ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈಲ್ವೇ ನಿಲ್ದಾಣ ಒಂದರಲ್ಲಿ ಯುವತಿಯ ಕೂದಲಿಗೆ ಕತ್ತರಿ ಹಾಕಿ, ಕೂದಲನ್ನು ಕದ್ದೊಯ್ಯಲಾಗಿದೆ. ವಿಲಕ್ಷಣ ಎನಿಸಿದರೂ ಹೌದು, ಸಾಮಾನ್ಯವಾಗಿ ಪರ್ಸ್, ಬ್ಯಾಗ್ ಅಥವಾ ಮೊಬೈಲ್‌ನ್ನು ಕದಿಯುತ್ತಿದ್ದ ಕಳ್ಳರು ಈಗ ಕೂದಲನ್ನು ಕದಿಯೋದಕ್ಕೆ ಆರಂಭಿಸಿದ್ದಾರಾ ಎನ್ನುವ ಪ್ರಶ್ನೆ ಎದುರಾಗಿದೆ.
ದಾದರ್ ನಿಲ್ದಾಣದಲ್ಲಿ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯ ಕೂದಲನ್ನು ಕತ್ತರಿಸಲಾಗಿದೆ. ಕತ್ತರಿಸಿ ಬ್ಯಾಗ್‌ನಲ್ಲಿ ಹಾಕಿಕೊಂಡು ವ್ಯಕ್ತಿ ಓಡಿ ಹೋಗಿದ್ದಾನೆ. ಆಕೆ ಕಳ್ಳನ ಹಿಂದೆ ಓಡಿ ಹೋಗಿ ಹಿಡಿಯಲು ಪ್ರಯತ್ನಿಸಿದರೂ ಕೂಡ ಸಾಧ್ಯವಾಗಲಿಲ್ಲ. ಜನರ ಮಧ್ಯೆ ನುಸುಳಿ ಪರಾರಿಯಾಗಿದ್ದಾನೆ.
ವಿದ್ಯಾರ್ಥಿನಿ ದೂರಿನ ಮೇರೆಗೆ ಮುಂಬೈ ಸೆಂಟ್ರಲ್ ಲೋಹ್ಮಾರ್ಗ್ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಮೂಲಕ ಆರೋಪಿಯ ಹುಡುಕಾಟ ಆರಂಭಿಸಿದ್ದಾರೆ.ಆಕೆ ಕಲ್ಯಾಣ್ ನಿವಾಸಿಯಾಗಿದ್ದು, ಬೆಳಗ್ಗೆ 8 ಗಂಟೆಗೆ ಕಾಲೇಜಿಗೆ ಹೊರಟವಳು ದಾದರ್ ನಿಲ್ದಾಣದಲ್ಲಿ ಇಳಿದಿದ್ದಳು. ದಾದರ್ ಬ್ರಿಡ್ಜ್ ಟಿಕೆಟ್ ಬುಕಿಂಗ್ ಬಳಿ ಬಂದಾಗ ಇದ್ದಕ್ಕಿದ್ದಂತೆ ಬೆನ್ನಿಗೆ ಚೂಪಾದ ವಸ್ತು ತಾಕಿದಂತಾಯಿತು. ಕೆಳಗೆ ನೋಡಿದಾಗ ಕೂದಲು ಬಿದ್ದಿತ್ತು.
ಓರ್ವ ವ್ಯಕ್ತಿ ಕೂದಲನ್ನು ಬ್ಯಾಗ್ಗೆ ತುಂಬಿಸಿಕೊಂಡು ಓಡಿ ಹೋಗುತ್ತಿರುವುದು ಕಂಡುಬಂದಿತ್ತು. ಆಕೆಯ ಅರ್ಧದಷ್ಟು ಕೂದಲನ್ನು ಕತ್ತರಿಸಲಾಗಿತ್ತು. ಆಕೆ ಹೆದರದೆ ಧೈರ್ಯವಾಗಿ ಆತನ ಹಿಂದೆ ಓಡಿ ಹಿಡಿಯಲು ಪ್ರಯತ್ನಿಸಿದಳು ಆದರೆ ಸಾಧ್ಯವಾಗಲಿಲ್ಲ.
ಮುಂಬೈ ಸೆಂಟ್ರಲ್ ಲೋಹ್ಮಾರ್ಗ್ ಪೊಲೀಸ್ ಠಾಣೆಗೆ ಬಂದು ಸಂಪೂರ್ಣ ಘಟನೆಯನ್ನು ವಿವರಿಸಿ ದೂರು ನೀಡಿದ್ದಾಳೆ. ದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರೈಲ್ವೆ ಆಡಳಿತ ಭದ್ರತೆ ಬಗ್ಗೆ ನಿಗಾ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.