬಗೆ-ಬಗೆ ಹೂಗಳ ಮಾಲೆಯಿಂದ, ನಿಂಬೆ ಹಣ್ಣಿನ ಹಾರದಿಂದ ಮತ್ತು ಕೇಸರಿ, ಬಿಳಿ, ಹಸಿರು, ಹಳದಿ ಮುಂತಾದ ವರ್ಣಗಳ ಬಟ್ಟೆಗಳಿಂದ ರಥವನ್ನು ಅಂದಗೊಳಿಸಲಾಗಿತ್ತು. ತೇರು ಸಾಗುವ ರಥಬೀದಿಯ ಎಲ್ಲರ ಮನೆಗಳನ್ನು ತಳಿರು ತೋರಣಗಳಿಂದ ಮತ್ತು ಮನೆಯ ಮುಂದೆ ನೀರಿನಿಂದ ನೆಲ ಸ್ವಚ್ಛ ಮಾಡಿ ರಂಗುರಂಗಿನ ರಂಗವಲ್ಲಿ ಹಾಕಿ ಸಿಂಗರಿಸಲಾಗಿತ್ತು.
ಶಾಸಕರು ಭೇಟಿ: ರಥೋತ್ಸವದ ಮೆರವಣಿಗೆಯ ದಾರಿ ಮಧ್ಯೆ ಶಾಸಕ ಶಿವರಾಮ ಭೇಟಿ ನೀಡಿ ಭವ್ಯ ಮೆರವಣಿಗೆಯಲ್ಲಿ ಭಾಗಿ ನಂತರ ಜಾತ್ರಾ ಗದ್ದುಗೆಯಲ್ಲಿ ದೇವಿ ಪ್ರತಿಷ್ಠಾಪನೆಯ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ದೇವಿಯ ಆರ್ಶೀವಾದ ಪಡೆದರು.
ತಾಲೂಕಿನ ಹಾಗೂ ವಿವಿಧ ಭಾಗಗಳಿಂದ ಬಂದ ಸಾವಿರಾರು ಭಕ್ತರು ಶ್ರೀಮಾರಿಕಾಂಬಾದೇವಿ ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಅಲ್ಲಲ್ಲಿ ಮಕ್ಕಳು ಕಾಣೆಯಾಗಿ ಧ್ವನಿವರ್ಧದ ಮೂಲಕ ಕಳೆದು ಹೋದ ಮಕ್ಕಳನ್ನು ಹುಡುಕಿ ಅವರ ಪಾಲಕ- ಪೋಷಕರಿಗೆ ಒಪ್ಪಿಸಲಾಯಿತು.



