ಸ್ಟೇರಿಂಗ್ ತುಂಡಾಗಿ ಗದ್ದೆಗೆ ಉರುಳಿ ಬಿದ್ದ ಬಸ್: 50ಕ್ಕೂ ಹೆಚ್ಚು ಜನರಿಗೆ ಗಾಯ

ಹೊಸದಿಗಂತ ವರದಿ, ಮೈಸೂರು:

ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಕೊಪ್ಪಲುಗೇಟ್ ಗ್ರಾಮದ ಬಳಿ ಸಾರಿಗೆಸಂಸ್ಥೆ ಬಸ್‌ವೊಂದು ನಿಯಂತ್ರಣ ತಪ್ಪಿ ಭತ್ತದ ಗದ್ದೆಗೆ ಬಿದ್ದ ಪರಿಣಾಮ ಬಸ್‌ನಲ್ಲಿದ್ದ ಸುಮಾರು ೫೦ ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿರುವ ಘಟನೆ ಸಂಭವಿಸಿದೆ.

ಮೈಸೂರು ಜಿಲ್ಲೆಯ ಕೆ.ಆರ್.ನಗರ ಘಟಕಕ್ಕೆ ಸೇರಿದ ಬಸ್, ಕೇರಳಾಪುರ ಹೆಬ್ಸೂರು, ಸಾಲಿಗ್ರಾಮ ಮಾರ್ಗವಾಗಿ ಕೃಷ್ಣರಾಜನಗರಕ್ಕೆ ಬರುತ್ತಿದ್ದಾಗ ಘಟನೆ ಸಂಭವಿಸಿದೆ. ಬಸ್‌ನಲ್ಲಿ ಸುಮಾರು ೮೦ಕ್ಕೂ ಹೆಚ್ಚುಮಂದಿ ಪ್ರಯಾಣಸುತ್ತಿದ್ದು, ಬಸ್ ಕೆಸ್ತೂರುಕೊಪ್ಪಲುಗೇಟ್ ಬಳಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಸೇತುವೆ ಬಳಿ ಬರುತ್ತಿದ್ದಂತೆ ಸ್ಟೇರಿಂಗ್ ತುಂಡಾದ ಕಾರಣ ಚಾಲಕನ ನಿಯಂತ್ರಣ ತಪ್ಪಿ ನೇರ ಭತ್ತದ ಗದ್ದೆಗೆ ಹೋಗಿ ಬಿದಿದ್ದೆ.

ಬಸ್ ಬಿದ್ದ ರಭಸಕ್ಕೆ ಬಸ್‌ನ ಚಾಲಕ ಸೇರಿದಂತೆ ಮುಂದೆ ಕುಳಿತಿದ್ದ ಪ್ರಯಾಣಕರು ಒಮ್ಮೆಲೆ ಮುಂದಿನ ಗಾಜಿನ ಸಮೇತ ಹೊರಗೆ ಎಸೆಯಲ್ಪಟ್ಟಿದ್ದು, ಬಸ್‌ನಲ್ಲಿದ್ದ ಸೀಟ್‌ಗಳು, ಕಂಬಿಗಳು ಮುರಿದಿರುವ ಕಾರಣ ಒಬ್ಬರಿಗೊಬ್ಬರು ಡಿಕ್ಕಿ ಹೊಡೆದು ಕಾರಣ ಎಲ್ಲರಿಗೂ ತಲೆಬಾಗ ಮತ್ತು ಮುಖಭಾಗಕ್ಕೆ ಸಾಕಷ್ಟು ಪೆಟ್ಟುಬಿದ್ದಿದೆ.

ಸುಮಾರು ೫೦ಕ್ಕೂ ಹೆಚ್ಚುಮಂದಿಗೆ ಕೈ, ಕಾಲು, ಮುರಿತ, ತಲೆಗೆ ಪೆಟ್ಟುಬಿದ್ದಿದ್ದು , ಹಲವರಿಗೆ ಹಲ್ಲುಮುರಿದುಹೋಗಿವೆ. ಮತ್ತೆ ಕೆಲವರಿಗೆ ಒಳ ಏಟಾಗಿರುವ ಕಾರಣ ನೋವಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಬಸ್‌ನ ಚಾಲಕ ಕುಮಾರ್, ಹಾಗೂ ನಿರ್ವಾಹಕ ಗಂಗಾಧರ ಸೇರಿದಂತೆ ಬಹುತೇಕರಿಗೆ ಪೆಟ್ಟಾಗಿದ್ದು ಯಾವುದೇ ಸಾವು ಸಂಭವಿಸಿಲ್ಲ.

ಭತ್ತದ ಗದ್ದೆ ಎಲ್ಲದೆ ಬೇರೆಲ್ಲಾದರೂ ಘಟನೆ ಸಂಭವಿಸಿದಲ್ಲಿ ಭಾರಿ ಅನಾಹುತವುಂಟಾಗುತ್ತಿತ್ತು. ಬಸ್ ವೇಗವೂ ಸ್ವಲ್ಪ ಕಡಿಮೆ ಇದ್ದ ಕಾರಣ ಆಗಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ನಾಗರತ್ನಮ್ಮ, ವಿದ್ಯಾ, ಗಂಗಾಧರಮೂರ್ತಿ, ಪ್ರಸನ್ನಕುಮಾರ್, ಅಶೋಕ, ಶಾಂತ, ಪವಿತ್ರ, ಸವಿತಾ, ನಿರ್ಮಲಾ, ಮುದ್ದಮ್ಮ ಎಂಬುವರು ಸೇರಿದಂತೆ ಸುಮಾರು ೧೦ಕ್ಕೂ ಹೆಚ್ಚು ಮಂದಿಯನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಶ್ರೀರಾಂಪುರ, ಕೆಸ್ತೂರುಕೊಪ್ಪಲು, ಕೆಸ್ತೂರುಕೊಪ್ಪಲುಗೇಟ್‌ನ ಗ್ರಾಮಸ್ಥರು, ಯುವಕರು ಹಾಗೂ ಸಾರ್ವಜನಿಕರು ಕೂಡಲೆ ಗಾಯಗೊಂಡವರನ್ನು ಕೃಷ್ಣರಾಜನಗರದ ಕಡೆ ತೆರಳುವ ವಾಹನಗಳಲ್ಲಿ ಹಾಗೂ ಅಂಬ್ಯುಲೆನ್ಸ್ಗಳಲ್ಲಿ ಹತ್ತಿಸಿ ಪಟ್ಟಣದ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದರು.
ಘಟನೆ ಸಂಬoಧ ಸ್ಥಳಕ್ಕೆ ಆಗಮಿಸಿದ ಕೆ.ಆರ್.ನಗರ ಗ್ರಾಮಾಂತರ ಠಾಣೆಯ ಪೋಲೀಸರು ಸ್ಥಳ ಮಹಜರು ನಡೆಸಿ, ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!