Monday, March 27, 2023

Latest Posts

ಏಕಾಂಗಿಯಾಗಿ ಶತ್ರುವಿನ ಎದೆಸೀಳಿದ ಧೀರನೀತ…

– ಗಣೇಶ ಭಟ್‌, ಗೋಪಿನಮರಿ

ಅದೊಂದು ಭೀಕರ ಸನ್ನಿವೇಶ, ಎದುರಿನಿಂದ ಶತ್ರು ಒಂದೇ ಸಮನೆ ಗುಂಡಿನ ಮಳೆಗರೆಯುತ್ತ ಮುನ್ನುಗ್ಗಿ ಬರುತ್ತಿದ್ದಾನೆ. ಸುತ್ತಲೂ ಶತ್ರುವಿನ ಗ್ರೆನೇಡುಗಳು ಸ್ಫೋಟಗೊಳ್ಳುತ್ತಿವೆ. ಅಲ್ಲಿ ಎದ್ದ ಧೂಳಿನಿಂದ ಸುತ್ತಲಿನ ವಾತಾವರಣವೂ ಕಲ್ಮಶವಾಗಿ ಎತ್ತರೆತ್ತರಕ್ಕೆ ಹೊಗೆಯೇಳುತ್ತಿವೆ. ಎದರುರಿಗಿದ್ದ ಕಾವಲು ಪೋಸ್ಟ್‌ ಅನ್ನು ವಶಪಡಿಸಿಕೊಳ್ಳಲು ಶತ್ರು ಮುಂದಡಿಯಿಡುತ್ತಿದ್ದಾನೆ. ಇದು ಆತನ ಮೂರನೇ ದಾಳಿ.. ಮೊದಲೆರೆಡ ದಾಳಿಯನ್ನು ಹೇಗೋ ಹಿಂದಟ್ಟಿಯಾಗಿತ್ತು.. ಆದರೆ ಈ ಬಾರಿ ಶತ್ರು ಮತ್ತೂ ಬಲವಾಗಿ ದಾಳಿ ನಡೆಸಿದ್ದ.. ಆದರೆ ಶತ್ರುವಿನ ಈ ದಾಳಿಗೆ ಎದೆಯೊಡ್ಡಿ ಏಕಾಂಗಿಯಾಗಿ ನಿಂತಿದ್ದ ಈ ವೀರ. ಅದಾವ ಶಕ್ತಿ ಅವನಲ್ಲಿತ್ತೋ ಗೊತ್ತಿಲ್ಲ.. ಆತನ ಸಹಚರರೆಲ್ಲರ ಹೆಣಗಳು ಅಲ್ಲೇ ಅಕ್ಕ ಪಕ್ಕದಲ್ಲಿ ಬಿದ್ದಿವೆ. ಆದರೆ ಅದನ್ನೆಲ್ಲ ನೋಡಿ ಧೃತಿಗೆಡದೇ ಬಂದೂಕು ಹಿಡಿದು ಹೀಗೆ ವೀರಾವೇಶದಿಂದ ಹೋರಾಡಿದ ವೀರನ ಹೆಸರೇ ಲ್ಯಾನ್ಸ್‌ ನಾಯಕ್‌ ಜದುನಾಥ್‌ ಸಿಂಗ್.

1916, ನವೆಂಬರ್‌ 21ರಂದು ಉತ್ತರ ಪ್ರದೇಶದ ಷಹಜಹಾನ್‌ಪುರ ಜಿಲ್ಲೆಯ ಖಜುರಿ ಗ್ರಾಮದಲ್ಲಿ ರೈತ ಕುಟುಂಬವೊಂದರಲ್ಲಿ ಜನಿಸಿದ ಜಾದುನಾಥ್‌ ಸಿಂಗ್‌ ಮುಂದೊಂದು ದಿನ ದೇಶಕ್ಕಾಗಿ ತನ್ನ ಪ್ರಾಣಾರ್ಪಣೆ ಮಾಡುತ್ತಾನೆ ಎಂದು ಆಗಿನ್ನೂ ಯಾರೂ ಊಹಿಸಿಯೂ ಇರಲಿಲ್ಲ. ಕುಟುಂಬ ಸ್ವಲ್ಪ ದೊಡ್ಡದಿತ್ತು, ಬಡತನವೂ ಇತ್ತು. ದೊಡ್ಡ ದೊಡ್ಡ ಶಾಲೆಗಳಿಗೆ ಹೋಗಿ ವ್ಯಾಸಂಗ ಮಾಡುವುದು ಸಾಧ್ಯವಿರಲಿಲ್ಲ. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಹೊಲ ಗದ್ದೆಗಳಲ್ಲಿ ಕೆಲಸ ಮಾಡುತ್ತ ಕುಟುಂಬದವರಿಗೆ ಸಹಾಯ ಮಾಡುತ್ತ 4ನೇ ತರಗತಿಯ ವ್ಯಾಸಂಗವನ್ನು ಪೂರ್ಣಗೊಳಿಸಿದ್ದ. ಜಾದುನಾಥ್‌ ತುಸು ದೊಡ್ಡವನಾದ ಮೇಲೆ ಕುಸ್ತಿಯಲ್ಲಿ ಬಲಶಾಲಿಯೂ ಆಗಿದ್ದರಿಂದ ಆತನಿಗೆ ಕುಸ್ತಿ ಚಾಂಪಿಯನ್ ಎಂದು ಕರೆಯುತ್ತಿದ್ದರು.

1941ರ ನವೆಂಬರ್‌ 21ರಂದು (ಆತನ ಜನ್ಮದಿನವೂ ಇದೇ ತಾರೀಕಿನಂದು) ಭಾರತೀಯ ಸೇನೆಯ ಹೆಮ್ಮೆಯ ರೆಜಿಮೆಂಟುಗಳಲ್ಲೊಂದಾದ ರಜಪೂತ್‌ ರೆಜಿಮೆಂಟಿಗೆ ಆಯ್ಕೆಯಾದ ಜಾದೂನಾಥ್‌ ಸಿಂಗ್‌ ತರಬೇತಿಯ ನಂತರ 1 ರಜಪೂತ್‌ ಬೆಟಾಲಿಯನ್‌ ಭಾಗವಾಗಿ ಎರಡನೇ ವಿಶ್ವ ಯುದ್ಧದಲ್ಲಿ ಭಾಗವಹಿಸಿ ತನ್ನ ಸಾಮರ್ಥ್ಯ ಸಾಬೀತು ಪಡಿಸಿದ್ದ. ಆರು ವರ್ಷಗಳ ನಿರಂತರ ಸೇವೆಯ ನಂತರ ಆತನಿಗೆ 1947 ರ ಜುಲೈ ತಿಂಗಳಿನಲ್ಲಿ ಲ್ಯಾನ್ಸ್ ನಾಯಕ್ ಹುದ್ದೆಗೆ ಬಡ್ತಿ ನೀಡಲಾಯಿತು. ಭಾರತವು ಬ್ರಿಟೀಶರಿಂದ ಸ್ವತಂತ್ರಗೊಂಡ ನಂತರ ಭಾರತೀಯ ಸೇನೆಯ ಭಾಗವಾಗಿ ಉಳಿದ ಜಾದುನಾಥ್‌ ಸಿಂಗ್ ಮುಂದೆ ಹೆಜ್ಜೆಯಿಟ್ಟಿದ್ದು ಕಾಶ್ಮೀರ ರಣಭೂಮಿಗೆ.

1947ರಲ್ಲಿ ದೇಶ ಸ್ವತಂತ್ರಗೊಂಡಾಗ, ಬ್ರಿಟೀಶ್‌ ಭಾರತದ ಭಾಗವಾಗಿಲ್ಲದ ರಾಜ ಪ್ರಭುತ್ವಗಳಿಗೂ ಸ್ವಾತಂತ್ರ್ಯ ಸಿಕ್ಕಿತ್ತು. ಅವರ ಮುಂದೆ ಒಂದು ಭಾರತದೊಂದಿಗೆ ವಿಲೀನ ಗೊಳ್ಳುವ ಇಲ್ಲವೇ ಪಾಕಿಸ್ತಾನಕ್ಕೆ ಹೋಗುವ ಇಲ್ಲವೇ ಸ್ವತಂತ್ರವಾಗೇ ಉಳಿಯುವ ಆಯ್ಕೆಗಳಿದ್ದವು. ಉಳಿದೆಲ್ಲ ರಾಜಪ್ರಭುತ್ವಗಳು ಭಾರತದೊಂದಿಗೆ ವಿಲೀನವಾಗಿತ್ತು. ಆದರೆ ಕೆಲವೇ ಕೆಲವು ಸಂಸ್ಥಾನಗಳು ಇನ್ನೂ ವಿಲೀನ ವಾಗಿರಲಿಲ್ಲ. ಅಂತಹ ಸಂಸ್ಥಾನಗಳಲ್ಲಿ ಕಾಶ್ಮೀರವೂ ಸೇರಿತ್ತು. ಜಿನ್ನಾ ಸೃಷ್ಟಿಸಿದ್ದ ಪಾಕಿಸ್ತಾನಕ್ಕೆ ಕಾಶ್ಮೀರದ ಮೇಲೆ ಕಣ್ಣಿತ್ತು. ಆದರೆ ಕಾಶ್ಮೀರದ ರಾಜ ಹರಿ ಸಿಂಗ್ ಭಾರತವನ್ನು ಸೇರಬಯಸಿದ್ದ. ಪಾಕಿಸ್ತಾನ ಕಾಶ್ಮೀರದ ಮೇಲೆ ದಾಳಿ ನಡೆಸಿತು. ಸಹಾಯಕ್ಕಾಗಿ ಹರಿಸಿಂಗ್‌ ಮೊರೆಯಿಟ್ಟಾಗ ಭಾರತೀಯ ಸೇನೆ ಕಾಶ್ಮೀರಕ್ಕೆ ಧಾವಿಸಿ ರಕ್ಷಣೆಗೆ ಮುಂದಾಯಿತು. ಪಾಕಿಸ್ತಾನಿ ಸೈನಿಕರು ದಾಳಿ ನಡೆಸಿದ ಪ್ರದೇಶಗಳಲ್ಲಿ ತೈಂಧರ್‌ ನೌಶೇರಾ ಪ್ರದೇಶವೂ ಒಂದು. ಇದೊಂದು ಆಯಕಟ್ಟಿನ ಪ್ರದೇಶ. ಈ ಪ್ರದೇಶ ಕೈ ತಪ್ಪಿದರೆ ಶತ್ರುವಿಗೆ ಶ್ರೀನಗರದಲ್ಲಿದ್ದ ವಾಯುನೆಲೆಯನ್ನು ವಶಪಡಿಸಿಕೊಳ್ಳುವುದು ಅತ್ಯಂತ ಸುಲಭವಾಗಿ ಬಿಡುತ್ತಿತ್ತು. ಆದರೆ ಭಾರತೀಯ ಸೇನೆ ಈ ತೈಂಧರ್‌ ಪ್ರದೇಶದ ಆಯಕಟ್ಟಿನ ಮೇಲೆ ಭದ್ರವಾಗಿ ಕೂತಿತ್ತು. ಶತ್ರುಗಳು ಈ ಪ್ರದೇಶವನ್ನು ವಶಪಡಿಸಿಕೊಳ್ಳುವ ಹುನ್ನಾರದಲ್ಲಿದ್ದರು.

1948 ರ ಫೆಬ್ರವರಿ 6 ರಂದು ಬೆಳಗಿನ ಜಾವ 6 ಗಂಟೆಗೇ ಶತ್ರುಗಳು ತೈಂಧರ್ ಪರ್ವತದ ಪಿಕೆಟ್‌ಗಳ ಮೇಲೆ ದಾಳಿ ಶುರುವಿಟ್ಟರು. ಭಾರತೀಯ ಪೋಸ್ಟ್‌ ಗಳನ್ನು ಗುರಿಯಾಗಿಸಿಕೊಂಡು ಒಂದೇ ಸಮನೆ ಗುಂಡು ಹಾರಿಸುತ್ತ ಗ್ರೆನೇಡ್‌ ಎಸೆಯುತ್ತ ದಾಳಿ ನಡೆಸಿದರು. ಇಲ್ಲಿನ ಪಿಕೆಟ್‌ ನಂ.2 ರಲ್ಲಿ ರಜಪೂತ್‌ ರೆಜಿಮೆಂಟಿನ 27 ಸೈನಿಕರಿದ್ದರು. ಅವರಿಗೆಲ್ಲ ನಾಯಕನಾಗಿದ್ದವನು ಜಾದೂನಾಥ್‌ ಸಿಂಗ್‌. ಆದರೆ ಶತ್ರುವಿನ ಸಂಖ್ಯೆ ಮೂರುಪಟ್ಟು ಹೆಚ್ಚಿತ್ತು. ಆದರೂ ಭಾರತೀಯ ಸೈನಿಕರು ಧೈರ್ಯದಿಂದ ಹೋರಾಟ ನಡೆಸಿದ್ದರು. ಅವರ ಈ ಹೋರಾಟದ ಹಿಂದೆ ಧೈರ್ಯವಾಗಿ ನಿಂತಿದ್ದವನು ಜಾದೂನಾಥ್‌ ಸಿಂಗ್.‌ ಗುಂಡಿನ ಚಕಮಕಿ ನಡೆದು ಅಂತೂ ಮೊದಲ ಸುತ್ತಿನಲ್ಲಿ ಬಂದಿದ್ದ ಶತ್ರುಗಳನ್ನು ಹಿಮ್ಮೆಟ್ಟಲಾಯಿತು. ಜಾದುನಾಥ್‌ ತನ್ನ 4 ಸಹ ಸೈನಿಕರನ್ನು ಕಳೆದುಕೊಂಡಿದ್ದ. ಶತ್ರು ಮತ್ತೊಮ್ಮೆ ದಾಳಿ ನಡೆಸುತ್ತಾನೆ ಎಂಬ ಸೂಚನೆ ಇವರಿಗೆ ಸಿಕ್ಕಿತ್ತು ಹಾಗಾಗಿ ಮುಂದಿನ ದಾಳಿಗಾಗಿ ಸಜ್ಜಾಗಿ ನಿಂತರು. ಅಂದುಕೊಂಡ ಹಾಗೇ ಶತ್ರು ಮತ್ತೆ ಗುಂಡಿನ ಮಳೆಗರೆದ. ಉಹೂಂ ಜಾದೂನಾಥ್‌ ಸಿಂಗ್‌ ಮತ್ತವನ ಸಹ ಸೈನಿಕರು ಶತ್ರುವಿಗೆ ಮುಂದೆ ಬರಲು ಬಿಡಲಿಲ್ಲ. ಶತ್ರುಗಳು ಎರಡನೇ ಸುತ್ತಿನಲ್ಲಿ ಹಿಮ್ಮೆಟ್ಟುವ ಹೊತ್ತಿಗೆ 9 ಜನ ಸೈನಿಕರು ಮಾತ್ರವೇ ಉಳಿದಿದ್ದರು. ಜಾದೂನಾಥ್‌ ಸಿಂಗ್‌ ನೊಂದಿಗಿದ್ದ ಲೈಟ್‌ ಮಶೀನ್‌ ಗನ್ನರ್‌ ಗೆ ಗಾಯವಾಗಿತ್ತು. ಅಲ್ಲಿದ್ದವರೆಲ್ಲರಿಗೂ ಗಾಯಗಳಾಗಿತ್ತು. ಸ್ವತಃ ಜಾದೂನಾಥ್‌ ಸಿಂಗ್‌ ನ ಬಲಗೈ ಘಾಸಿಯಾಗಿತ್ತು.

ಆದರೆ ಶತ್ರು ಮತ್ತೊಮ್ಮೆ ದಾಳಿ ನಡೆಸಲು ಅಣಿಯಾಗುತ್ತಿದ್ದ. ಇತ್ತ ಜಾದೂನಾಥ್‌ ಸಿಂಗ್‌ ನ ಪಕ್ಕದಲ್ಲಿ ಆತನ ಸಹಚರರ ಹೆಣದ ರಾಶಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸುತ್ತ ಮುತ್ತ ದಟ್ಟ ಹೊಗೆಯಾಡುತ್ತಿತ್ತು. ಉಹೂ, ಹೆದರುವಂತಿಲ್ಲ.. ಇದ್ದ ಜಾಗದಿಂದ ಹಿಮ್ಮೆಟ್ಟುವ ಮಾತೇ ಇಲ್ಲ. ಸೋತರೆ ಮುಂದೆ ಇಡೀಯ ಶ್ರೀನಗರದ ವಾಯುನೆಲೆ ಶತ್ರುವಿನ ಪಾಲಾಗುತ್ತದೆ. ಹಾಗಾಗಿ ಇದ್ದ ಸಹಚರರಿಗೇ ಧೈರ್ಯತುಂಬಿದ ಜಾದೂನಾಥ್‌ ಸಿಂಗ್‌ ಸ್ವತಃ ಮಶೀನ್‌ ಗನ್ ಹಿಡಿದು ಚಲಾಯಿಸತೊಡಗಿದ. ಆತನ ಸಹಚರರೆಲ್ಲ ಶತ್ರುವಿನ ಗುಂಡೇಟಿಗೆ ಬಲಿಯಾದರು. ಜಾದುನಾಥನ ಎದೆಗೆ ತಲೆಗೆ ಗುಂಡೇಟಾಯಿತು.ಏಕಾಂಗಿಯಾಗಿ ಹೋರಾಡತೊಡಗಿದ್ದ ಜಾದೂನಾಥ್..‌

Naik Jadunath Singh PVC - Honourpoint

ಶತ್ರು ಮುನ್ನುಗ್ಗಿ ಬರುತ್ತಿದ್ದರೆ ಮೈಯ್ಯಲ್ಲಿದ್ದ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿ ಶತ್ರುವಿನ ಮೇಲೆ ಜಾದೂನಾಥ್‌ ದಾಳಿ ಮುಂದುವರೆಸಿದ. ಸುತ್ತ ಬಿದ್ದಿರುವ ಸಹಚರರ ಹೆಣಗಳು ಆತನನ್ನು ಧೃತಿಗೆಡಿಸಲಿಲ್ಲ. ಸಹಾಯಕ್ಕಾಗಿ ಇನ್ನೊಂದು ಸೈನ್ಯ ಹಿಂದೆ ಬರುತ್ತಿತ್ತು. ಕಡೇ ಪಕ್ಷ ಅವರು ಬರುವವರೆಗಾದರೂ ಈ ಜಾಗ ಬಿಡಬಾರದು ಎಂಬುದೊಂದೇ ಧ್ಯೇಯ ಜಾದುನಾಥ್‌ ನಲ್ಲಿತ್ತು. ಹಿಂದಿನಿಂದ ಸೈನ್ಯವೇನೋ ಬಂತು ಆದರೆ ಅಷ್ಟರಲ್ಲಿ ಜಾದೂನಾಥ್‌ ಹುತಾತ್ಮನಾಗಿದ್ದ. ತಾಯಿ ಭಾರತಿಯನ್ನು ರಕ್ಷಿಸುವ ಯಜ್ಞವೊಂದಕ್ಕೆ ಆತ್ಮಾಹುತಿಯನ್ನೇ ನೀಡಿದ ಜಾದೂನಾಥ್‌ ಸಿಂಗ್‌ ಬದುಕನ್ನು ಸಾರ್ಥಕಗೊಳಿಸಿಕೊಂಡುಬಿಟ್ಟ.

ಆತನ ಈ ಅಪ್ರತಿಮ ಹೋರಾಟದ ಫಲವಾಗಿ ತೈಂಧರ್‌ ಆಯಕಟ್ಟಿನ ಪ್ರದೇಶ ಶತ್ರುಗಳ ಪಾಲಾಗುವುದು ತಪ್ಪಿತು. ಆತನ ಈ ಅಪ್ರತಿಮ ಹೋರಾಟಕ್ಕೆ, ಶೌರ್ಯಕ್ಕೆ ಆತನಿಗೆ ಮರಣೋತ್ತರವಾಗಿ ಭಾರತೀಯ ಸೇನೆಯ ಅತ್ಯುನ್ನತ ಗೌರವ ʼಪರಮ ವೀರ ಚಕ್ರʼವನ್ನು ನೀಡಿ ಗೌರವಿಸಲಾಗಿದೆ. ಇತ್ತೀಚೆಗೆ ಆತನ ಹೆಸರನ್ನು ಅಂಡಮಾನಿನ ದ್ವೀಪವೊಂದಕ್ಕಿಟ್ಟು ಆತ ಸದಾಕಾಲ ಜನರ ಮನಸ್ಸಿನಲ್ಲಿರುವಂತೆ ಮಾಡಿ ಗೌರವ ಸಲ್ಲಿಸಲಾಗಿದೆ. ಈ ವೀರನ ಎದೆಯಲ್ಲಿದ್ದ ಕಿಚ್ಚು ನಮ್ಮೆಲ್ಲರ ಎದೆಯೊಳಗಿನ ನಂದಾದೀಪವಾಗಲಿ ಎಂಬುದೊಂದೇ ಆಶಯ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!