`ಕಲಾ ತಪಸ್ವಿ’ ಪದ್ಮಶ್ರೀ ಪುರಸ್ಕೃತ ಕೆ.ವಿಶ್ವನಾಥ್ ವಿಧಿವಶ: ಟಾಲಿವುಡ್‌ನಲ್ಲಿ ನೀರವ ಮೌನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಿರಿಯ ಹೆಸರಾಂತ ನಿರ್ದೇಶಕ, ಕಲಾತಪಸ್ವಿ ಕೆ.ವಿಶ್ವನಾಥ್ ಇಹಲೋಕ ತ್ಯಜಿಸಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಕೊನೆಯುಸಿರೆಳೆದಿದ್ದಾರೆ. ವಿಶ್ವನಾಥ್ ಅವರು 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿ ತೆಲುಗು ಜನರ ಮನಸಲ್ಲಿ ವಿಶೇಷವಾದ ಸ್ಥಾನವನ್ನು ಸಂಪಾದಿಸಿದ್ದಾರೆ.

ವಿಶ್ವನಾಥ್ ನಿಧನಕ್ಕೆ ಟಾಲಿವುಡ್ ಇಂಡಸ್ಟ್ರಿ ಕಂಬನಿ ಮಿಡಿದಿದೆ. ಸಿನಿರಂಗ ದಿಗ್ಗಜನನ್ನು ಕಳೆದುಕೊಂಡಿದೆ. ಕೆ.ವಿಶ್ವನಾಥ್ ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ತೆಲುಗು ಚಿತ್ರರಂಗಕ್ಕೆ ಸಾಧ್ಯವಾಗುತ್ತಿಲ್ಲ. ಸಪ್ತಪದಿ, ಸ್ವಾತಿಮುತ್ಯಂ, ಸಾಗರಸಂಗಮ, ಸ್ವರ್ಣಕಮಲ ಮುಂತಾದ ಅದ್ಭುತ ಸಿನಿಮಾಗಳನ್ನು ಕೊಟ್ಟ ಕೀರ್ತಿ ಇವರದ್ದು.

ಕೆ.ವಿಶ್ವನಾಥ್ ನಿಧನಕ್ಕೆ ಚಿತ್ರರಂಗವೇ ಕಂಬನಿ ಮಿಡಿದಿದೆ. ಅವರ ಸಾವಿನ ಸುದ್ದಿ ಕೇಳಿ ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಕೆ ವಿಶ್ವನಾಥ್ ಜತೆಗಿನ ಒಡನಾಟವನ್ನು ಹಲವು ಗಣ್ಯರು ಸ್ಮರಿಸಿದ್ದಾರೆ.

ಫೆಬ್ರವರಿ 19, 1930 ರಂದು ಗುಂಟೂರು ಜಿಲ್ಲೆಯ ರಾಯಪಲ್ಲಿಯಲ್ಲಿ ಕಾಶಿನಾಥುನಿ ವಿಶ್ವನಾಥ್ ಜನಿಸಿದರು. ಆಂಧ್ರ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಮುಗಿಸಿ ಆ ನಂತರ ವಾಹಿನಿ ಸ್ಟುಡಿಯೋದಲ್ಲಿ ಸೌಂಡ್ ಆರ್ಟಿಸ್ಟ್ ಆಗಿ ಸಿನಿಮಾ ವೃತ್ತಿ ಆರಂಭಿಸಿದರು. 1965ರಲ್ಲಿ ಆತ್ಮಗೌರವಂ ಚಿತ್ರದ ಮೂಲಕ ಇಂಡಸ್ಟ್ರಿಗೆ ಬಂದ ಕೆ.ವಿಶ್ವನಾಥ್ ಅನೇಕ ಅದ್ಭುತ ಕೆಲಸಗಳನ್ನು ಮಾಡಿದ್ದರು. ಸಿರಿಸಿರಿಮುವ್ವ, ಶಂಕರಾಭರಣಂ, ಸಪ್ತಪದಿ, ಸಾಗರಸಂಗಂ, ಸ್ವಾತಿಮುತ್ಯಂ, ಸಿರಿವೆನ್ನೆಲ, ಶ್ರುತಿಲಯಲು, ಸ್ವಯಂಕೃಷಿ, ಸ್ವರ್ಣಕಮಲಂ, ಸೂತ್ರಧಾರುಲು, ಸ್ವಾತಿಕಿರಣಂ, ಸ್ವರಾಭಿಷೇಕಂ, ಅತಡು, ಠಾಗೂರ್ ಮುಂತಾದ ಹಲವು ಶಾಸ್ತ್ರೀಯ ಚಿತ್ರಗಳನ್ನು ತೆಲುಗು ಪ್ರೇಕ್ಷಕರಿಗೆ ನೀಡಿದರು.

ನಿರ್ದೇಶಕರಾಗಿ ಮಾತ್ರವಲ್ಲದೆ ನಟರಾಗಿಯೂ ತಮ್ಮ ಪ್ರತಿಭೆಯನ್ನು ತೋರಿಸಿದರು. ಅಜ್ಜ ಮತ್ತು ತಂದೆಯ ಪಾತ್ರಗಳಲ್ಲಿ ಅವರು ಅದ್ಭುತವಾಗಿ ನಟಿಸಿದ್ದಾರೆ. ಶುಭಸಂಕಲ್ಪಂ ಚಿತ್ರದ ಮೂಲಕ ಮೊಟ್ಟಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಕೆ.ವಿಶ್ವನಾಥ್ ಕಾಣಿಸಿಕೊಂಡರು.

ಇವರ ಕಲೆಯನ್ನು ಗೌರವಿಸಿ 2016ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ. 1992 ರಲ್ಲಿ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಅದೆಷ್ಟೂ ಪ್ರಶಸ್ತಿಗಳನ್ನು ತಮ್ಮ ಬತ್ತಳಿಕೆಯಲ್ಲಿಟ್ಟಿದ್ದಾರೆ. ಕೆ.ವಿಶ್ವನಾಥ ಅವರ ನಿಧನ ತೆಲುಗು ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಅವರ ಶಾಸ್ತ್ರೀಯ ಚಿತ್ರಗಳು ಕಮರ್ಷಿಯಲ್ ಹಿಟ್ ಆಗಿ ಪ್ರೇಕ್ಷಕರ ಹೃದಯದಲ್ಲಿ ಶಾಶ್ವತವಾಗಿ ಉಳಿಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!