ಹೊಸದಿಗಂತ ವರದಿ,ಮಡಿಕೇರಿ:
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳದ್ದು ರಾಜ್ಯದಲ್ಲಿ ಮುಗಿದ ಕಥೆಯಾಗಿದ್ದು, ಇನ್ನೇನಿದ್ದರೂ ದೇಶಕ್ಕೇ ಮೋದಿಯದ್ದೇ ಗ್ಯಾರಂಟಿ ಎಂದು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯೇ ಬೇರೆ, ಲೋಕಸಭಾ ಚುನಾವಣೆಯೇ ಬೇರೆ. ಕೇಂದ್ರದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಜನ ಬಯಸಿದ್ದಾರೆ. ಇಡೀ ಪ್ರಪಂಚ ಮೋದಿ ನಾಯಕತ್ವವನ್ನು ಶ್ಲಾಘಿಸುತ್ತಿದೆ. ಹೀಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಸಂಶಯವಿಲ್ಲ.ಮೋದಿ ಪ್ರಧಾನಿಯಾಗಬೇಕೆಂದರೆ ಈ ಕ್ಷೇತ್ರದಲ್ಲಿಯೂ ಜನ ಬಿಜೆಪಿಗೇ ಮತ ಹಾಕಬೇಕು ಎಂದು ನುಡಿದರು.
ಜೆಡಿಎಸ್’ನ ಕೆಲವರು ಕಾಂಗ್ರೆಸ್ ಸೇರಿದ್ದಾರೆ. ಇದರಿಂದ ಬಿಜೆಪಿಗೆ ಯಾವುದೇ ಧಕ್ಕೆಯಿಲ್ಲ ಎಂದ ಅಪ್ಪಚ್ಚುರಂಜನ್, ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ ಟಿ.ಜಾನ್ ಅವರ ಪುತ್ರ ಪೌಲ್ ಜಾನ್ ಇದೀಗ ಬಿಜೆಪಿ ಸೇರಿದ್ದು, ಅದೇ ರೀತಿ ಅನೇಕರು ಬಿಜೆಪಿಗೆ ಸೇರುತ್ತಿದ್ದಾರೆ, ಸೇರಲಿದ್ದಾರೆ ಎಂದರು.
ಕೊಡಗು-ಮೈಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎದುರು ಬಿಜೆಪಿ ಗೆಲವು ಸುಲಭ. ಬಾಯಿಗೆ ಬಂದಂತೆ ಮಾತನಾಡುವ ಲಕ್ಷ್ಮಣ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸಿದ್ದು, ಇದರಿಂದ ಬಿಜೆಪಿ ಗೆಲುವು ಮತ್ತಷ್ಟು ಸುಲಭ ಸಾಧ್ಯವಾಗಲಿದೆ. ಕೊಡಗಿನಲ್ಲಿ ಮತ್ತು ಮೈಸೂರಿನಲ್ಲಿ ತಲಾ ಒಂದು ಲಕ್ಷದಂತೆ ಈ ಕ್ಷೇತ್ರದಲ್ಲಿ ಎರಡು ಲಕ್ಷ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಯದುವೀರ್ ಜಯ ಗಳಿಸುತ್ತಾರೆ ಎಂದು ಅಪ್ಪಚ್ಚುರಂಜನ್ ಭವಿಷ್ಯ ನುಡಿದರು.