ಬರಿಗೈಯಲ್ಲೇ ಶತ್ರು ಸೈನಿಕರಿಗೆ ಮಣ್ಣು ಮುಕ್ಕಿಸಿದ ʼಪರಮ ವೀರʼನ ಕತೆ

-ಗಣೇಶ ಭಟ್‌, ಗೋಪಿನಮರಿ

ಬಹುಷಃ ಅಂದು ಶತ್ರುಗಳನ್ನು ತಡೆಯಲು ಸಾಧ್ಯವಾಗಿರದಿದ್ದರೆ ಇಡೀ ಕಾಶ್ಮೀರ ಯುದ್ಧವೇ ಶತ್ರುವಿನ ಪರವಾಗಿ ಮಾರ್ಪಡುತ್ತಿತ್ತೇನೋ. ಕಾಶ್ಮೀರದ ತಿಥ್ವಾಲ್.. ಅದೊಂದು ಪ್ರದೇಶವನ್ನು ಆಕ್ರಮಿಸಿಕೊಳ್ಳಲು ಶತ್ರುಗಳು ಒಂದು ಇಡಿಯ ಬ್ರಿಗೇಡನ್ನೇ ಕಳಿಸಿದ್ದರು. (ಒಂದು ಬ್ರಿಗೇಡಿನಲ್ಲಿ ಕನಿಷ್ಟ 3,000 ದಿಂದ 5,000 ಸೈನಿಕರಿರುತ್ತಾರೆ) ತಿಂಗಳುಗಟ್ಟಲೇ ದಾಳಿ ನಡೆಸಿದರೂ ಕೊನೆಗೂ ಶತ್ರುವು ಸೋಲೊಪ್ಪಿ ಹಿಂದಿರುಗಬೇಕಾಯಿತು. ನೂರಾರು ಶತ್ರು ಸೈನಿಕರು ಬಾಂಬು ಗುಂಡುಗಳ ಮಳೆಗರೆದರೂ ತಾಯಿ ಭಾರತಿಯ ರಕ್ಷಣೆಯ ಪರಮೋದ್ದೇಶದೊಂದಿಗೆ ಜೀವವನ್ನೂ ಲೆಕ್ಕಿಸದೇ ತನ್ನ ಸಹಚರರಿಗೂ ಹುರಿದುಂಬಿಸುತ್ತ, ದೇಹ ಗಾಯಗೊಂಡಿದ್ದರೂ ಶತ್ರುವಿಗೆ ಮುಂದಡಿಯಿಡಲು ಬಿಡದೇ ಹೋರಾಡುತ್ತಲೇ ಈ ವೀರ ಹೋರಾಟ ಮಾಡಿದ ಪರಿಣಾಮ ಶತ್ರುವು ಹಿಮ್ಮೆಟ್ಟಿದ್ದ. ತಿಥ್ವಾಲ್‌ ಪ್ರದೇಶ ನಮ್ಮ ಬಳಿಯೇ ಭದ್ರವಾಗಿ ಉಳಿಯಿತು.

ಆತ ಹುಟ್ಟಿದ್ದು ಪಂಜಾಬಿನ ಸಂಗ್ರೂರ್ ಜಿಲ್ಲೆಯ ಭಲಿಯಾವಾಲಾ ಗ್ರಾಮದಲ್ಲಿ 1915 ಸೆಪ್ಟೆಂಬರ್‌ 15ರಂದು. ಸಾಮಾನ್ಯ ಕೃಷಿ ಕುಟುಂಬದಲ್ಲಿ ಜನಿಸಿದ್ದರೂ ಕನಸುಗಳು ಮಾತ್ರ ದೊಡ್ಡದಿತ್ತು. ಆತನ ದೊಡ್ಡಪ್ಪ ಸೇನೆಯಲ್ಲಿ ಜೂನಿಯರ್‌ ಕಮಿಷನ್ಡ್‌ ಆಫೀಸರ್‌ ಆಗಿದ್ದವರು. ಅವರನ್ನು ನೋಡುತ್ತಲೇ ಬೆಳೆದ ಈತನಿಗೆ ಜೀವನವನ್ನು ಸಾಹಸಮಯವನ್ನಾಗಿಸಿಕೊಳ್ಳಬೇಕೆಂಬ ಮಹದಾಸೆಯೊಂದು ಬಾಲ್ಯದಿಂದಲೇ ಮೊಳೆತಿತ್ತು. ಶಿಕ್ಷಣದ ನಂತರ ತನ್ನ 26ನೇ ವಯಸ್ಸಿನಲ್ಲಿ ಸೆಪ್ಟೆಂಬರ್‌ 15, 1941ರಂದು ಅಂದಿನ ಬ್ರಿಟೀಷ್ ಇಂಡಿಯನ್‌ ಆರ್ಮಿಗೆ ಸೇರಿಕೊಂಡ. ಎರಡನೇ ವಿಶ್ವ ಯುದ್ಧದ ಸಮಯವದು. ಭಾರತವನ್ನು ಮುಷ್ಟಿಯಲ್ಲಿಟ್ಟುಕೊಂಡಿದ್ದ ಇಂಗ್ಲೆಂಡ್‌ ಎರಡನೇ ವಿಶ್ವಯುದ್ಧದಲ್ಲಿ ಭಾಗವಾಗಿದ್ದ ಪ್ರಮುಖ ದೇಶವಾಗಿದ್ದರಿಂದ ಬ್ರಿಟೀಷ್‌ ಇಂಡಿಯನ್‌ ಆರ್ಮಿಯ ಸೈನಿಕರೂ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ರಾಂಚಿಯಲ್ಲಿ ತನ್ನ ಮಿಲಿಟರಿ ಶಿಕ್ಷಣ ಮುಗಿಸಿದ ಈತ ನಂತರ ಸಿಖ್‌ ರೆಜಿಮೆಂಡಿನ ಭಾಗವಾಗಿ ಎರಡನೇ ವಿಶ್ವ ಯುದ್ಧದಲ್ಲೂ ಭಾಗವಹಿಸಿದ. ಬರ್ಮಾಭಾಗವನ್ನು ಆಕ್ರಮಿಸಲು ಬಂದ ಜಪಾನ್‌ ಸೈನಿಕರನ್ನು ಸಮರ್ಥವಾಗಿ ಎದುರಿಸಿ ಆ ಸಂದರ್ಭದಲ್ಲಿ ವೀರಾವೇಶದಿಂದ ಈತ ಹೋರಾಡಿದ್ದ. ಆತನ ಶೌರ್ಯವನ್ನು ಮೆಚ್ಚಿ ಬ್ರಿಟೀಷರೇ ಆತನಿಗೆ 1944ರಲ್ಲಿ “ಮಿಲಿಟರಿ ಮೆಡಲ್”‌ ನೀಡಿ ಗೌರವಿಸಿದ್ದರು.

1947ರ ಹೊತ್ತಿಗೆ ಬ್ರಿಟೀಷರು ಭಾರತವನ್ನು ತೊರೆದಾಗ ಬ್ರಿಟೀಷ್‌ ಸೈನ್ಯದಲ್ಲಿದ್ದವರು ಭಾರತೀಯ ಸೇನೆಯ ಭಾಗವಾದರು. ಅಕ್ಟೋಬರ್‌ 1947ರಲ್ಲಿ ಪಾಕಿಸ್ತಾನವು ಕಾಶ್ಮೀರವನ್ನು ಕಬಳಿಸುವ ಉದ್ದೇಶದಿಂದ ದಾಳಿ ನಡೆಸಿದಾಗ ಭಾರತೀಯ ಸೇನೆ ಕಾಶ್ಮೀರದ ರಕ್ಷಣೆಗೆ ನಿಂತಿತು. ಶತ್ರುಗಳು ಕಾಶ್ಮೀರದ ಹಲವು ಪ್ರದೇಶಗಳ ಮೇಲೆ ದಾಳಿ ನಡೆಸಿದರು. ಅವುಗಳಲ್ಲಿ ತಿಥ್ವಾಲ್‌ ಪ್ರದೇಶವೂ ಒಂದು. ತೀಥ್ವಾಲ್‌ ಪ್ರದೇಶದ ಮೇಲೆ ಆಕ್ರಮಣ ಮಾಡಲು ಬಂದ ಶತ್ರುವನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿತು. ಆದರೆ ಶತ್ರುವು ದಾಳಿ ಮುಂದುವರೆಸಿದ್ದ. ತಿಥ್ವಾಲ್ ಅತ್ಯಂತ ಆಯಕಟ್ಟಿನ ಜಾಗವಾಗಿದ್ದರಿಂದ ಶತ್ರುವಿಗೆ ಯುದ್ಧತಂತ್ರದಲ್ಲಿ ಈ ಜಾಗ ಅತ್ಯಂತ ಅಗತ್ಯವಾಗಿ ಬೇಕಿತ್ತು. ಹಾಗಾಗಿ ತಿಥ್ವಾಲ್‌ ಪ್ರದೇಶವನ್ನು ಕಬಳಿಸೋ ಶತ್ರುವಿನ ಹೋರಾಟವು ತಿಂಗಳುಗಟ್ಟಲೇ ಮುಂದುವರಿಯಿತು.

ತಿಥ್ವಾಲ್‌ ಪ್ರದೇಶದ ಹಲವೆಡೆ ಭಾರತೀಯ ಸೇನೆಯಿಂದ ನಿರ್ಮಿಸಲ್ಪಟ್ಟ ಔಟ್‌ಪೋಸ್ಟ್‌ ಗಳಿದ್ದವು. ಅವುಗಳಲ್ಲಿ ರಿಚ್ಮಾರ್‌ ಗಲಿ ಕೂಡ ಒಂದು. ಇದು ತಿಥ್ವಾಲ್‌ ಸೆಕ್ಟರಿನಲ್ಲಿಯೇ ಅತ್ಯಂತ ಪ್ರಮುಖ ಜಾಗ. ಹೀಗಾಗಿ ಈ ಪ್ರದೇಶವನ್ನು ಆಕ್ರಮಿಸಿಕೊಂಡು ತಿಥ್ವಾಲ್‌ ವಶಮಾಡಿಕೊಳ್ಳುವ ಯೋಚನೆ ಶತ್ರುವಿನಲ್ಲಿತ್ತು. ಶತಾಯಗತಾಯ ರಿಚ್ಮಾರ್‌ ಗಲಿಯನ್ನು ಪಡೆಯಲೇ ಬೇಕೆಂದು ಪಾಕಿಸ್ತಾನಿ ಸೇನೆಯು ಯುದ್ಧ ಫಿರಂಗಿಗಳೊಂದಿಗೆ ತನ್ನ ಇಡೀ ಬ್ರಿಗೇಡನ್ನು ಕಳುಹಿಸಿತು.

ಅಕ್ಟೋಬರ್‌ 13, 1948ರಂದು ಶತ್ರು ಸೈನ್ಯದ ಬ್ರಿಗೇಡ್‌ ರಿಚ್ಮಾರ್‌ಗಲಿಯನ್ನು ಗುರಿಯಾಗಿಸಿಕೊಂಡು ದಾಳಿ ಆರಂಭಿಸಿತು. ಆ ಪ್ರದೇಶವನ್ನು ಭಾರತದ ಸಿಖ್‌ ರೆಜಿಮೆಂಟ್‌ ನ ಒಂದು ಕಂಪನಿ ನೋಡಿಕೊಳ್ಳುತ್ತಿತ್ತು. ಅದರ ಕಮಾಂಡರ್‌ ಆಗಿ ಈತನಿದ್ದ. ಶತ್ರುಗಳು ಶೆಲ್‌ ದಾಳಿ ನಡೆಸುತ್ತ, ಗುಂಡಿನ ಮಳೆಗರೆಯುತ್ತ ದಾಳಿ ನಡೆಸಿದರೆ. ರಿಚ್ಮಾರ್‌ ಗಲಿಯ ಔಟ್‌ಪೋಸ್ಟಿನಲ್ಲಿ ಕೂತಿದ್ದ ಈತ ಸಹಚರರೊಂದಿಗೆ ಸೆಣೆಸಾಟ ಆರಂಭಿಸಿದ. ಒಂದಲ್ಲ ಎರಡಲ್ಲ ಬರೋಬ್ಬರಿ 8 ಬಾರಿ ಶತ್ರುವಿನ ದಾಳಿ ನಡೆಯಿತು. ಆದರೆ ನಮ್ಮ ವೀರಯೋಧರು ಒಂದಿಂಚೂ ಹಿಂದೆ ಸರಿಯಲ್ಲಿಲ್ಲ. ದಾಳಿಯಲ್ಲಿ ಒಂದಿಷ್ಟು ಜನ ಭಾರತೀಯ ಸೈನಿಕರು ಹುತಾತ್ಮರಾದರು. ಆದರೆ ಈ ಜಾಗವನ್ನು ಯಾವುದೇ ಕಾರಣಜಕ್ಕಾಗಿಯೂ ಬಿಡಬಾರದೆಂದು ಈ ಧೀರ ಔಟ್‌ಪೋಸ್ಟುಗಳ ನಡುವೆ ಓಡುತ್ತ ಪ್ರತಿ ಸೈನಿಕನಿಗೂ ಧೈರ್ಯ ಹೇಳುತ್ತ ಶತ್ರುವಿನ ದಾಳಿಗೆ ಪ್ರತಿ ತಂತ್ರವನ್ನು ಹೆಣೆದು ಅವರು ಮುಂದುವರೆಯದಂತೆ ತಡೆಯತೊಡಗಿದ.

ಶತ್ರುವಿನ ಸಂಖ್ಯೆ ಅಗಾಧವಾಗಿತ್ತು. ಆದರೆ ಸಿಖ್ಖರ ಮನೋಬಲದ ಎದುರು ಸಾವಿರ ಶತ್ರುಗಳಿದ್ದರೂ ಸೋತು ಸುಣ್ಣವಾಗಿಬಿಡುತ್ತಾರೆ. ಅವರಿಗಿರುವ ಕ್ಷಾತ್ರಶಕ್ತಿಯೇ ಹಾಗಿರುತ್ತದೆ. ಶತ್ರು ಒಂದೇ ಸಮನೆ ಶೆಲ್ ಗಳ ಮೂಲಕ, ಗ್ರೆನೇಡುಗಳ ಮೂಲಕ, ಎಂಎಂಜಿ, ಮಿಷನ್‌ ಗನ್ನುಗಳ ಮೂಲಕ ದಾಳಿ ನಡೆಸುತ್ತಿದ್ದ. ಬಂಕರ್‌ ಬಿಟ್ಟರೆ ಶತ್ರುವಿನ ಗುಂಡು ಬೀಳೋದು ಪಕ್ಕಾ ಆಗಿತ್ತು. ಆದರೆ ಈತ ಧೃತಿಗೆಡಲಿಲ್ಲ. ಪ್ರತೀ ಪೋಸ್ಟಿಗೂ ಓಡಾಡುತ್ತ ಸೈನಿಕರಿಗೆ ಆತ್ಮ ವಿಶ್ವಾಸ ತುಂಬಿಸಿದ. ಆದರೆ ಶತ್ರುವಿನ ಗುಂಡುಗಳು ಈತನ ದೇಹವದ ಭಾಗಗಳನ್ನು ಘಾಸಿಗೊಳಿಸಿದ್ದರು. ಆತ ಅಲ್ಲಿಂದ ಓಡಿಹೋಗಿ ಜೀವ ಉಳಿಸಿಕೊಳ್ಳಬಹುದಿತ್ತು. ಆದರೆ ಭಾರತೀಯ ಸೈನಿಕರಿಗೆ ಬೆನ್ನು ತೋರಿಸಿ ಓಡಿ ಹೋಗೋ ರೂಢಿ ಎಂದಿಗೂ ಇಲ್ಲ. ದೇಹಕ್ಕಾದ ಗಾಯ ಲೆಕ್ಕಿಸದೇ ಶತ್ರುವಿನ ಮೇಲೆ ಪ್ರತಿದಾಳಿ ಮುಂದುವರಿಯಿತು. ಮುನ್ನುಗ್ಗಿ ಬಂದ ಶತ್ರು ಸೈನಿಕರಿಬ್ಬರನ್ನು ಬರಿಗೈಯ್ಯಲ್ಲೇ ಸೋಲಿಸಿದ. ಆತನ ದೇಹಕ್ಕೆ ಬರೋಬ್ಬರಿ 16 ಗುಂಡುಗಳು ಬಿದ್ದಿದ್ದವು. ಆತನ ಈ ವೀರಾವೇಶದ ಹೋರಾಟ ಉಳಿದಿದ್ದ ಕೆಲವೇ ಕೆಲವು ಸೈನಿಕರಿಗೆ ಸ್ಫೂರ್ತಿ ನೀಡಿತು. ಅವರೂ ಮತ್ತೂ ವೇಗದ ದಾಳಿ ನಡೆಸಿದರು. ಅಂದು ರಾತ್ರಿ ಸಮಯದಲ್ಲಿ ಶತ್ರು ಕೊನೆಯ ದಾಳಿ ನಡೆಸಿದ. ಸಿಖ್‌ ರೆಜಿಮೆಂಟಿನ 15ಜನ ಸೈನಿಕರು ಹುತಾತ್ಮರಾಗಿದ್ದರು. ಆದರೆ ಶತ್ರು ಸೈನ್ಯದ 300ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. ಸೋತು ಸುಣ್ಣವಾದ ಶತ್ರು ಹಿಮ್ಮೆಟ್ಟಿದ್ದ. ಆದರೆ ಒಂದೇ ಒಂದು ಬಂಕರ್‌ ಕೂಡ ಶತ್ರುವಿನ ಪಾಲಾಗಲಿಲ್ಲ. ಪರಿಣಾಮ ತಿಥ್ವಾಲ್‌ ಭಾರತದ ಬಳಿಯೇ ಉಳಿಯಿತು. ಮುಂದೆ ಇದು ಯುದ್ಧದ ದಿಕ್ಕನ್ನೇ ಬದಲಿಸಿ ಅಂತಿಮವಾಗಿ ಭಾರತೀಯ ಸೇನೆಯ ಗೆಲುವಿಗೆ ಕಾರಣವಾಯಿತು. ಹೀಗೆ ಅಪ್ರತಿಮ ಸಾಹಸ ತೋರಿದ ವೀರಯೋಧನ ಹೆಸರು ʼಕ್ಯಾಪ್ಟನ್‌ ಕರಮ್‌ ಸಿಂಗ್‌ʼ.

ಕರಮ್‌ ಸಿಂಗ್‌ ನ ಈ ಅದ್ಭುತ ಕಾರ್ಯವನ್ನು ನೆಚ್ಚಿ ಸುಬೇದಾರ್‌ ಆಗಿದ್ದ ಆತನಿಗೆ ಗೌರವಪೂರ್ವಕವಾಗಿ ಕ್ಯಾಪ್ಟನ್‌ ಪದವಿ ನೀಡಲಾಯಿತು. ಸೇನೆಯ ಅತ್ಯುನ್ನತ ಶೌರ್ಯ ಪ್ರಶಸ್ತಿ ʼಪರಮ ವೀರ ಚಕ್ರʼವನ್ನು ನೀಡಿ ಆತನಿಗೆ ಗೌರವಿಸಲಾಯಿತು. ಬ್ರಿಟೀಷ್‌ ಹಾಗು ಭಾರತೀಯ ಸೇನೆ ಎರಡರಿಂದಲೂ ಪ್ರಶಸ್ತಿ ಪಡೆದ ವೀರರಲ್ಲಿ ಕ್ಯಾ.ಕರಮ್‌ ಸಿಂಗ್‌ ಕೂಡ ಒಬ್ಬ. ಇತ್ತೀಚೆಗಷ್ಟೇ ಆತನ ಹೆಸರನ್ನು ಅಂಡಮಾನಿನ ದ್ವೀಪವೊಂದಕ್ಕಿಟ್ಟು ಆತ ಸದಾಕಾಲ ಜನರ ಮನಸ್ಸಿನಲ್ಲಿ ಹಸಿರಾಗಿರುವಂತೆ ಮಾಡಲಾಗಿದೆ. ಆ ಅಪ್ರತಿಮ ವೀರನಿಗಿದೋ ಶತ ಶತ ಪ್ರಣಾಮ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!