ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ದೇಶದಲ್ಲಿ ಎಲ್ಲಿಯವರೆಗೆ ದುಡ್ಡು ಕೊಟ್ಟು ವೋಟ್ ಹಾಕಿಸಿಕೊಳ್ಳೋರು, ವೋಟ್ ಹಾಕೋರು ಇರುತ್ತಾರೋ ಅಲ್ಲಿಯವರೆಗೂ ಪ್ರಜಾಪ್ರಭುತ್ವ ಸರಿ ಆಗಲ್ಲ. ಇದೆಲ್ಲವನ್ನೂ ಕಾಲವೇ ಸುಧಾರಣೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯರ ಆಯ್ಕೆ ವ್ಯವಸ್ಥೆ ಬಗ್ಗೆ ಬಸವರಾಜ ಹೊರಟ್ಟಿ ಬೇಸರ ಹೊರಹಾಕಿದ್ದಾರೆ.
ಕಲಾಪದಲ್ಲಿ ಭಾಗಿಯಾದ ಎಲ್ಲಾ ಶಾಸಕರ ಬಗ್ಗೆ ನನಗೆ ಮಾಹಿತಿ ಗೊತ್ತಿದೆ. ಅವರು ಏನು ಚರ್ಚೆ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಎಲ್ಲರಿಗೂ ಗಾಢ್ಫಾದರ್ ಇದ್ದಾರೆ. ಆದರೆ, ನನಗೆ ಯಾರೂ ಇಲ್ಲ. ರಾಜಕೀಯಕ್ಕೆ ನನ್ನನ್ನು ಯಾರೂ ಕರೆತಂದಿಲ್ಲ. ನಾನೇ ನನ್ನ ಸ್ವಂತ ಶಕ್ತಿಯಿಂದ ರಾಜಕೀಯಕ್ಕೆ ಬಂದಿದ್ದೇನೆ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಈಗೀಗ ವಿಧಾನಪರಿಷತ್ ಗೌರವ ಕಡಿಮೆ ಆಗುತ್ತಿದೆ. ಕಲಾಪಗಳು ಸರಿಯಾಗಿ ನಡೆಯುತ್ತಿಲ್ಲ. ಎಲ್ಲದ್ದಕ್ಕೂ ಬಾವಿಗೆ ಬಂದು ಇಳಿದು ಧಿಕ್ಕಾರ ಕೂಗುವ ಅಭ್ಯಾಸ ಶುರುವಾಗಿದೆ. ನಾವೆಲ್ಲ ಅಜೆಂಡಾ ಇಟ್ಟುಕೊಂಡು ಓದಿಕೊಂಡು ಬರುತ್ತಿದ್ದೆವು. ಈಗ ಪ್ರಶ್ನೆ ಕೇಳಿ ಎರಡು ನಿಮಿಷಕ್ಕೆ ಹೊರಗೆ ಹೋಗುತ್ತಾರೆ ಎಂದು ಹೊರಟ್ಟಿ ಹೇಳಿದ್ದಾರೆ.
ಈಗ ವಿಧಾನ ಪರಿಷತ್ ಅಂದ್ರೆ ಮುನಿಸಿಪಾಲಿಟಿ ಆಗಿದೆ. ನನಗೆ ಇದರ ಬಗ್ಗೆ ಸಾಕಷ್ಟು ನೋವು ಆಗಿದೆ. ರಾಜಕೀಯ ಪುಡಾರಿಗಳು ಯಾರು ಇರ್ತಾರೋ ಅವರನ್ನು ತಂದು ತಂದು ವಿಧಾನ ಪರಿಷತ್ಗೆ ಹಾಕ್ತಾರೆ. ಪರಿಷತ್ ನಿರಾಶ್ರಿತರ ಕೇಂದ್ರದ ರೀತಿ ಆಗಿದೆ. ಕಲಾಪಗಳು ಕಾಲಕ್ಕೆ ಸರಿಯಾಗಿ ನಡೆಯಲ್ಲ. ಶಿಕ್ಷಕರ ಮತದಾರ ಕ್ಷೇತ್ರದಿಂದಲೂ ದುಡ್ಡು ತಿಂದು ವೋಟ್ ಹಾಕಿಕೊಂಡು ಬಂದಿದ್ದಾರೆ. ಶಿಕ್ಷಕರು ಸಹ ದುಡ್ಡು ತೆಗೆದುಕೊಂಡು ಮತ ಹಾಕ್ತಾ ಇದ್ದಾರೆ. ಹಾಗಾದರೆ, ರಾಜಕೀಯ ಎಲ್ಲಿಗೆ ಬರುತ್ತಿದೆ? ಎಂದು ಹೊರಟ್ಟಿ ಆಕ್ರೋಶ ಹೊರಹಾಕಿದ್ದಾರೆ.