ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಬಿಸಿಲ ಝಳ ಹೆಚ್ಚಾಗಿದ್ದು, ತಾಪಮಾನ ಏರಿಕೆಯಿಂದಾಗಿ ಜನ ಹೈರಾಣಾಗಿದ್ದಾರೆ. ಮನೆಗಳಲ್ಲಿ ಹಾಗೂ ಆಫೀಸ್‌ನಲ್ಲಿ ಕೂರುವವರು ಎಸಿ, ಫ್ಯಾನ್‌ಗಳಿಗೆ ಅಡಿಕ್ಟ್ ಆಗಿದ್ದರೆ, ಇತ್ತ ಬಿಸಿಲಿನಲ್ಲಿ ಕುಳಿತು ವ್ಯಾಪಾರ ಮಾಡುವವರು, ಕೂಲಿ ಕಾರ್ಮಿಕರು ಇನ್ನಿತರರ ಜೀವಕ್ಕೇ ಕಂಟಕ ಎದುರಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಪಮಾನವು ಈಗಾಗಲೇ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ತಾಪಮಾನ ಹೆಚ್ಚಳಾಗುತ್ತಿರುವ ಹಿನ್ನೆಲೆಯಲ್ಲಿ ಹೀಟ್ ಸ್ಟ್ರೋಕ್ ಬಗ್ಗೆ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.
ರಾಜ್ಯದಲ್ಲಿ ಈವರೆಗೂ ಹೀಟ್ ಸ್ಟ್ರೋಕ್ ಪ್ರಕರಣಗಳು ವರದಿಯಾಗಿಲ್ಲ. ತಾಪಮಾನ 40 ಡಿಗ್ರಿ ತಲುಪಿದ ಸಂದರ್ಭದಲ್ಲಿ ಪ್ರಕರಣಗಳು ವರದಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ರಾಜ್ಯದವಲ್ಲಿ ಕಳೆದ ವರ್ಷ 6000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು.
ಹೀಟ್‌ಸ್ಟ್ರೋಕ್ ತಪ್ಪಿಸುವುದು ಹೇಗೆ?
ಬಾಯಾರಿಕೆಯು ನಿರ್ಜಲೀಕರಣದ ಲಕ್ಷಣವಾಗಿದೆ. ಪ್ರಯಾಣ ಸಮಯದಲ್ಲೂ ಕುಡಿಯುವ ನೀರು ಜೊತೆಗೆ ಇರಬೇಕು. ಮೌಖಿಕ ಮನರ್ಜಲೀಕರಣ ದ್ರಾವಣ, ಮನೆಯಲ್ಲಿಯೇ ಸಿದ್ಧಪಡಿಸಿದ ನಿಂಬೆ ಹಣ್ಣಿನ ಜ್ಯೂಸ್, ಮಜ್ಜಿಗೆ, ಹಣ್ಣಿನ ಜ್ಯೂಸ್‌ಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಸೇವಿಸಬಹುದಾಗಿದೆ. ದೇಹ ಹೈಡ್ರೇಟ್ ಆಗಿದ್ದಷ್ಟೂ ಒಳ್ಳೆಯದು.
ಸೀಸನ್‌ನಲ್ಲಿ ಲಭ್ಯವಿರುವ, ಹೆಚ್ಚು ನೀರಿನಂಶ ಹೊಂದಿರುವ ಹಣ್ಣು, ತರಕಾರಿಗಳನ್ನು ಸೇವಿಸಿ. ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಅನಾನಸ್, ಸೌತೆಕಾಯಿ, ಲೆಟ್ಯೂಸ್, ಎಳನೀರು ಹೆಚ್ಚಾಗಿ ಸೇವಿಸಿ.
ಬಿಸಿಲಿಗೆ ಪಾಲಿಸ್ಟರ್ ಬಟ್ಟೆ ಬಳಕೆ ಬಂದ್ ಮಾಡಿ, ತೆಳುವಾದ ಕಾಟನ್ ಬಟ್ಟೆಗಳಿಗೆ ಮಣೆ ಹಾಕಿ.
ಬಿಸಿಲಿನಲ್ಲಿ ಹೊರ ಹೋಗುವ ಸಂದರ್ಭಗಳಲ್ಲಿ ಛತ್ರಿ, ಟೋಪಿ/ಹ್ಯಾಟ್, ಟವೆಲ್ ಅಥವಾ ಇನ್ನಾವುದೇ ಸಾಂಪ್ರದಾಯಿಕ ಪದ್ಧತಿಯನ್ನು ಅನುಸರಿಸಿ. ಬಿಸಿಲಿನಲ್ಲಿ ನಡೆಯುವ ಸಂದರ್ಭದಲ್ಲಿ ಪಾದರಕ್ಷೆ, ಶೂಗಳನ್ನು ಧರಿಸಿ.
ಹೊರಾಂಗಣ ಚಟುವಟಿಕೆಗಳನ್ನು ಆದಷ್ಟು ಬೆಳಿಗ್ಗೆ 11 ಗಂಟೆಯ ಮೊದಲು ಅಥವಾ ಸಂಜೆ 4 ಗಂಟೆಯ ನಂತರಕ್ಕೆ ನಿಗದಿಪಡಿಸಿ.
ಬಿಸಿಲಿಗೆ ನವಜಾತ ಶಿಶುಗಳು, ಮಕ್ಕಳು, ಗರ್ಭಿಣಿಯರು, ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು, ಮಾನಸಿಕ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರು, ಹೃದ್ರೋಗ, ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆ ಇರುವವರು ಹೆಚ್ಚು ಆಪಾಯ ಎದುರಿಸುವ ಸಾಧ್ಯತೆಗಳಿವೆ.
ಅಪಾಯದಿಂದ ದೂರ ಉಳಿಯಲು ಮಧ್ಯಾಹ್ನದ ಸಮಯದಲ್ಲಿ ಅಡುಗೆ ಮಾಡುವುದು ತಪ್ಪಿಸಿ. ಅಡುಗೆ ಸಿದ್ಧಪಡಿಸುವ ಪ್ರದೇಶದಲ್ಲಿ ಕಿಟಕಿ ಹಾಗೂ ಬಾಗಿಲುಗಳನ್ನು ತೆರೆದಿಡಿ.
ಮದ್ಯಪಾನ, ಚಹಾ, ಕಾಫಿ, ಕಾರ್ಬೊನೇಟೆಡ್ ಪಾನೀಯಗಳು ಅಥವಾ ಹೆಚ್ಚು ಸಕ್ಕರೆ ಅಂಶ ಹೊಂದಿದ ಪಾನೀಯಗಳಿಂದ ದೂರವಿರಬೇಕು. ಹೆಚ್ಚು ಪ್ರೋಟೀನ್ ಭರಿತವಾದ ಹಾಗೂ ಹಳೆಯದಾದ ಆಹಾರ ಪದಾರ್ಥಗಳನ್ನು ಸೇವಿಸದಿರಿ.
ಮಕ್ಕಳು ಮತ್ತು ಸಾಕು ಪ್ರಾಣಿಗಳನ್ನು ನಿಲುಗಡೆ ಮಾಡಿರುವ ವಾಹನಗಳ ಒಳಗೆ ಬಿಡಬಾರದು. ವಾಹನಗಳ ಒಳಾಂಗಣದಲ್ಲಿನ ಹೆಚ್ಚಿನ ತಾಪಮಾನವು ಅಪಾಯಕಾರಿ ಆಗಬಹುದು.
ಸಭೆ, ಸಮಾರಂಭಗಳಿದ್ದಲ್ಲಿ ಬಿಸಿಲಿನಿಂದ ರಕ್ಷಣೆಗೆ ಶಾಮಿಯಾನ, ಪೆಂಡಾಲ್ ವ್ಯವಸ್ಥೆ ಮಾಡಬೇಕು. ಉತ್ತಮ ಗಾಳಿಯ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಬೇಕು. ಸಭಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು.