ಡಿಪೋ ವ್ಯಸ್ಥಾಪಕಿ ಕಿರುಕುಳಕ್ಕೆ ನೊಂದು ಆತ್ಮಹತ್ಯೆಗೆ ಯತ್ನಿಸಿದ ಸಾರಿಗೆ ಸಿಬ್ಬಂದಿ

ಹೊಸದಿಗಂತ ವರದಿ, ಮಡಿಕೇರಿ:

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಯೊಬ್ಬರು ತಮ್ಮ ಹಿರಿಯ ಅಧಿಕಾರಿ ಹಾಗೂ ಸಹೋದ್ಯೋಗಿಗಳ ಸಮ್ಮುಖದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಕೆಎಸ್ ಆರ್ ಟಿಸಿ ಡಿಪೋದಲ್ಲಿ ನಡೆದಿದೆ.

ಡಿಪೋದಲ್ಲಿ ಕಿರಿಯ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ಅಭಿಷೇಕ್ ಎಂಬವರೇ ನಿಗಮದ ಪುತ್ತೂರು ವಿಭಾಗದ ಅಧಿಕಾರಿ ಜಯಕರ ಶೆಟ್ಟಿ ಅವರ ಎದುರಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದಾರೆ.

ಮೂಲತಃ ಕೊಡಗಿನ ಹೆಬ್ಬಾಲೆ ನಿವಾಸಿಯಾಗಿರುವ ಅಭಿಷೇಕ್ ಅವರು, ತನ್ನ ಈ ಕೃತ್ಯಕ್ಕೆ ಮಡಿಕೇರಿ ಡಿಪೋ ವ್ಯವಸ್ಥಾಪಕಿ ಗೀತಾ ಅವರು ನೀಡುತ್ತಿರುವ ಮಾನಸಿಕ ಕಿರುಕುಳ ಕಾರಣ ಎಂದು ಬರೆದಿಟ್ಟಿರುವ ಪತ್ರ ದೊರಕಿದ್ದು, ಇದೀಗ ಗೀತಾ ಅವರನ್ನು ಹಾಸನ ವಿಭಾಗದ ರಾಮನಾಥಪುರ ಘಟಕಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಆತ್ಮಹತ್ಯೆಗೆ ಯತ್ನಿಸಿರುವ ಅಭಿಷೇಕ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಚೇತರಿಸಿಕೊಳ್ಳುತ್ತಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಕಳೆದ 8 ವರ್ಷಗಳಿಂದ ಡಿಪೋ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿರುವ ಗೀತಾ ಅವರನ್ನು ಆ.8ರಂದು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ ರಾಜಕೀಯ ವಲಯದಲ್ಲಿ ಪ್ರಭಾವ ಹೊಂದಿರುವ ಗೀತಾ ತಮ್ಮ ಪ್ರಭಾವ ಬೀರಿ ಮತ್ತೆ ಇಲ್ಲೇ ಮುಂದುವರಿಯಲು ಯತ್ನಿಸಿದ್ದರೆನ್ನಲಾಗಿದೆ. ಅಲ್ಲದೆ ತನ್ನ ವರ್ಗಾವಣೆಗೆ ಅಭಿಷೇಕ್ ಕಾರಣ ಎಂದು ಭಾವಿಸಿದ್ದ ಗೀತಾ, ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ಅಭಿಷೇಕ್ ತಮ್ಮ ಪತ್ರದಲ್ಲೂ ವಿವರಿಸಿದ್ದು, ಇದೀಗ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲೂ ಪುನರುಚ್ಚರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!