ಕೊನೆಯ ಉಸಿರಿನವರೆಗೂ ಹೋರಾಡಿ ಕಾರ್ಗಿಲ್‌ ವಿಜಯಕ್ಕೆ ಕಾರಣನಾದ ʼಪರಮ ವೀರʼನೀತ..

-ಗಣೇಶ ಭಟ್‌, ಗೋಪಿನಮರಿ

ನೀವೆಂದಾದರೂ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಕತ್ತಲ ಕೋಣೆಯಲ್ಲಿ ಓಡಾಡಿದ್ದೀರಾ?……. ಏನೂ ತಮಾಷೆಯಾ? ಮೊದಲೇ ಕತ್ತಲು, ಇನ್ನು ಕಣ್ಣಿಗೆ ಪಟ್ಟಿಕೊಳ್ಳುವುದೆಲ್ಲಿಂದ? ಅಲ್ಲಯ್ಯಾ, ಕತ್ತಲಲ್ಲಿ ಕಣ್ಣು ಬಿಚ್ಚಿ ನಡೆವುದೇ ಅಸಾಧ್ಯ, ಇನ್ನು ಬಟ್ಟೆಕಟ್ಟಿಕೊಂಡು ನಡೆವುದಕ್ಕಾಗುತ್ತದಾ? ಎಂದೆಲ್ಲ ನೀವು ಪ್ರಶ್ನಿಸಬಹುದು. ಕೇಳುವುದಕ್ಕೆ ಇದೊಂಥರಾ ವಿಚಿತ್ರ, ವಿಪರೀತ ಎಂತಲೂ ಅನ್ನಿಸಬಹುದು. ಆದರೆ ನಿಮಗೆ ಗೊತ್ತಾ? 1999 ರ ಕಾರ್ಗಿಲ್‌ ಯುದ್ಧದ ಸಮಯದಲ್ಲಿ ನಮ್ಮ ಸೈನಿಕರ ಪಾಲಿಗೆ ಇದೇ ವಾಸ್ತವವಾಗಿತ್ತು. ಶತ್ರುವಿನ ಬಗ್ಗೆ ಸರಿಯಾದ ಮಾಹಿತಿಯಿಲ್ಲದೇ, ಗುಡ್ಡ ಏರಿ ಭದ್ರವಾಗಿ ಬಂಕರ್‌ ನಲ್ಲಿ ಕೂತಿರುವ ಶತ್ರುವನ್ನು ಹೊಡೆದುಹಾಕುವುದಿದೆಯಲ್ಲ… ಅದು ಅಸಾಧ್ಯದಲ್ಲಿ ಅಸಾಧ್ಯವಾದ ಕಾರ್ಯ. ಮೇಲ್ಗಡೆ ಭದ್ರವಾಗಿ ಕೂತಿರುವ ಶತ್ರುವಿಗೆ ನಮ್ಮೆಲ್ಲ ಚಲನವಲನಗಳೂ ನಿರಾಯಾಸವಾಗಿ ಕಾಣಿಸುತ್ತಿರುತ್ತದೆ. ಆದರೆ ನಮಗೆ ಆತ ಅಗೋಚರ ನಾಗಿರುತ್ತಾನೆ. 16ಸಾವಿರ ಅಡಿಗಳಿಗಿಂತಲೂ ಎತ್ತರದ ದುರ್ಗಮವಾದ ಬೆಟ್ಟಗಳವು, ಮೊಣಕಾಲು ಎದೆಗೆ ತಾಗುವಂತಹ ಕಡಿದಾದ ಬೆಟ್ಟಗಳನ್ನು ಹತ್ತಿ ಮೇಲಿರುವ ಶತ್ರುವನ್ನು ನಾಶಮಾಡಬೇಕು ಎಂಬುದಿದೆಯಲ್ಲ ಅದೊಂಥರಾ ʼಸೂಸೈಡಲ್‌ ಮಿಷನ್‌ʼ ಅರ್ಥಾತ್‌ ಆ ಕಾರ್ಯ ಕೈಗೆತ್ತಿಕೊಳ್ಳುವುದೆಂದರೆ ಆತ್ಮಹತ್ಯೆಯೊಂದಿಗೆ ಸರಸವಾಡಿದಂತೆ. ಆದರೆ ನಮ್ಮ ಸೈನಿಕರು ಇಂಥಹ ಕಾರ್ಯಗಳನ್ನೂ ಮಾಡಿತೋರಿಸಿಬಿಟ್ಟಿದ್ದಾರೆ.

ಆಗಲೇ ಮೂರ್ನಾಲ್ಕು ಬಾರಿ ಪೆಟ್ಟು ತಿಂದಿದ್ದರೂ ಪಾಕಿಸ್ತಾನಿಗಳಿಗೆ ಬುದ್ಧಿ ಬಂದಿರಲಿಲ್ಲ. ಹಾಗಾಗಿಯೇ 1999ರಲ್ಲಿ ಭಾರತವನ್ನು ವಶಪಡಿಸಿಕೊಳ್ಳುವ ಭ್ರಮೆ ಅವರನ್ನಾವರಿಸಿಕೊಂಡು ಮತ್ತೊಮ್ಮೆ ಯುದ್ಧಕ್ಕೆ ನಿಂತಿದ್ದರು. ಚಳಿಗಾಲದ ಪ್ರತಿಕೂಲ ವಾತಾವರಣದ ಕಾರಣ ಪರ್ವತ ಶಿಖರಗಳ ಬಂಕರುಗಳಿಂದ ಕೆಳಗಿಳಿದು ಬಂದಿದ್ದ ಭಾರತೀಯ ಸೈನಿಕರು ಮತ್ತೆ ವಾಪಸ್ಸಾಗು ವಷ್ಟರಲ್ಲಿ ಪಾಕಿಸ್ತಾನಿಗಳು ಬಂಕರನ್ನು ವಶಪಡಿಸಿ ಕೂತಿದ್ದರು. ಅವರನ್ನು ಹಿಮ್ಮೆಟ್ಟಿಸಲು ಆಪರೇಷನ್‌ ವಿಜಯ್‌ ಆರಂಭಿಸಿತ್ತು ಭಾರತೀಯ ಸೇನೆ. ಅದಾಗಲೇ ನಾಲ್ಕೈದು ಕಿಲೋಮೀಟರ್‌ ಗಳಷ್ಟು ಗಡಿ ದಾಟಿ ಒಳಗಡೆ ಬಂದಿದ್ದ ಪಾಕಿಸ್ತಾನಿಗಳನ್ನು ಪುನಃ ಅವರ ನೆಲಕ್ಕೆ ಅಟ್ಟಬೇಕಿತ್ತು. ಆದರೆ ನಮ್ಮ ಬಂಕರುಗಳಲ್ಲಿ ನಮ್ಮದೇ ಆಹಾರ ಸಾಮಗ್ರಿಗಳನ್ನು ತಿನ್ನುತ್ತ ದಾಳಿ ನಡೆಸುತ್ತಿದ್ದರು ಪಾಕಿಸ್ತಾನಿಗಳು. ಶತ್ರುವು ಅನೂಕಲ ಸ್ಥಿತಿಯಲ್ಲಿ ಕೂತಿದ್ದ ಬೆಟ್ಟ ಏರಿ ಅವನ್ನು ಹತ್ತಿಕ್ಕಬೇಕೆಂದರೆ ಅಷ್ಟೇ ತ್ಯಾಗವನ್ನೂ ಮಾಡಬೇಕಿತ್ತು. ಒಂದು ಅಂದಾಜಿನ ಪ್ರಕಾರ ಗೆಲುವಿನ ಅನುಪಾತ 10:1 ಅಂದರೆ ಒಬ್ಬ ಪಾಕಿಸ್ತಾನಿ ಸೈನಿಕನನ್ನು ಕೊಲ್ಲಲು ನಮ್ಮ ಹತ್ತು ಸೈನಿಕರು ಬೇಕಿತ್ತು. ಪರ್ವತದ ತುದಿಯಲ್ಲಿ ಶತ್ರುವು ಅಂತಹ ಅನುಕೂಲಕರ ವಾತಾವರಣದಲ್ಲಿ ಕೂತಿದ್ದ. ಜೊತೆಗೆ ಆತನ ಬಳಿ ಅಗತ್ಯವಿರುವ ಶಸ್ತ್ರಾಸ್ತ್ರಗಳ ಸರಬರಾಜು ಸಾಕಷ್ಟಿತ್ತಿ ಹೆಚ್ಚಿಬ ಸಂಖ್ಯೆಯ ಬೆಂಬಲ ಪಡೆಗಳೂ ಇದ್ದವು. ಭಾರತೀಯ ಪಡೆಗಳನ್ನು ಸುಲಭವಾಗಿ ಮಟ್ಟಹಾಕಬಹುದು ಎಂಬ ಅತಿ ಆತ್ಮವಿಶ್ವಾಸ ಆತನಲ್ಲಿ ತುಂಬಿತ್ತು. ಆದರೆ ನಮ್ಮ ಸೈನಿಕರ ಛಾತಿ ಎಂಥದ್ದೆಂದರೆ ಪ್ರಾಣಕೊಟ್ಟಾದರೂ ಸರಿಯೇ ನಮ್ಮ ಮನೆಯೊಳಗಡೆ ಅಕ್ರಮವಾಗಿ ಬಂದು ಕೂತವನನ್ನು ಹೊರಗಟ್ಟಿಯೇ ಸಿದ್ಧ ಎಂಬುದೊಂದೇ ಧ್ಯೇಯವಾಗಿತ್ತು. ಶತ್ರುಗಳನ್ನು ಹಿಮ್ಮೆಟ್ಟಿಸಲು ಸಿದ್ಧವಾಗಿಬಿಟ್ಟಿದ್ದರು.

ದ್ರಾಸ್ ಸೆಕ್ಟರಿನ 5140 ಎಂಬ ಶಿಖರವನ್ನು ವಶಪಡಿಸಿಕೊಳ್ಳಲು ರಾಜ್ ಪುತಾನ ರೈಫ಼ಲ್ಸ್ ನ ತಂಡವೊಂದನ್ನು ಕಳುಹಿಸಲಾಗಿತ್ತು. ಆ ತಂಡದ ‌ನೇತೃತ್ವ ವಹಿಸಿದ್ದವರೇ ಧೀರ ‘ಕ್ಯಾಪ್ಟನ್. ವಿಕ್ರಮ್ ಬಾತ್ರಾ’.

ಹುಟ್ಟಿದ್ದು 9 ನೇ ಸೆಪ್ಟೆಂಬರ್ 1974 ರಂದು ಹಿಮಾಚಲ ಪ್ರದೇಶದ ಪಾಲಂಪುರ್ ಜಿಲ್ಲೆಯ ಬಾಂಡ್ಲಾ ಗಾಂವ್‌ನ‌ ಗಿರ್ಧಾರಿ ಲಾಲ್ ಬಾತ್ರಾ ಮತ್ತು ಶ್ರೀಮತಿ ಕಮಲ್ ಕಾಂತ ಅವರ ಪುತ್ರನಾಗಿ. ಪ್ರಾಥಮಿಕ ಶಿಕ್ಷಣದ ನಂತರ ಕಾಲೇಜು ದಿನಗಳಲ್ಲಿ ಹಣ ಕೊಡುತ್ತಿದ್ದ ‘ಮರ್ಚಂಟ್ ನೇವಿ’ ಯನ್ನು ಸೇರುವ ಅವಕಾಶ ಒದಗಿತ್ತು. ಆದರೆ ಬಾತ್ರಾ ಎನ್ ಡಿ ಎ ಯನ್ನು ಆಯ್ದುಕೊಂಡಿದ್ದರು. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಇಂಡಿಯನ್ ಮಿಲಿಟರಿ ಅಕಾಡೆಮಿತಲ್ಲಿ ತರಬೇತಿ ಪಡೆದರು. ತರಬೇತಿಯ ನಂತರ 13ನೇ ಜೆ&ಕೆ ರೈಫಲ್ಸ್ ಗೆ ಅವರನ್ನು ನಿಯುಕ್ತಿಗೊಳಿಸಲಾಗಿತ್ತು.

ನಂತರದಲ್ಲಿ ಕಾರ್ಗಿಲ್ ಕದನ ಆರಂಭವಾಗುತ್ತಿದ್ದಂತೆಯೇ ಬಾತ್ರಾ ಅವರ ತಂಡವೂ ಯುದ್ಧದಲ್ಲಿ ಭಾಗವಹಿಸಿತ್ತು. ದ್ರಾಸ್ ಸೆಕ್ಟರಿನ ತೋಲೋಲಿಂಗ್ ಶಿಖರ ವಶಪಡಿಸಿಕೊಳ್ಳುವಲ್ಲಿ ನಮ್ಮ ಸೈನಿಕರು ಅಪ್ರತಿಶ ಸಾಹಸ ತೋರಿದ್ದರು.ಇದೇ ಪ್ರದೇಶದ ಟೈಗರ್ ಹಿಲ್ಸ್ ಅನ್ನು ಮರುಪಡೆಯುವ ಹೋರಾಟವನ್ನಂತೂ ಕಾರ್ಗಿಲ್‌ ಯುದ್ಧದ ಅತಿ ಭೀಕರ ಹೋರಾಟ ಎಂದೇ ಬಣ್ಣಿಸಲಾಗುತ್ತದೆ.

5140 ಶಿಖರವನ್ನು ಮರುಪಡೆಯಲು ತೆರಳಿದ್ದ ಬಾತ್ರಾ ನೇತೃತ್ವದ ಪಡೆ ಪಾಕಿಸ್ತಾನಿ ಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿತ್ತು. ಈ ಸಂದೇಶವನ್ನು ತನ್ನ ಬೇಸ್ ಗೆ ಬಾತ್ರ ಮುಟ್ಟಿಸಿದ್ದು ಒಂದು ಕೋಡ್ ವರ್ಡ್ ಮೂಲಕ. ಆ ಕೋಡ ವರ್ಡ್ ಏನಿತ್ತು‌ ಗೊತ್ತೆ ? “ಯೇ ದಿಲ್ ಮಾಂಗೇ ಮೋರ್…”. ಅವರ ಪರಾಕ್ರಮದ ಬಗ್ಗೆ ತಿಳಿದಿದ್ದರಿಂದ ಅವರಿಗೆ ಕೋಡ್ ವರ್ಡನಲ್ಲಿ ‘ಶೇರ್ ಷಾ’ ಅಂತಲೇ ಕರೆಯಲಾಗುತ್ತಿತ್ತು.

ಹೀಗೆ ಶೌರ್ಯ ಮೆರೆದ ಬಾತ್ರಾರ ತಂಡಕ್ಕೆ ಮತ್ತೆ ಇನ್ನೊಂದು ಜವಾಬ್ದಾರಿ ವಹಿಸಲಾಗುತ್ತದೆ. ಅದೇನೆಂದರೆ ಬರೋಬ್ಬರಿ 16 ಸಾವಿರ ಅಡಿ ಎತ್ತರದಲ್ಲಿದ್ದ 4875 ಪಾಯಿಂಟ್ ಅನ್ನು ವಶಪಡಿಸಿಕೊಳ್ಳುವುದು. ಇದಕ್ಕಾಗಿ ಕ್ಯಾ.ವಿಕ್ರಮ್ ಬಾತ್ರಾ, ಲೆ.ಅನೂಜ್ ನಯ್ಯರ್, ಲೆ.ನವೀನ್ ಅವರನ್ನು ಒಳಗೊಂಡ ತಂಡ ಈ ವಿಕ್ರಮಕ್ಕೆಂದು ಹೊರಡುತ್ತದೆ. ಮೊದಲೇ ಹೇಳಿದಂತೆ ಎತ್ತರದ ಆಯಕಟ್ಟಿನ ಜಾಗದಲ್ಲಿ ಪಾಕಿಸ್ತಾನಿಗಳು ಭದ್ರವಾಗಿ ಕೂತಿದ್ದರು. ನಮ್ಮ ಸೈನಿಕರು ಅವರ ಗುಂಡಿನ ದಾಳಿಗಳಿಗೆ ಎದೆಕೊಡುತ್ತ ಕೆಳಗಿನಿಂದ ಸಾಗಬೇಕಿತ್ತು. ಗೆಲುವಿನ ಸಾಧ್ಯತೇ ತೀರಾ ಕಡಿಮೆ‌ ಅನ್ನಿಸುವಂತಿತ್ತು.‌ ಆದರೂ ನಮ್ಮ‌‌ ಸೈನಿಕರು ಛಲ‌ಬಿಡದೇ ಹೋರಾಟಕ್ಕೆ‌ ಅಣಿಯಾದರು.

ಶಿಖರದಿಂದ ಪಾಕಿಸ್ತಾನಿಗಳು ನಿರಂತರ ಮೆಷಿನ್ ಗನ್ ದಾಳಿ ನಡೆಸುತ್ತಲೇ ಇದ್ದರು. ಇದರ ನಡುವೆಯೇ ಶಿಖರದ ಒಂದೊಂದೇ ಹಂತವನ್ನು ಏರುತ್ತ ಮುನ್ನಡೆಯುತ್ತಿದ್ದ ಬಾತ್ರಾ ತಂಡದಲ್ಲಿದ್ದ ಲೆಫ್ಱಿನೆಂಟ್ ನವೀ‌ನ್ ಕಾಲಿಗೆ ಶತ್ರುವಿನ‌‌ ಗುಂಡು ತಗುಲಿತ್ತು. ಶತ್ರು ಸೈನಿಕರು ಆತನನ್ನೇ ಗುರಿಯಾಗಿಸಿಕೊಂಡು ದಾಳಿಯಿಡ ತೊಡಗಿದ್ದರು. ಕೂಡಲೇ ತನ್ನ ಸಹ ಸೈನಿಕನ‌ ಸಹಾಯಕ್ಕೆ ಬಾತ್ರಾ ಧಾವುಸಿಯೇ ಬಿಟ್ಟರು. ಸರಿಯಾದ ಕವರ್ ಸಹ ಇರಲಿಲ್ಲ. ಆದರೂ ಮುನ್ನುಗ್ಗಿದ ಬಾತ್ರ ನವೀನ್ ಅವರನ್ನು‌ ರಕ್ಷಿಸುತ್ತಿರುವಾಗಲೇ ಶತ್ರುಗಳು ಬಾತ್ರಾ ಅವರ ಮೇಲೆ ದಾಳಿ ಮಾಡಲು ಶುರುವಿಟ್ಟಿದ್ದರು.

ಗುಂಡಿನ ಮಳೆಗಳಿಂದ ತಪ್ಪಿಸಿಕೊಳ್ಳುವುದು ಒಂದುಕಡೆಯಾದರೆ, ಸಹ ಸೈನಿಕನನ್ನು ರಕ್ಷಿಸುವುದು ಇನ್ನೊಂದೆಡೆ. ಜೊತೆಗೆ ಶಿಖರವನ್ನು ಗೆಲ್ಲುವ ಜವಾಬ್ದಾರಿ..‌.‌ ವೀರನೊಬ್ಬನಿಗೆ ಇಂದೊಂದು ರೀತಿಯಲ್ಲಿ‌ ಪರೀಕ್ಷೆಯೇ ಸರಿ. ಆದರೆ ಬಾತ್ರಾ ಎಂತಹ ಅಪ್ರತಿಮ‌ವೀರರಾಗಿದ್ದರು ಎಂದರೆ ಎಲ್ಲವನ್ನೂ‌‌ ಯಶಸ್ವಿಯಾಗಿಯೇ ನಿಭಾಯಿಸಿದ್ದರು. ಶತ್ರು ಸೈನಿಕರ್ ದಾಳಿಗೆ ಪ್ರತಿಯಾಗಿ ದಾಳಿ ನಡೆಸುತ್ತ‌ ತಮ್ಮ‌ ಸಹ ಸೈನಿಕರನ್ನು ಹುರಿದುಂಬಿಸುತ್ತ‌ ವೀರಾವೇಶದಿಂದ ಹೋರಾಡಿದರು.‌ ಅಂತಿಮವಾಗಿ ನವೀನ್ ಅವರನ್ನು ರಕ್ಷಿಸುವಲ್ಲಿ ಬಾತ್ರಾ ಸಫಲರಾಗಿದ್ದರು. ಹೋರಾಟ ಮುಂದುವರೆಸಿದ್ದರು.

ತಕ್ಷಣವೇ ವಿಕ್ರಮ್ ಬಾತ್ರಾ ಅವರನ್ನು ಗುರಿಯಾಗಿಸಿ ಶತ್ರು ಸೈನಿಕರು ಅವರ ಮೇಲೆ ಗುಂಡಿನ ಮಳೆಗೈಯುತ್ತಾರೆ. ಒಂದೆಡೆ ಗಾಯಗೊಂಡು ಬಿದ್ದಿರುವ ತನ್ನ ಸಹಚರನ ಪ್ರಾಣವನ್ನು ಕಾಪಾಡುವ ಹೊಣೆಗಾರಿಕೆ ಇನ್ನೊಂದೆಡೆ ತನ್ನ ಪಡೆಗೆ ವಹಿಸಿರುವ ಈ ಶಿಖರವನ್ನು ಮರುವಶಪಡಿಸಿಕೊಳ್ಳಬೇಕಾದ ಜವಾಬ್ದಾರಿ…ಬಾತ್ರಾ ಎಲ್ಲವನ್ನೂ ನಿಭಾಯಿಸಿದರು. ಆದರೆ ದುರದೃಷ್ಟವಶಾತ್‌ ಶತ್ರುವಿನ ಆರ್‌ಪಿಜಿಯಿಂದ ಚಿಮ್ಮಿದ ಗುಂಡೊಂದು ಬಾತ್ರಾ ಅವರಿದ್ದ ಜಾಗದಲ್ಲಿಯೇ ಸ್ಫೋಟಗೊಂಡಿತು. ಬಾತ್ರಾ ಅಲ್ಲಿಯೇ ಹುತಾತ್ಮರಾದರು.. ಕೊನೆಯ ಘಳಿಗೆಯಲ್ಲಿಯೂ ಅವರ ಕೈಲಿದ್ದ ಎಕೆ-47ನಿಂದ ಗುಂಡು ಚಿಮ್ಮಿತ್ತು… ʼದುರ್ಗಾ ಮಾತಾ ಕೀ ಜೈʼ ಎಂಬ ತಮ್ಮ ರೆಜಿಮೆಂಟಿನ ಘೋಷವಾಕ್ಯ ಕೂಗುತ್ತಲೇ ಬಾತ್ರಾ ಕೊನೆಯುಸಿರೆಳೆದರು. ಅವರ ಮರಣದಿಂದ ಸ್ಫೂರ್ತಿ ಪಡೆದ ಸೈನಿಕರ ವೀರಾವೇಶದ ಹೋರಾಟದಿಂದ 4875 ಶಿಖರ ನಮ್ಮದಾಗಿತ್ತು.. ʼಗಡಾ ಅಲಾ, ಪಣ್‌ ಸಿಂಹ ಗೆಲಾʼ ಎನ್ನುವಂತಾಗಿತ್ತು ಪರಿಸ್ಥಿತಿ.

ಅವರು ತೋರಿದ ಈ ಅಪ್ರತಿಮ ತ್ಯಾಗಕ್ಕೆ ಅವರಿಗೆ ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿ ʼಪರಮ ವೀರ ಚಕ್ರʼವನ್ನು ನೀಡಿ ಗೌರವಿಸಲಾಗಿದೆ. ಇತ್ತೀಚೆಗೆ ಅಂಡಮಾನಿನ ದ್ವೀಪವೊಂದಕ್ಕೆ ಅವರ ಹೆಸರನ್ನಿಟ್ಟು ಗೌರವಿಸಲಾಗಿದೆ. ದೇಶದ ರಕ್ಷಣೆಯ ಯಜ್ಞದಲ್ಲಿ ಆತ್ಮಾಹುತಿಗೈದ ವಿಕ್ರಮ್‌ ಬಾತ್ರಾ ಸ್ಫೂರ್ತಿಯ ಚಿಲುಮೆಯಾಗಿ ಅಜರಾಮರರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!