ಹೊಸದಿಗಂತ ವರದಿ, ಬಳ್ಳಾರಿ:
ಐವಿ ದ್ರಾವಣದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಬಾಣಂತಿಯರ ಸಾವಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ. ಗುಣಮಟ್ಟವಿಲ್ಲದ ಕಳಪೆ ಐವಿ ದ್ರಾವಣ, ಔಷಧಿ ಸರಬರಾಜಿನಿಂದ ಬಾಣಂತಿಯರು ಸಾವನ್ನಪ್ಪಿದ್ದು, ಕಾಟಾಚಾರಕ್ಕೆ ಸಭೆ ನಡೆಸಿ ಸರ್ಕಾರ 2 ಲಕ್ಷ ರೂ.ಪರಿಹಾರ ಅಂದ್ರೆ, ಜೀವಕ್ಕೆ ಬೆಲೆ ಇಲ್ವಾ, ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಕೂಡಲೇ ಬಾಣಂತಿಯರ ಸಾವಿನ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು, ಮೃತಪಟ್ಟ ಬಾಣಂತಿಯರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ನೀಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಒತ್ತಾಯಿಸಿದರು.
ನಗರದ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಮೃತಪಟ್ಟಿರುವ ಬಾಣಂತಿಯರ ಸಾವಿನ ಪ್ರಕರಣಗಳು ಹಾಗೂ ಕಳೆದ 10 ತಿಂಗಳಲ್ಲಿ ರಾಜ್ಯಾದ್ಯಂತ ಮೃತಪಟ್ಟ 111 ನವಜಾತ ಶಿಶುಗಳು ಮೃತಪಟ್ಟಿದ್ದು, ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರು ಯಾರೇ ಇರಲಿ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಬಾಣಂತಿಯರ ಸಾವಿನ ಕುರಿತು ಇಲ್ಲಿನ ಆಸ್ಪತ್ರೆಗೆ ಭೇಟಿ ನೀಡಿ,ಪರಿಶೀಲಿಸಿದ ಬಳಿಕ ವೈದ್ಯರೊಂದಿಗೆ ಮಾಹಿತಿ ಪಡೆದಿರುವೆ, ಬಾಣಂತಿಯರ ಸಾವಿಗೆ ಕಳಪೆ ಔಷಧಿ ಸರಬರಾಜು, ಬಳಸಲು ಯೋಗ್ಯವಲ್ಲ ಐವಿ ದ್ರಾವಣ ಸರಬರಾಜು ಹಿನ್ನೆಲೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಸಾಯಿಸುವ ಮೆಡಿಸಿನ್ ಇದು, ಐವಿ ದ್ರಾವಣ ನೀಡಿ ಎರಡೇ ಗಂಟೆಯಲ್ಲಿ ಸಾವು ಅಂದ್ರೆ ಸರ್ಕಾರಕ್ಕೆ ನಾಚಿಕೆಯಾಗಬೇಕು, ಅಮಾಯಕ ಮಹಿಳೆಯರು ಸರಕಾರದ ಎಡವಟ್ಟಿನಿಂದ ಅಸುನೀಗಿದ್ದಾರೆ. ರಾಜ್ಯಾದ್ಯಂತ ವಿರೋಧ ವ್ಯಕ್ತವಾದ ಬಳಿಕ ಕಾಟಾಚಾರಕ್ಕೆ ಸಭೆ ನಡೆಸಿ, 2 ಲಕ್ಷ ರೂ.ಪರಿಹಾರ ಘೋಷಿಸಿ, 2 ತಿಂಗಳ ಹಿಂದೆ ಬಂದ ಔಷಧಿ ನಿಯಂತ್ರಕರನ್ನು ಅಮಾನತ್ತು ಮಾಡಿದೆ. ರೋಗಿಗಳ ಬಳಕೆಗೆ ಯೋಗ್ಯವಲ್ಲದ ಔಷಧಿಗಳು ಎಂದು 6 ತಿಂಗಳ ಹಿಂದೆಯೇ ಅಧಿಕಾರಿಗಳು, ಸಂಬಂಧಿಸಿದ ಮೇಲಧಿಕಾರಿಗಳಿಗೆ, ಸರ್ಕಾರಕ್ಕೆ ತಿಳಿಸಿದ್ದರು. ಆದರೂ, ನಿರ್ಲಕ್ಷ್ಯ ವಹಿಸಿದ್ದಾರೆ. ಇದರಲ್ಲಿ ಕಾಣದ ಕೈಗಳ ಆಟ ನಡೆದಿದೆ, ಇದೆ ಡ್ರಗ್ ನ್ನೇ ಬಳಕೆ ಮಾಡಬೇಕು ಎಂದು ಶಿಫಾರಸ್ಸು ಮಾಡಿದರ ಹಿಂದೆ ಸರ್ಕಾರದ ಕೈವಾಡವಿದೆ. ಡಾ.ರಘುನಂದನ್, ಡಾ.ಶೈಲಜಾ, ಸೇರಿದಂತೆ ಡ್ರಗ್ ಕಂಟ್ರೋಲ್ ನ ವಿವಿಧ ಅಧಿಕಾರಿಗಳು ಪರೀಕ್ಷೆ ಮಾಡದೇ ಶಿಫಾರಸ್ಸು ಮಾಡಿದ್ದಾರೆ. ಬಾಣಂತಿಯರ ಸಾವಿನ ಬಳಿಕ ನಡೆದ ತನಿಖೆಯಲ್ಲಿ ಐವಿ ದ್ರಾವಣ ಕಳಪೆಯಾಗಿದೆ, ಇದನ್ನು ಬಳಸಿದರೆ ರೋಗಿಗಳಿಗೆ ಅಪಾಯ ಎಂಬುದು ಬಯಲಾಗಿದೆ. ಇಂತಹ ಅತ್ಯಂತ ಕೆಟ್ಟ ಸರ್ಕಾರವನ್ನು ಎಂದು ನೋಡಿಯೇ ಇಲ್ಲ, ಕಳಪೆ ಔಷಧಿ ಸರಬರಾಜು ಮಾಡಿ, ಬಾಣಂತಿಯರ ಸಾವಿಗೆ ಸರ್ಕಾರ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿ.ಎಂ.ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರೈತರಿಗೆ ಸಾವಿನ ಭಾಗ್ಯ ಕೊಟ್ಟಿದೆ, ಪ್ರಾಮಾಣಿಕ ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ ಕೊಟ್ಟ ಸರ್ಕಾರ, ಹಾಸನದಲ್ಲಿ ದೊಡ್ಡ ಸಮಾವೇಶ ಮಾಡಲು ಹೊರಟಿದೆ, ಇದು ಯಾವ ಪುರುಷಾರ್ಥಕ್ಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಖಜಾನೆ ಖಾಲಿಯಾಗಿದೆ, ಸರ್ಕಾರವೇ ಕಳಪೆಯಾಗಿದೆ ಅಂತಿದ್ವಿ, ಆಸ್ಪತ್ರೆಯಲ್ಲಿ ಅಕ್ರಮ, ಅವ್ಯವಹಾರ ಅಂದ್ವೀ, ಅದು ಈಗ ಸಾಬೀತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಕಾಣೆಯಾಗಿದ್ದಾನೆ, ವೈದ್ಯಕೀಯ ಸಚಿವ, ಆರೋಗ್ಯ ಸಚಿವರು ಈ ಕಡೆ ತಲೆ ಹಾಕಿಲ್ಲ, ಸಿ.ಎಂ.ಕಳೆದ ಎರಡು ದಿನಗಳ ಹಿಂದೆ ಆಸ್ಪತ್ರೆ ಪಕ್ಕದಲ್ಲೇ ಕಾರ್ಯಕ್ರಮದಲ್ಲಿ ಭಾಗವಹಿಸಿ ತೆರಳಿದ್ರು, ಆಸ್ಪತ್ರೆ ಕಡೆ ಮುಖ ಮಾಡ್ಲಿಲ್ಲ, ಈ ಬಾಣಂತಿಯರ ಸಾವಿಗೆ ಸರ್ಕಾರವೇ ಕಾರಣ ಎಂದು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಗಂಗಾವತಿ ಶಾಸಕ ಜಿ.ಜನಾರ್ಧನ್ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೊಕ, ಕೆ.ಎಸ್.ದಿವಾಕರ್, ಬಂಗಾರು ಹನುಮಂತು, ಡಾ. ಮಹಿಪಾಲ್ ಇದ್ದರು.