ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ(ಫೆಬ್ರವರಿ 5) 16 ಅಡಿ ಎತ್ತರದ ರಾಮಾನುಜಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.
ತೆಲಂಗಾಣದ ಹೈದರಾಬಾದ್ ಬಳಿ ‘ಸಮಾನತೆಯ ಪ್ರತಿಮೆ’ ಅನಾವರಣಗೊಳಲು ಸಜ್ಜಾಗಿದ್ದು, ಈ ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾಗಲು ಎಲ್ಲರು ಕಾತುರದಿಂದ ಕಾಯುತ್ತಿದ್ದಾರೆ.
ಪ್ರಧಾನಿ ನಾಳೆ ಮಧ್ಯಾಹ್ನ 2 ಗಂಟೆಗೆ ವಿಶೇಷ ವಿಮಾನದಲ್ಲಿ ಬೇಗಂಪೇಟೆ ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ. ICRISAT ಸಂಸ್ಥೆಯ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್‌ನಲ್ಲಿ ICRISAT ಕ್ಯಾಂಪಸ್‌ಗೆ ಹೋಗಲಿದ್ದಾರೆ.
ನಂತರ ‘ಸಮಾನತೆಯ ಪ್ರತಿಮೆ’ಯನ್ನು ಉದ್ಘಾಟಿಸಲಿದ್ದಾರೆ. ಇದಾದ ಬಳಿಕ ರಸ್ತೆ ಮಾರ್ಗದ ಮೂಲಕ ಶಂಶಾಬಾದ್ ವಿಮಾನ ನಿಲ್ದಾಣಕ್ಕೆ ತೆರಳಿ ವಿಶೇಷ ವಿಮಾನದಲ್ಲಿ ದೆಹಲಿಗೆ ಹಿಂತಿರುಗಲಿದ್ದಾರೆ.
11ನೇ ಶತಮಾನದ ಭಕ್ತಿ ವೈಷ್ಣವ ಮತ್ತು ಕ್ರಾಂತಿಕಾರಿ ಸಮಾಜ ಸುಧಾರಕ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆಯು ಜಗತ್ತಿನಲ್ಲಿ ಕರುಣೆ, ಆನಂದ ಮತ್ತು ಸಮಾನತೆಯನ್ನು ಪ್ರತಿನಿಧಿಸುತ್ತದೆ. 216 ಅಡಿ ಎತ್ತರದ ರಾಮಾನುಜಾಚಾರ್ಯರ ಪ್ರತಿಮೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಫೆಬ್ರವರಿ 5ರಂದು ಅನಾವರಣಗೊಳಿಸಲಿದ್ದಾರೆ. ಫೆಬ್ರವರಿ 13ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಮಾನುಜಾಚಾರ್ಯರ 120 ಕೆಜಿ ಚಿನ್ನದ ದೇವರನ್ನು ಅನಾವರಣಗೊಳಿಸಲಿದ್ದಾರೆ. ಕೆ ಚಂದ್ರಶೇಖರ್ ರಾವ್ ಡೈನಾಮಿಕ್ ಫೌಂಟೇನ್ ಉದ್ಘಾಟಿಸುವರು.
ಬಿಗಿ ಬಂದೋಬಸ್ತ್
ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಹೈದರಾಬಾದ್‌ನ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಪ್ರಧಾನಿಯವರ ಭದ್ರತೆಗಾಗಿ ಸುಮಾರು 7,000 ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಶ್ರೀರಾಮನಗರದಲ್ಲೂ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ.ಇತ್ತೀಚೆಗೆ ಪಂಜಾಬ್‌ನಲ್ಲಿ ನಡೆದ ಪ್ರಧಾನಿ ಬೆಂಗಾವಲು ವಾಹನವನ್ನು ತಡೆದ ಘಟನೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.