Tuesday, March 28, 2023

Latest Posts

ಲಡಾಕಿನಲ್ಲಿ ಚೀನಿ ಸೈನಿಕರಿಗೆ ಮಣ್ಣುಮುಕ್ಕಿಸಿದ ʼಪರಮ ವೀರʼನ ಕಥೆ

-ಗಣೇಶ ಭಟ್‌, ಗೋಪಿನಮರಿ

ಕಾಶ್ಮೀರ, ಲಡಾಖ್ ನಂತಹ ಪ್ರದೇಶದಲ್ಲಿ ದೇಶದ ಗಡಿಯನ್ನು ಕಾಯುವುದು ಎಂದರೆ ಅದೇನು ಸಣ್ಣ ಮಾತಲ್ಲ. ದುರ್ಗಮವಾದ ಕಲ್ಲು ಬಂಡೆಗಳಿಂದ ಕಡಿದಾದ ಪರ್ವತಗಳು ಅಲ್ಲಿ ಸಾಗುವವರನ್ನು ಹೈರಾಣಾಗಿಸಿ‌ಬಿಡುತ್ತವೆ. ಎತ್ತರದ ಪ್ರದೇಶಗಳಾಗಿರುವುದರಿಂದ ಉಸಿರಾಟವೂ ಕಷ್ಟವಾಗುತ್ತದೆ. ಕೊರೆಯುವ ಚಳಿ ಬೇರೆ. ಮಂಜುಗಡ್ಡೆಯಿಂದ ಆವರಿಸಲ್ಪಟ್ಟ ಪ್ರದೇಶಗಳಲ್ಲಿ ಒಂದು ದಿನವೂ ಬಿಡದೇ ವರ್ಷಗಟ್ಟಲೇ ಕೆಲಸ ಮಾಡಬೇಕೆಂದರೆ ಅದುಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಯಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಆದರೆ ಅಂಥಹ ಸನ್ನಿವೇಶದಲ್ಲಿಯೂ ಹಗಲಿರುಳೆನ್ನದೇ ದೇಶದ ರಕ್ಷಣೆಯ ಪರಮೋದ್ದೇಶದೊಂದಿಗೆ ಯೋಧನೆನ್ನಿಸಿಕೊಂಡವನು ಸ್ವಂತವನ್ನು ತ್ಯಜಿಸಿ ದೇಶಕ್ಕಾಗಿ ಪ್ರಾಣಕೊಡಲೂ ಸಿದ್ಧವಾಗಿಬಿಡುತ್ತಾನಲ್ಲ.. ಅದು ಸಾಧಾರಣ ವ್ಯಕ್ತಿಗಳಿಂದ ಸಾಧ್ಯವಿಲ್ಲದ ಮಾತು. ಕೇವಲ ಅಪ್ರತಿಮ ಸಾಹಸ, ಗಟ್ಟಿ ಗುಂಡಿಗೆಯಿರುವವರು ಮಾತ್ರವೇ ಮಾಡಬಹುದಾದಂತಹ ಅಸಾಧಾರಣ ಕಾರ್ಯವಾದುದು. ಅಂತಹ ಅಪ್ರತಿಮ ವ್ಯಕ್ತಿತ್ವಗಳಲ್ಲಿ ಮರೆಯಬಾರದ ಹೆಸರುಗಳಲ್ಲೊಂದು ‘ಮೇಜರ್ ಶೈತಾನ್ ಸಿಂಗ್’. 1962ರಲ್ಲಿ ಚೀನೀ ಸೈನಿಕರು ಭಾರತದ ಮೇಲೆ ಆಕ್ರಮಣ ಮಾಡಿದಾಗ ಲಡಾಖಿನಲ್ಲಿ ಅವರಿಗೆ ಮಣ್ಣು ಮುಕ್ಕಿಸಿದ ‘ಪರಮ ವೀರ’ರಿವರು.

1924ರಲ್ಲಿ ರಾಜಸ್ಥಾನದ ಜೋಧ್ ಪುರದಲ್ಲಿ ಮಿಲಿಟರಿ ಕುಟುಂಬದಲ್ಲಿಯೇ ಜನಿಸಿದ ಶೈತಾನ್ ಸಿಂಗ್ ಅವರ ತಂದೆ ಹೇಮ್ ಸಿಂಗ್ ಕೂಡ ಸೇನೆಯಲ್ಲಿ ಕರ್ನಲ್ ಆಗಿದ್ದರು. ಹಾಗಾಗಿ ಬಾಲ್ಯದಿಂದಲೇ ಸೇನೆ ಸೇರುವ ಹುಚ್ಚು ಬೆಳೆದೆಬಿಟ್ಟಿತ್ತು. ಶಿಕ್ಷಣ ಪೂರೈಸಿದ ನಂತರ 1949ರಲ್ಲಿ ದೇಶ ಸ್ವಾತಂತ್ರ್ಯಗೊಂಡಾಗ ಕುಮಾಂವ್ ರೆಜಿಮೆಂಟಿನಲ್ಲಿ‌ ಅಧಿಕಾರಿಯಾಗಿ ನಿಯಕ್ತಿಗೊಳ್ಳುತ್ತಾರೆ.

1962, ರ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ಲಡಾಖ್ ನ ಚುಶುಲ್ ಪ್ರದೇಶದಲ್ಲಿ ಶೈತಾನ್ ಸಿಂಗ್ ನೇತೃತ್ವದ ಸೇನೆ ಈ‌ ಪ್ರದೇಶದ ಅತ್ಯಂತ ಆಯಕಟ್ಟಿನ‌ ಜಾಗವಾದ ರೇಜಿಂಗ್ ಲಾ ಪಾಸ್ ಅನ್ನು ಭದ್ರವಾಗಿ ಕಾಯುತ್ತಿತ್ತು. ಲಡಾಖಿನ ಅಕ್ಸಾಯ್ ಚಿನ್ ವಿಷಯದಲ್ಲಿ ಈ ಪ್ರದೇಶಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇತ್ತು. ಒಟ್ಟು 5 ಬೆಟಾಲಿಯನ್ ಗಳು ಈ ಸುತ್ತಲಿನ ಪ್ರದೇಶದ ರಕ್ಷಣೆಯಲ್ಲಿದ್ದವು. 5,000ಮೀಟರ್ ಎತ್ತರದ ಪ್ರದೇಶವಾದ ರೇಜಿಂಗ್ ಲಾ ಪಾಸ್ ನಲ್ಲಿ ಕೊರೆಯುವ ಚಳಿ ಒಂದೆಡೆಯಾದರೆ ಜೋರಾಗಿ ಬೀಸುವ ಗಾಳಿ, ಹಿಮದ ಹೊದಿಕೆಗಳು ಆ ಪ್ರದೇಶದ ರಕ್ಷಣೆಯನ್ನು ಅತ್ಯಂತ ದುಸ್ತರವಾಗಿಸಿದ್ದವು. ಜತೆಗೆ ಭಾರತೀಯ ನಾಯಕರ ದಿವ್ಯ ನಿರ್ಲಕ್ಷ್ಯದಿಂದಾಗಿ ಅಂಥ ಸನ್ನಿವೇಶಗಳನ್ನು ಎದುರಿಸಲು ನಮ್ಮ ಸೈನಿಕರಿಗೆ ಬಲ ತುಂಬಲು ಅಗತ್ಯವಿರೋ ಯಾವ ಸೌಕರ್ಯಗಳೂ ಇರಲಿಲ್ಲ. ಅಗತ್ಯ ಮದ್ದುಗುಂಡುಗಳು, ಚಳಿಯಿಂದ ರಕ್ಷಿಸಲು ಬೇಕಾದ ಬಟ್ಟೆಗಳು, ಶೂಗಳು ಯಾವ ಸೌಲಭ್ಯವೂ ಲಭ್ಯವಿರಲಿಲ್ಲ ಎಂದು ಈ ಚೀನಾ ಯುದ್ದದಲ್ಲಿ ಭಾಗವಹಿಸಿ ಶತ್ರುವಿಗೆ ಸೆರೆಸಿಕ್ಕು ವಾಪಸ್ಸಾದ ಬ್ರಿಗೇಡಿಯರ್ ಜಾನ್ ಪಿ ದಳವಿ ತಮ್ಮ ಹಿಮಾಲಯನ್ ಬ್ಲಂಡರ್‌ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಆದರೂ ನಮ್ಮ ವೀರ ಯೋಧರು ಆ ಕೊರತೆಗಳ ನಡುವೆಯೂ ತಾಯಿ ಭಾರತಿಯನ್ನು ರಕ್ಷಿಸಲೆಂದೇ ಇಂಥಹ ಕಠೋರತೆಗಳನ್ನೆಲ್ಲ ಎದುರಿಸಿ ರಕ್ಷಣೆಯಲ್ಲಿ‌ ತೊಡಗಿದ್ದರು. ವರ್ಷಗಳಿಂದ ತಯಾರಿ ನಡೆಸಿದ್ದ ಚೀನಿ ಸೈನಿಕರು ಏಕಾಏಕಿ ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಿದ್ದರು. ಶೈತಾನ್ ಸಿಂಗ್ ಚೀನೀಯರ ಸಂಖ್ಯಾಬಲವನ್ನು ನೋಡಿ ಹೆದರಲಿಲ್ಲ. ಬದಲಾಗಿ ತಮ್ಮ ಸೈನಿಕರಿಗೆ ಹುರಿದುಂಬಿಸಿದರು.

ಅವರಿದ್ದ ಪ್ರದೇಶದಲ್ಲಿ ಬಂದೂಕು ಚಲಾಯಿಸಲು ತುಸು ಅನಾನುಕೂಲವಿತ್ತು. ದೊಡ್ಡ‌ಬಂದೂಕಿನಿಂದ ದಾಳಿಯಿಡಲು ತಮ್ಮ ತಡೆಗೋಡೆಗಳನ್ನು ದಾಟಿಕೊಂಡು ಬಂದೇ ದಾಳಿಯಿಡಬೇಕಿತ್ತು.ಆದರೆ ಶೈತಾನ್ ಸಿಂಗ್ ಅದಕ್ಕೆಲ್ಲ ಅಂಜದೇ ಚೀನಿಯರನ್ನು ಹಿಮ್ಮೆಟ್ಟಿಸಲು ಮುಂದಾದರು. 350 ಸಂಖ್ಯೆಯಲ್ಲಿ‌ ಚೀನಿಯರು ಮುಂದೆ ಬರುತ್ತಿದ್ದರೆ ಶೈತಾನ್‌ ಸಿಂಗರ ದಾಳಿ‌ಹೇಗಿತ್ತು ಎಂದರೆ ಅರ್ಧಕ್ಕರ್ಧ ಚೀನಿ ಪಡೆಗಳು ನಾಶವಾಗಿದ್ದವು. ಕೊನೆಗೆ ಮತ್ತೆ 400 ಜನರ ಪಡೆಯನ್ನು ಚೀನಾ ಕಳುಹಿಸಿತು. ಅಪಾರ ಪ್ರಮಾಣದಲ್ಲಿ ಮದ್ದುಗುಂಡುಗಳು, ಗ್ರೆನೇಡುಗಳು, ಬಾಂಬುಗಳು‌, ಶೆಲ್ ದಾಳಿಗಳಾದವು. ಚೀನಿಯರ ಬಳಿ ಅತ್ಯಾಧುನಿಕ ಮಷೀನ್ ಗನ್, ದೊಡ್ಡ ಶೆಲ್ ದಾಳಿಯ ಶಸ್ತ್ರಾಸ್ತ್ರ ಇತ್ತು. ಆದ್ರೆ ಭಾರತೀಯ ಸೈನಿಕರ ಬಳಿ‌ 3 ಇಂಚಿನ ಫಿರಂಗಿ ಮಾತ್ರ ಇತ್ತು. ಅದರಲ್ಲೇ ಶೈತಾನ್ ಸಿಂಗ್ ದಾಳಿಯಿಟ್ಟು ಚೀನೀ‌ ಸೇನೆಯನ್ನು ಧೂಳೀಪಟ ಮಾಡಿದರು. ಈ ಸಂದರ್ಭದಲ್ಲಿ ಕುಮಾಂವ್ ಪಡೆಯ ಸೈನಿಕರು ಅಪಾರ ಸಾವು ನೋವು ಅನುಭವಿಸುವಂತಾಯಿತು. ಆದರೆ ಅದಕ್ಕಿಂತ ಎರಡುಪಟ್ಟು ಹೊಡೆತ ಚೀನಿ ಸೈನ್ಯಕ್ಕಾಗಿತ್ತು. ಮದ್ದುಗುಂಡುಗಳಿಂದ ಶೈತಾನ್ ಸಿಂಗರಿಗೂ ಗಾಯವಾಗಿತ್ತು. ಅಚರ ಇಬ್ಬರು ಸಹೋದ್ಯೋಗಿಗಳು ಅವರನ್ನು ರಕ್ಷಿಸಲು ಬೇರೆಡೆಗೆ ರವಾನಿಸುತ್ತಿದ್ದರು. ಆದರೆ ಅದನ್ನೇ ಗುರಿಯಾಗಿಸಿಕೊಂಡು ಚೀನಿ ಸೈನಿಕರಿ ಹೆವಿ ಮಿಶನ್ ಗನ್ ದಾಳಿ ಶುರುವಿಟ್ಟರು. ತನ್ನಿಂದಾಗಿ ತನ್ನ ಸಹೋದ್ಯೋಗಿಗಳು ಜೀವ ತೆರಬಾರದು ಎಂಬ ಉದ್ದೇಶದಿಂದ ಶೈತಾನ್ ಸಿಂಗ್ ತಮ್ಮನ್ನು ಅಲ್ಲೇ ಬಿಟ್ಟು ಹೋಗಿ ತಡೆಗೋಡೆಗಳ ಮಧ್ಯ ಅಡಗಿಕೊಳ್ಳುವಂತ ಅವರಿಗೆ ಆದೇಶ ನೀಡಿದರು. ಅವರನ್ನು ಪುಟ್ಟದಾದ ಒಂದು ಮಣ್ಣಿನ‌ ತಡೆಗೋಡೆಯ ಹಿಂದೆ ಮಲಗಿಸಿ ಅವರ ಸೈನಿಕರು ಹೋರಟಕ್ಕೆ ವಾಪಸ್ಸಾದರು. ದುರದೃಷ್ಟವಶಾತ್ ವೀರಾವೇಶದಿಂದ ಹೋರಾಡಿ ಶತ್ರುಗಳನ್ನು‌ ಧ್ವಂಸ ಗೊಳಿಸಿದ ಶೈತಾನ್ ಸಿಂಗ್ ಅಲ್ಲೇ ತಮ್ಮ‌ ಕೊನೆಯುಸಿರೆಳೆದರು.

ಕೊನೆಗೆ ಇದಾಗಿ 3 ತಿಂಗಳ ನಂತರ ಮಂಜುಗಡ್ಡೆಯಲ್ಲಿ ಹೂತಿ ಹೋಗಿದ್ದ ಶೈತಾನ್‌ಸಿಂಗರ ಪಾರ್ಥೀವ ಶರೀರ ದೊರಕಿತ್ತು. ಅವರ ಹುಟ್ಟೂರಿಗೆ ಅದನ್ನು ರವಾನಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಅವರು‌ ತೋರಿದ ಅಪ್ರತಿಮ ಸಾಹಸಕ್ಕೆ ಅವರಿಗೆ ಅತ್ಯುನ್ನತ ಗೌರವ ಪರಮವೀರ ಚಕ್ರವನ್ನು ನೀಡಿ ಗೌರವಿಸಲಾಯಿತು. ಇತ್ತೀಚೆಗಷ್ಟೇ ಅಂಡಮಾನಿನ ದ್ವೀಪವೊಂದಕ್ಕೆ ಅವರ ಹೆಸರಿಟ್ಟು ಅವರನ್ನು ಇತಿಹಾಸದಲ್ಲಿ ಅಮರರನ್ನಾಗಿಸಲಾಗಿದೆ. ದೇಶಕ್ಕಾಗಿ ಆತ್ಮಾಹುತಿ ನೀಡಿದ ಅವರ ತ್ಯಾಗಕ್ಕೊಂದು ಸಲಾಂ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!